ತಾರೆಯರೇ ಮಿಣುಮಿಣುಕಿ
ಅಣಕಿಸಿದ್ದು ಸಾಕು.
ಚಂದ್ರಮನೇ, ನಿನ್ನ ನಗುವಿಗೆ
ಮೂರು ಕಾಸು.
ಕೋಲ್ಮಿಂಚುಗಳೇ
ಎಷ್ಟು ಬಗೆಯ ಚಿತ್ತಾರ ಬರೆಯುತ್ತೀರಿ ನೀವು?
ಚಣಕೊಮ್ಮೆ ವೇಷ
ಬದಲಾಯಿಸಲೇಬೇಕೆ, ಮೋಡಗಳೇ?
ಕಲಕಲಿಸದಿದ್ದರೆ ನಿದ್ದೆ ಬರುವುದಿಲ್ಲವೆ, ಜಲವೆ?
ಕುಹೂ – ಕುಹೂ ಎಂದು ಕಿರುಲಬೇಡ, ಕೋಗಿಲೆಯೇ…
ಖುಷಿಯಿಂದ ಕೂಗುತ್ತೇನೆ ಕಿವಿಗೊಟ್ಟು ಕೇಳಿ-
‘ಕವನ ಹೊಸೆಯಲಿಕ್ಕೆ ಬೇಡ… ನೀವಿನ್ನು’
೨
ಇಲ್ಲಿ…..
ನನ್ನ ನೆಲೆಯಲ್ಲಿ, ಕೆಂಪೆಲೆಗಳ ನಡುವೆ
ಅರಳುತ್ತವೆ ಹಸಿರು ಹೂಗಳು.
ಹೆಪ್ಪುಗಟ್ಟಿದ ಮೌನದಲ್ಲಿ
ಗುಣುಗುಣುಸಿ ಹಾಡುತ್ತವೆ ಗೂಬೆಗಳು.
ಹೆಜ್ಜೆ ಹಾದಿಯ ತುಂಬ
ಕುಲುಕುಲು ನಗುತ್ತದೆ ಇರುಳು.
ಇಲ್ಲಿ….. ಕನಸುಗಳೂ ಕಾಡುವುದಿಲ್ಲ.
ನೆನಪುಗಳು ಮರುಕಳಿಸುವುದಿಲ್ಲ.
ಕಲ್ಪನೆಗೂ ಮೀರಿದ ಬದುಕು,
ಕವನಿಸಲಿಕ್ಕೆ ಕೈ ತುಂಬ ಸರಕು.
ಹೀಗಿರುವಾಗ ನೀವೇಕೆ ಬೇಕು ಹೇಳಿ?