ಹೆಚ್ಚಿಗೇನು ಬಯಸಿರಲಿಲ್ಲ
ಆ ಜನ
ಅಂಬಲಿಗೆ ಅನ್ನ ಬೆರೆಸಿ
ಕುದಿಸಿಟ್ಟು ಕುಡಿದರೆ
ಅಷ್ಟೇ ಸಾಕು ಅಮೃತದ ಪಾನ
ಒಡೆಯನ ಗದ್ದೆಗೆ
ಒಂದಿಷ್ಟು ಗೊಬ್ಬರ
ಎರೆದರೆ ಸಾಕು
ಆದಿನ ಎಸೆದ
ಎರಡಾಣೆಗೆ ತೃಪ್ತ ಮನ
ಹೊತ್ತು ಮರೆ ಸರಿಯೇ
ತಿಂಗಳಿಣುಕುತ್ತಿರೆ
ಒಂದಷ್ಟು ಬಿಸಿ ಬಿಸಿ ನೀರು
ಎಣ್ಣೆ ತಿಕ್ಕಿ ಹೊಯ್ದರೆ ಸಾಕು
ಮೈದಣಿವಿಗೆ ಅಭ್ಯಂಗ ಸ್ನಾನ
ಇರುಳುಗುತ್ತಲೆಯಲ್ಲಿ
ಚಿಮಣಿ ಬುಡ್ಡಿಯ ಹಚ್ಚಿ
ಒಂದೆರಡು ಜಪ ಭಜನೆ ಸಾಕು
ವಿಠಲನ ಸಾರ್ಥಕ ಆ ದಿನ
ಕುಚಲಕ್ಕಿ ಅನ್ನ
ಬಡವರ ಬಂಧು
ಭೂ ತಾಯಿ ಮೀನ ಪಳದಿಯ
ಸವಿದರೆ ಸಾಕು
ಮೃಷ್ಟಾನ್ನ ಭೋಜನ
ಮಡಲಿನ ಹಂದರದಿ
ಸಗಣಿ ಸಾರಿಸಿದ ತಾವಿಗೊರಗಿ
ಕಂಬಳಿ ಹೊದ್ದು
ಮೈಮರೆತು ಕಣ್ಣ ಮುಚ್ಚಿದರೆ ಸಾಕು
(ಫ್ಯಾನು ಎರ್ ಕಂಡಿಷನ್
ತೆಗೆದು ಒಲೆಯೊಳಗೆ ಹಾಕು)
ನಿದ್ರಾದೇವಿಯ ಹಿತವಾದ
ಆಲಿಂಗನ
ಆಹಾ ಎಂಥ ಬದುಕು ಕಣಾ
ಹಳಹಳಿಸಿ ಬಯಸಿದರೂ
ಸಿಕ್ಕದು ಇಂದಿಗದು ಕನಸು ಕಣಾ