ಬಣ್ಣದ ಸಂಜೆಯನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಸಿಡಿಲ ಚೂರೊಂದು
ಉರಿದು ಕಪ್ಪಾಯಿತು.
ಮೊರೆಯುವ ಕಡಲನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ತತ್ತರಿಸುವ ಅಲೆಯೊಂದು
ಎತ್ತರಕೆ ನೆಗೆದು ಕೆಳಗೆ ಬಿತ್ತು.
ಹೆಮ್ಮರವೊಂದನ್ನು
ನೋಡುತ್ತಾ ನಿಂತಿದ್ದೆ-
ನೋಡುತ್ತಿರುವಂತೆಯೆ
ಒಂದರ ಹಿಂದೊಂದು
ಎಲೆ ಉದುರಿ ಬೋಳಾಯಿತು.
ಹಸಿ ಮಣ್ಣಿನ ಮೇಲೆ
ನಡೆದು ಹೋಗುತ್ತಿದ್ದೆ-
ಹೋಗುತ್ತಿರುವಂತೆಯೆ
ಮುಳ್ಳೊಂದು
ಚುಚ್ಚಿ
ತಡೆದು ನಿಲ್ಲಿಸಿತು.
ಇಡಿಯಾಗಿ ಸೂರ್ಯನಿಗೆ
ಮೈಯೊಡ್ಡಿ ನಿಂತಿದ್ದೆ-
ನೋಡುತ್ತಿರುವಂತೆಯೆ
ಮೂಗಿನ ಮೇಲೊಂದು
ಹನಿ ಉರುಳಿ ಒದ್ದೆಯಾಯಿತು.
ಬಣ್ಣದ ಸಂಜೆ
ಉಕ್ಕುವ ಕಡಲು
ಉರಿಯುವ ಸೂರ್ಯ
ಮಣ್ಣು, ಮರ ಎಲ್ಲಾ
ಕಣ್ಣೊಳಗೆ ಹೂತು
ಯೌವನ ಮಾತಾಡಿತು
ಪ್ರೇಮವೆಂದು ಕರೆಯಿತು.
೨
ಆಕಾಶವ ಸೀಳಿದ ಸಿಡಿಲು
ನೆಲಕಚ್ಚಿದ ಅಲೆ, ಎಲೆ
ಚುಚ್ಚಿ ನಿಲ್ಲಿಸಿದ ಮುಳ್ಳು
ಸಿಳ್ಳು ಹೊಡೆದು ಹಣೆಯ ಮೇಲೆ
ಬೆವರ ಪೋಣಿಸಿತು.
ಸೂರ್ಯ, ಕಡಲು, ಸಂಜೆ,
ಮರ, ಮಣ್ಣು ಎಲ್ಲಾ
ಕಣ್ಣೊಳಗೇ ಹಣ್ಣಾಯಿತು
ಮುಪ್ಪು ಅದನ್ನು
ದುಃಖವೆಂದು ಬರೆಯಿತು.