ಕಾಲರಾಯನ ಗರ್ಭದಿಂದ
ಸೀಳಿ ಬಂದೆನು ದೇಹದೊಡನೆ
ವೇಳೆ ಮುಗಿದರೆ ನಿಲ್ಲಲಾರೆನು
ತಾಳು ನಿನ್ನನ್ನು ನುತಿಪೆನು
ನನ್ನ ಹಿಂದಿನ ಸುಕೃತ ಫಲವೊ
ನಿನ್ನ ಕರುಣದ ಸಿದ್ಧಿಬಲವೊ
ಮಾನ್ಯ ಗುರು ಸರ್ವೇಶನೊಲವಿಂ
ಮಾನವತ್ವವ ಪಡೆದೆನು
ಮಾರುಹೋದೆನು ಜಗವ ನೋಡಿ
ಸೂರೆಗೊಂಡೆನು ಸುಧೆಯನಿಲ್ಲಿ
ಯಾರು ಅರಿಯದ ನಿನ್ನ ಕೃತಿಗಿದೊ
ಸರ್ವಶಕ್ತನೆ ಮಣಿವೆನು
ನಿತ್ಯವೆಂಬಾ ಜ್ಞಾನದೊಡನೆ
ಸತ್ಯವೆಂಬಾ ಸೊಡರ ಹೊತ್ತು
ನೂತ್ನ ನೂತನವಾಗಿ ಇಲ್ಲಿ
ಓಡುತಿರುವಳು ಪ್ರಕೃತಿಯು
ಯುಗ ಯುಗಂಗಳ ಸವರಿ ಬಂದು
ಬಗೆ ಬಗೆಯ ಸುದ್ದಿಗಳ ತಂದು
ಸಿಗದೆ ಯಾರನು ಲೆಕ್ಕಿಸದೆ ತಾ-
ನೋಡುತಿರುವಳು ಪ್ರಕೃತಿಯು
ಮಳೆಯ ರೂಪವನೊಮ್ಮೆ ತಾಳಿ
ಬೆಳೆಯ ಗುಣವನು ಒಮ್ಮೆ ತಾಳಿ
ಇಳೆಯ ಜೀವರನೆಲ್ಲ ಸಲಹುತ
ಓಡುತಿರುವಳು ಪ್ರಕೃತಿಯು
ಹರಿವ ಝರಿಗಳ ಮಾಲೆ ಧರಿಸಿ
ಧರೆಯ ತರುಗಳ ಪುಷ್ಪ ಮುಡಿದು
ಗಿರಿಯ ಧ್ವಜಗಳನೆತ್ತಿ ಹಿಡಿದು
ಓಡುತಿರುವಳು ಪ್ರಕೃತಿಯು
ಚೆನ್ನೆ ಚೆಲುವೆಯು ಜಗವ ಬೆಳಗಿ
ತನ್ನ ಬಾಹುಗಳೊಳಗೆ ಅಪ್ಪಿ
‘ಬನ್ನಿರೋ ನನ್ನೊಡನೆ’ ಎಂದು
ಓಡುತಿರುವಳು ಪ್ರಕೃತಿಯು
ಸ್ವರ್ಗ ನರಕವನಿಲ್ಲೆ ಸೃಜಿಸಿ
ಆರ್ಘವೆನಿಸುವ ಋತುವ ನಿಲಿಸಿ
ದಿಗ್ಗಜಂಗಳನೆಲ್ಲ ಬಳಸಿ
ಓಡುತಿರುವಳು ಪ್ರಕೃತಿಯು
ಸ್ನಿಗ್ಧಮಯದಾ ಒಡಲಿನೊಳಗೆ
ಪ್ರಾಜ್ಞರನು ಆದರದಿ ಹೊತ್ತು
ಸಗ್ಗದೂಟವ ಜಗಕೆ ಉಣಿಸುತ
ಓಡುತಿರುವಳು ಪ್ರಕೃತಿಯು
ಲಗ್ಗೆ ಎಬ್ಬಿಸುತೊಮ್ಮೆ ಕುಣಿದು
ನುಗ್ಗಿ ಜಯಿಸುತಲೊಮ್ಮೆ ನಲಿದು
ಅಗ್ನಿಜ್ವಾಲೆಯನೊಮ್ಮೆ ಉಗಿದು
ಓಡುತಿರುವಳು ಪ್ರಕೃತಿಯು
ಸಾರಸುಗುಣೆ ಸರ್ವಶಕ್ತ
ಧೀರೆ ಬಹು ಲಾವಣ್ಯಪೂತೆ
ಕಾರಣಾನ್ವಿತೆ ಅಂತ್ಯರಹಿತೆ
ಓಡುತಿರುವಳು ನಿರುತವು
ದೇವ ನಿನ್ನಯ ಸೃಷ್ಟಿಯೊಳಗೆ
ಆವ ಭಾಗವ ತಿಳಿಯಲಳವು
ಕೋವಿದನೆ ಈ ಪ್ರಕೃತಿ ಮಾತೆಗೆ
ಜನಕಜೆಯು ಕರ ಮುಗಿವಳು
*****