ಕರ್ಪುರದಾತಿ ಬೆಳಗಿರೆರ ಹರಗೆ
ಕಾಮಿನಿಯಿರೆಲ್ಲಾ ಕರುಣಸಾಗರಗೆ || ಪ ||
ಅಪ್ಸರ ಸ್ತ್ರೀಯರು ಹರುಷಮನಸದಿ
ರೂಪ ಲಕ್ಷಣವಂತರೆಲ್ಲರು
ಮುಪ್ಪರ ಮನ ಮುಂದಿಟ್ಟು ಮಹಾಗುರು
ಸರ್ಪಭೂಷಣ ಸಾಂಬಗೆ || ಅ. ಪ. ||
ವಾರಿನೋಟದ ವನಜಾಕ್ಷಿಯರು
ಚಾರುತರದ ಚನ್ನಿಗ ಪ್ರಾಯದವರು
ತೋರುತಿರ್ಪ ಒಳ್‍ಕಮಲಗಂಧಿಯರು
ಸಾರಸಾಕ್ಷಿಯರು ಮದಗಜಗಮನಿಯರು
ನಾರಿಯರು ನಯನದಿಂದ ನಿರ್ಮಲಾಕಾರ
ಕಣ್ಮನ ದಣಿಯದೆ ನಿಜ ರಾಗದಲಿ
ಸರಿಗಮವ ಪಾಡುತ ಮಾರಮಹೇಶನಿಗೆ || ೦ ||
ಬಾಲಕೀರ ವಾಣಿಯರು ಭಕ್ತಿಯಲಿ
ನೀಳಕುಂತಳೆಯರು ನಿರುತದಲಿ
ವಾಲಿ ಬುಗುಡಿ ಬಾವುಲಿ ಕರ್ಣದಲಿ
ಮೇಲು ಮುತ್ತಿನ ಹಾರ ಕೊರಳಿನಲಿ
ಕೀಲಗಡಗವು ಹರಡಿ ಹಸ್ತದಿ
ಮೇಳೈಸಿ ಕೊಂಡಾರುತಿಯ ಪಿಡಿದು ಶುಭ
ಸಾಲ ದೀವಿಗಿ ಬೆಳಕಿನೊಳು
ಸುಶೀಲೆಯರು ಪ್ರಭುಲಿಂಗಗೆ || ೨ ||
ಚೆನ್ನಚಲುವ ಚಿತ್ರದ ಗೊಬೆಯ ತೆರದಿ
ಕನ್ನೆಯರು ಕೂಡಿ ವತ್ತರದಿ
ರನ್ನ ಕಲಶಗಿಂಡಿಗಳ ವಿಸ್ತರದಿ
ಹೊನ್ನು ತಳಗಿಗಳ ಪಿಡಿದೆತ್ತಿ ಕರದಿ
ಎನ್ನೊಡೆಯ ಶಿಶುನಾಳಕೊಪ್ಪುವ
ಶೂನ್ಯ ಸಿಂಹಾಸನದಿ ಸದ್ಗುರು
ಸನ್ನಿಧಾನಕೆ ಬಂದು ಸಖಿಯರು
ಓಂ ನಮಃ ಶಿವ ಎನ್ನುತಲಿ || ೩ ||
*****