ನನ್ನ ಸೌಂದರ್ಯವನ್ನು
ಮೆಚ್ಚಿಕೊಂಡ ಜನ
ನನ್ನ ಸರಳತೆಯನ್ನು
ಮೆಚ್ಚಿಕೊಂಡ ಜನ
ನನ್ನ ದುಃಖ ಎಷ್ಟೆಂದು ಕೇಳಲಿಲ್ಲ.
ನನ್ನನ್ನು ಪ್ರೀತಿಸಿದ ತಂದೆ
ನನ್ನನ್ನು ಸಲಹಿದ ತಾಯಿ
ನನ್ನ ಆಸೆಗಳೇನು
ಎಂದು ಕೇಳಲಿಲ್ಲ.
ನಾನು ನೀಲಿ ನಕಾಶೆಯೊಳಗೆ
ಹೊಳೆಯುವ ಕನಸುಗಳನ್ನು
ಗುರುತಿಸುತ್ತಿರುವಾಗ
ನನ್ನ ಜೀವದ ಹುಡುಗ
‘ನೀನೆಷ್ಟು ಮುಗುದೆ’
ಎಂದು ವಿಷಾದದಿಂದ ನಕ್ಕ.
ಆವತ್ತೆ ನನಗೆ ಗೊತ್ತಾಯಿತು,
ಈ ಜಗತ್ತಿನಲ್ಲಿರುವುದು
ಕೊಳೆತ ಹೃದಯಗಳು ಮಾತ್ರ.
ಈ ಜಗತ್ತಿನಲ್ಲಿರುವುದು ಹುಳಿತ ಕಣ್ಣುಗಳು ಮಾತ್ರ.
ಅಂದಿನಿಂದಲೆ ನಾನು
ಎಲ್ಲರ ಬಳಿ ಕಣ್ಣೀರು
ಬೇಡಲು ಶುರುಮಾಡಿದೆ.
ಎಲ್ಲರ ಕನಸುಗಳನ್ನು
ಕುತೂಹಲಿಯಾಗಿ ನೋಡಿದೆ.
ನನ್ನೆದೆಯೊಳಗೆ
ಹರಳುಗಟ್ಟುತ್ತಿತ್ತು ದುಃಖ
ಬೆಟ್ಟವಾಗುತ್ತಿತ್ತು ದುಃಖ
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಬೆಟ್ಟ ಕಣ್ಣೀರಿನದು
ನನ್ನದು ಹಾಗು ನಿಮ್ಮದು.
ಬೆಟ್ಟ ಕರಗಿ ಪ್ರವಾಹವಾಗಿ
ಹರಿಯುತ್ತಿತ್ತು ದುಃಖ.
ನಾನು ಎಲ್ಲರಿಗೂ ಕೂಗಿ ಹೇಳುತ್ತಿದ್ದೆ
ನೋಡಿ-
ಈ ಪ್ರವಾಹ ಕಣ್ಣೀರಿನದು, ನನ್ನದು ಹಾಗೂ ನಿಮ್ಮದು.
ಎಲ್ಲ ನಕ್ಕರು, ಹೊರಟೇ ಹೋದರು.
ನಾನೊಬ್ಬಳೆ ಆಗಿದ್ದೆ
ಜೊತೆಗೆ ಬೆಟ್ಟ-ಪ್ರವಾಹ.
ಕೊನೆಗೂ ನೆನಪಾಯಿತು
ಹೌದು
ಅದು ಅವನದೆ ಮುಖ.
ಅದು ಕೇಳುತ್ತಿತ್ತು
ಕೊಡು ನಿನ್ನ ದುಃಖ
ಕೊಡು ನಿನ್ನ ದುಃಖ.