ಪೂಜಾರಿ

ದೇವರ ಸತ್ಯವು ಊರಲಿ ಹರಡಿತು
ಬಂದರು ಭಕ್ತರು ತಮತಮಗೆ |
ಹೂವನು ಕಾಯನು ಹಣ್ಣನು ಜೋಡಿಸಿ
ತಂದರು ಹರಕೆಯ ಬೇಡಲಿಕೆ.

ದೇವರ ಮಹಿಮೆಯು ಹೆಚ್ಚಾಗಿರುವುದು
ಕಿರುಗುಡಿ ಬಾಗಿಲು ಬಿಗಿದಿಹುದು |
ದೇವರ ನೋಡಲು ಕಂಡಿಗಳಿರುವುವು
ಕಿರುಬಾಗಿಲ ಬೆಳಕಂಡಿಗಳು.

ಬಂದವರೆಲ್ಲರು ಕಾಯಿಗಳೊಡೆವರು
ಹೊರಗಡೆ ಕರ್ಪೂರ ಹಚ್ಚುವರು |
ತಂದಿಹ ಮುಡುಪನು ದೇವರು ಕೊಳ್ಳಲು
ಹೊರಗಡೆ ತಪ್ಪದೆ ಬಿಟ್ಟಿಹರು.

ಸಂಕಟಪಟ್ಟವರೊಬ್ಬರೆ ಬಂದರೆ
ಸಂಜೆಯಲೇಕಾಂತದಲಿ |
ಬಿಂಕವ ಬಿಟ್ಟಾ ದೇವರು ನುಡಿವನು
ಅಂಜಿಕೆ ಕಳೆವನು ನಲ್ಮೆಯಲಿ.

ಪೂಜಕನಾವನೊ ಕಣ್ಣಲಿ ಕಾಣರು
ಅನುದಿನ ಪೂಜೆಯು ನಡೆಯುವುದು |
ಜಾಜಿಯ ಮಲ್ಲಿಗೆ ಹೊಸ ಹೂಮಾಲೆಯು
ದಿನ ದಿನ ಕೊರಳಲಿ ಮೆರೆಯುವುದು.

ಸತ್ಯದ ದೇವರು ಏಳಡಿ ಎತ್ತರ
ಮೂರಡಿ ಪೀಠದ ಮೇಲಿಹನು |
ನಿತ್ಯದ ಪದವಿಯನೀಯುವ ದೇವರು
ಮೀರಿಹನೆಲ್ಲರ ಮಹಿಮೆಯನು.

ಉಟ್ಟಿಹ ಪೀತಾಂಬರ ಮಿರುಮಿರುಗುತ
ಭಕ್ತರ ಮನವನು ಸೆಳೆಯುವುದು |
ತೊಟ್ಟಿಹ ಆಭರಣವು ಝಗಝಗಿಸುತ
ಭಕ್ತರ ಕಂಗಳ ಕೊರೆಯುವುದು.

ದೇವರ ಮುಂಗಡೆ ನಂದಾದೀವಿಗೆ
ದೀಪಸ್ತಂಭವು ಬೆಳಗುವುದು |
ಜೀವನ ದೇವನ ಸತ್ಯಸ್ವರೂಪ
ದೀಪ್ತಿಯೆ ಎಂಬುದ ತೋರುವುದು.

ದೇವರ ಮುಖವನ್ನು ನೋಡುತ ನಿಂದನು
ಕಣ್ಣೀರ್ಗರೆಯುತ ಪೂಜಾರಿ !
“ಏವೆನು ದೇವರೆ!” ಎನ್ನುತ ಬಿಕ್ಕುತ
ಕಣ್ಣೀರ್ಗರೆದನು ಪೂಜಾರಿ.

“ಬೆನ್ನಲಿ ನಿಲ್ಲುತ ಮೋಸವ ಮಾಡುವೆ
ಇಲ್ಲದ ಭರವಸೆ ನೀಡುವೆನು |
ನಿನ್ನಯ ಸೇವೆಯ ನೆಪದಲ್ಲಿ ದಿನವೂ
ಬಳ್ಳದ ಪಾಪವ ಗಳಿಸುವೆನು.

ದೇವರು ಆಡಿದನೆಂದೇ ನಂಬುತ
ಭಕ್ತರು ಧೈರ್ಯವ ತಾಳುವರು |
ಕಾವನು ತಮ್ಮನು ಕಷ್ಟಗಳಿಂದಲಿ
ಮುಕ್ತರು ತಾವೆಂದರಿಯುವರು.

ಏನೇನಾದರು ಆಡಲು ಬಾರದು
ನಿಲ್ಲುವೆ ಹಿಂಗಡೆ ನಾನೆಂಬೆ |
ಮೌನದಿ ಕೇಳುತ ದುಃಖದ ಹೊರೆಯನು
ಸೊಲ್ಲದು ಬರುವುದು ಬಾಯಿಂದೆ.

ನಿನ್ನಿಂದಲ್ಲವೆ ಈ ಬೂಟಾಟಿಕೆ
ಮೋಸದ ಜೀವನವು |
ನಿನ್ನಿಂದಲ್ಲವೆ ಗುಡಿ ಗೋಪುರಗಳು
ಠಕ್ಕನ ವಾಸದ ಮಂದಿರವು.

ಬಡವರು ನಿನಗೆಂದೇ ಮುಂದೊಟ್ಟಿದ
ಪಣ್ಗಳ ಕಾಯ್ಗಳ ರಾಶಿಯನು |
ಆಡಿದ ಮಾತಿಗೆ ತಪ್ಪದೆ ತಂದಾ
ನಾಣ್ಯದ ಮುಡುಪಿನ ಗುಡ್ಡೆಯನು;

ಎಲ್ಲವ ನೋಡಿಯು ಮೌನದಿ ನಿಂದು
ಇಕ್ಕಿದೆ ಶೂಲವ ಎನ್ನೆದೆಗೆ |
ಸುಳ್ಳಿನ ಬಾಳ್ಕೆಗೆ ಲಂಚವ ಕೊಡಿಸಿ
ಠಕ್ಕನ ಮೆಲ್ಲನೆ ಮಾಡಿಸಿದೆ.

ನಾಳೆಯೆ ಬರುವರೊ ಇಂದೇ ಬರುವರೊ
ದುಕ್ಕವ ಕಣ್ಣಲಿ ಸೂಸುತ್ತ !
ಬಾಳನು ಕೆಡಿಸಿದ ಮೋಸದ ದೇವರು
ಮುಕ್ಕನ ಹೂಳೆಂದಾಡುತ್ತ ;

ಪೊರೆಯುವೆನೆನ್ನುತ ಮುಡುಪನು ತಿಂದನು
ನಾಚದೆ ಹೊಟ್ಟೆಯ ಕುದಿಸಿದನು |
ಕರುಣಾಹೀನಗೆ ಕರುಣವ ತೋರದೆ
ಆಚೆಗೆ ತಳ್ಳಿ ದೇವರನು.

ಎಂದವರೆಲ್ಲರು ದುಃಖದಿ ಕೋಪದಿ
ಬಂದೀ ಗುಡಿಯನ್ನು ಮುತ್ತುವರೊ |
ಇಂದೇ ಹೊತ್ತಿಸಿ ಗುಡಿಯನ್ನು ಹೊತ್ತಿಸಿ
ಅಂದದ ಮೂರ್ತಿಯ ಸೀಯುವರೋ

ನಿನ್ನಿಂದಲ್ಲವೆ ಎನಗೀ ಪಾಪವು
ಹೃದಯವ ಬೇಯಿಪ ಸಂಕಟವು |
ನಿನ್ನಂತೆಯೆ ನಾನೂ ಕಲ್ಲಾದರೆ
ಒದಗದು ಎನಗೀ ವೇದನೆಯು.

ನಾಳೆಯೆ ನಿನ್ನಿ ಮೂರ್ತಿಯನೊಡೆವೆನು
ಭಕ್ತರಿಗರಿಪೆನು ಮೋಸವನು |
ಮೂಳನ ತಪ್ಪನ್ನು ಮನ್ನಿಸಿರೆನ್ನುತ
ಭಕ್ತರ ಕಾಲಲಿ ಬೀಳುವೆನು.

ಬೇಡುವೆನವರಾ ಪಾದದ ಧೂಳಿಯ
ಇಕ್ಕುತ ಶಿರದಲಿ ಬೇಡುವೆನು |
ಕೋಡಿಯ ಹರಿಯಿಸಿ ಕಣ್ಣೀರಿಂದಲಿ
ಭಕ್ತರ ಪದಗಳ ತೊಳೆಯುವೆನು.”

ಎನುತಾ ದೇವರ ನೋಡುತ ನಿಂದನು
ದುಃಖದಿ ತುಂಬಿದ ಪೂಜಾರಿ |
ಏನೊಂದುತ್ತರ ಬಾರದೆಯಿರಲು
ದುಃಖದಿ ಹೊರಟನು ಪೂಜಾರಿ.

ಹಣ್ಣೂ ಕಾಸೂ ಕಾಯಿಗಳೆಲ್ಲವ
ತಂದನು ದಿನದಿನ ತರುವಂತೆ |
ಕಣ್ಣೂ ಕಾಲೂ ಇಲ್ಲದ ಬಡವರ
ಮಂದಿಗೆ ಕೊಟ್ಟನು ಬಿಡದಂತೆ.

ದೇವರ ಒಡವೆಯ ದೇವರಿಗೊಪ್ಪಿಸಿ
ಹೊತ್ತಿಹ ಭಾರವನಿಳುಹಿದನು |
ನೋವನು ಮಾಣಿಸಿ ಆರಿಗು ಕಾಣದೆ
ಕತ್ತಲೆ ದಾರಿಯ ಹಿಡಿದಿಹನು.

ಮರುದಿನ ತಪ್ಪದೆ ಸುತ್ತಿಗೆ ಹಾರೆಯ
ತಂದನು ದುಃಖದಿ ಪೂಜಾರಿ |
ಕಿರುಬಾಗಿಲ ಬೀಗವ ಬಿಗಿದಿಕ್ಕುತ
ನಿಂದನು ಒಳಗಡೆ ಪೂಜಾರಿ.

ಶಿಲ್ಪಿಯು ಮಾಡಿದ ಭಕ್ತಿಯ ಕಾಣಿಕೆ
ಚೆಲುವನು ತುಂಬಿದ ಮೂರ್ತಿಯದು |
ಕಲ್ಪಿಸಿ ದೇವರ ಹೃದಯದಿ ಕಾಣುತ
ನಲವಿಂ ಮಾಡಿದ ಮೂರ್ತಿಯದು.

ಸುತ್ತಿಗೆ ಹಾರೆಯ ಭೀತಿಯು ತೋರದು
ಸೌಮ್ಯದ ಮೂರ್ತಿಯ ಮುಖದಲ್ಲಿ |
ಚಿತ್ತದಿ ನಗುವಂತಾ ಬಾಯ್ದೆರೆಗಳು
ರಮ್ಮದಿ ತೆರದಿವೆ ಮುಖದಲ್ಲಿ.

ಪೆರೆನೊಸಲಲಿ ತಿದ್ದಿದ ಮುಂಗೂದಲು
ಹಿರಿಯ ಕಿರೀಟದ ಮಣಿಕಾಂತಿ |
ಎರಡೂ ಕಿವಿಯಲಿ ತೂಗುವ ಕುಂಡಲ
ಕೊರಳಲಿ ಮೌಕಿಕ ಸಿತಕಾಂತಿ.

ನೋಡುತ ನಿಂದನು, ನೋಡುತ ನಿಂದನು
ಸುತ್ತಿಗೆ ಹಿಡಿದಾ ಪೂಜಾರಿ |
ಕೂಡಿತು ಕಣ್ಣಲಿ ಜಾರಿತು ಬಿಸಿಹನಿ
ಅತ್ತಲೆ ತಿರುಗಿದ ಪೂಜಾರಿ.

ಹೊರಬಾಗಿಲಲೊಬ್ಬರು ಬರೆ ಕಾಣುತ
ಹಿಂಗಡೆ ಹೋದನು ಭೀತಿಯಲಿ |
ಬರುವರು ಆರೋ ನೋಡುವೆನೆನ್ನುತ
ಹಿಂಗದೆ ನೋಡಿದ ಮರುಕದಲಿ.

ಕಾಣಲು ಬಂದಳು ಸಾದ್ವೀಮಣಿಯು
ಮಡಿಲಲ್ಲಿರುವುದು ಎಳಗೂಸು |
ಪ್ರಾಣದ ರತ್ನ ವನಪ್ಪುವ ತೆರದಲಿ
ಅಡಗಿಸಿ ಅಪ್ಪಿಹ ಎಳಗೂಸು.

ಒಳಗುಡಿ ಹೊಸ್ತಿಲ ಮೇಲದನಿಟ್ಟಳು
ನೋಡಿದಳಾ ಜೀವದ ಕಣಿಯ |
ಘಳಿಲನೆ ದೇವಗೆ ತಾ ಪೊಡಮಟ್ಟಳು
ಬೇಡಿದಳಾ ಲೋಕದ ದಣಿಯ.

“ಆರನು ಹೆತ್ತೆನು ಗಂಡೂ ಹೆಣ್ಣೂ
ಕುಳಿಯಲಿ ಇಟ್ಟೆನು ಆರನ್ನು |
ಹೊರುವುದು ತಪ್ಪದು ಹೆರುವುದು ತಪ್ಪದು
ಬೆಳೆದುದ ಕಾಣೆನು ಒಂದನ್ನು.

ಇದಗೊ ದೇವರೆ, ಏಳನೆಯ ಮಗುವು
ನಿನ್ನಿ ಮಡಿಲಲಿ ಹಾಕಿಹೆನು |
ಇದನೆಂದಾದರು ಬೆಳಸುವ ಭಾರ
ನಿನ್ನಯ ಮೇಲೆಯೆ ಇಟ್ಟಿಹೆನು.

ಕಳ ಕಳ ನಗುವಾ ಎಂತಹ ಚೆಲುವಿನ
ರನ್ನದ ಮಗುವೆಂಬುದ ನೋಡು |
ಪುಳಪುಳಕನೆ ಕನ್ನೈದಿಲೆ ಕಂಗಳ
ನಿನ್ನೆಡೆ ತಿರುಹುತ್ತಿದೆ ನೋಡು ;

ಹೃದಯದ ಉತ್ಸವ ಚೆಲುವಿನ ಪುತ್ತಳಿ
ಎನ್ನಯ ತಂದೆಯೆ ನುಡಿಯುವೆನು |
ಇದನೊಂದಾದರು ಬೆಳೆಯಿಸಿಕೊಟ್ಟರೆ
ಚಿನ್ನದಿ ಮಗುವನು ಸಲಿಸುವೆನು.”

ಆಡಿದ ಮಾತನು ಕೇಳುತ ಕೇಳುತ
ಕಣ್ಣೀರ್ ತುಂಬಿದ ಪೂಜಾರಿ |
ಬಾಡಿತು ಮುಖವದು ಕಣ್ಣೀರ್ ಹರಿಯಿತು
ಹೆಣ್ಣಿಗೆ ನುಡಿದನು ಪೂಜಾರಿ.

“ಅಳದಿರು ಮಗಳೆ ಅಳದಿರು ತಾಯೀ
ನಿನ್ನೀ ಮಗುವನು ಸಲಹುವೆನು |
ಬೆಳೆಯುವ ಮಕ್ಕಳನಿನ್ನೂ ಕೊಡುವೆನು
ರನ್ನದ ಮಕ್ಕಳ ಪೊರೆಯುವೆನು.”

ಆಡಿದ ಭರವಸೆ ಕೇಳುತಲೆದ್ದಳು
ಹರುಷದಿ ಕಂಗಳು ತುಂಬಿರಲು |
ಜೋಡಿಸಿ ಕೈಗಳ “ಸತ್ಯದ ದೇವರೆ
ಕರುಣದಿ ಪೊರೆಯೈ” ಎಂದವಳು

ಮಗುವನ್ನು ಎತ್ತುತ ತನ್ನೆದೆಗಪ್ಪುತ
ಚುಂಬಿಸಿ ಮುಖವನ್ನು ನೋಡುತ್ತ |
ನಗುವನು ಬೀರುತ ದೇವಗೆ ತೋರುತ
ಕುಂಬಿಸಿ ನಡೆದಳು ಮನೆಯತ್ತ.

“ಅಯ್ಯೋ ದೇವರೆ!” ಎನ್ನುತ ನಿಂದನು
ಎಂತೀ ಮಗುವನು ಸಲಹುವೆನು |
ಹುಯ್ಯಲು ಇಡುವಾ ಸಾಧ್ವಿಯ ಮಕ್ಕಳ
ಪಂತದಿ ಬೆಳೆಯಿಸಿ ನಡೆಸುವೆನು.

ಸೆರಗಿನ ಕೊನೆಯಲ್ಲಿ ಕಣ್ಣೀರೊರಸುತ
ಮತ್ತೊಬ್ಬಳು ಸಾದ್ವೀಮಣಿಯು |
ಕಿರುಬಾಗಿಲ ಬಳಿ ನಡುಗುತ ಬಂದಳು
ಕುತ್ತಿಗೆ ಹಿಡಿಯಿತು ದುಃಖವದು.

ನುಡಿಯಲು ಆರಳು, ನಿಲ್ಲಲು ಆರಳು
ಬಾಗಿಲ ಮೆಲ್ಲನೆ ನೆಮ್ಮಿದಳು !
ಇಡಿದಾ ದುಃಖದಿ “ದೇವರೆ!” ಎಂದಳು
ಸಾಗವು ಮುಂದಿನ ಮಾತುಗಳು.

ಮಾತಿಗೆ ಮೀರಿದ ದುಃಖವನೆಂತೋ
ತಡೆಯುತ ಸಾಧ್ವಿಯು ಸೆರಗಿನಲಿ |
ದಾತಗೆ ದೇವಗೆ ತುಂಬಿದ ಕಣ್ಣಲಿ
ನುಡಿದಳು ಮೆಲ್ಲನೆ ಬಿಕ್ಕುತಲಿ.

“ಕೊಳ್ಳೈ ದೇವರೆ, ಎನ್ನಿ ಪ್ರಾಣವ
ಉಳುಹಿಸಿಕೊಡು ಪತಿದೇವನನು |
ಒಳ್ಳಿತ ಮಾಡೈ, ಕರುಣವ ತೋರೈ
ಕಳೆಯದೆ ಮಂಗಳಸೂತ್ರವನು.

ತಳ್ಳದಿರೆನ್ನನು ದುಸ್ಸಹ ನರಕಕೆ
ದಳ್ಳುರಿ ವೈಧವ್ಯಕೆಯಿನ್ನು !
ಕೊಳ್ಳೈ ದೇವರೆ ಸಾದ್ವಿಯ ಜೀವವ
ಕೊಳ್ಳದೆ ಜೀವದ ಪತಿಯನ್ನು.

ಬಾರೈ ದೇವರೆ, ಎನ್ನಯ ಬಾಳಿಗೆ
ನಂಬಿಕೆಯೀಗಲೆ ನುಡಿಯುವುದು |
ಆರುವ ದೀಪಕೆ ಆಯುವ ತೈಲವ
ತುಂಬಿಸಿ ಬೆಳಗಿಸಿ ಕರುಣಿಪುದು.

ಸತಿಯಳ ಜೀವವು ಕವಡೆಯು ಬಾಳದು
ಉಳಿದರು ಹೋದರು ಜಗವಳದು |
ಪತಿಯೆಂಬುವ ಸೌಭಾಗ್ಯದ ಸೂರ್ಯನು
ಮುಳುಗಲು ಕತ್ತಲೆ ಮುಸುಕುವುದು.

ಮರಳೆನು ಮನೆಕಡೆ ಎದೆ ನಡುಗುವುದು
ಮುತ್ತೈದೆಯ ಸಾವಿಚ್ಛಿಪೆನು |
ತೊರೆದಿಹ ಭಯವನು ಸಾವಳಿಗೇಕೆ ?
ಇತ್ತೀ ಕೊಳದಲೆ ಬೀಳುವೆನು.”

ಅಂಗನೆಯಳುತಿರೆ ಮರೆಯಲಿ ಅರ್ಚಕ
ಬಿಕ್ಕುತ ಬಿಕ್ಕುತ ನಿಂದಿಹನು |
ಕಂಗಳ ನೀರನು ಮಿಡಿಯುತ ತೊಡೆಯುತ
ಅಕ್ಕರೆ ಭರವಸೆ ನೀಡಿಹನು.

“ಅಳದಿರು ಮಗಳೇ!” ಎನ್ನಲು ಒಡನೆಯೆ
ಬಿಗಿಯಿತು ಕಂಠವು ಅರ್ಚಕಗೆ !
ಪುಳಕಿತಳಾದಳು ಚಮಕಿತಳಾದಳು
ಮುಗಿದಳು ಕೈಗಳ ಆ ದನಿಗೆ.

“ಅಳಲನು ಕಳೆವೆನು ಪತಿಯನು ಪೊರೆವೆನು
ಹದುಳದಿ ನಡೆಸುವೆ ನಿಮ್ಮನ್ನು |
ಅಳದಿರು ಮಗಳೇ, ಅಳದಿರು ತಾಯೀ
ಮುದದಲಿ ನಡೆಯೌ ಮನೆಗಿನ್ನು.”

ಕನಸೋ ನೆನೆಸೋ ಎನ್ನುತ ಸಾದ್ವಿಯು
ನಿಂದಳು ಚಣ ಮೈಮರೆಯುತಲಿ |
ಮನದೊಳು ಮೂಡಿತು ಹರುಷವು ಕೂಡಲೆ
ವಂದಿಸಿ ನಡೆದಳು ತ್ವರಿತದಲಿ.

“ಅಯ್ಯೋ!” ಎನ್ನುತ ಮುಂದಕೆ ಬಂದನು
ಸುತ್ತಿಗೆ ಹಿಡಿದಾ ಪೂಜಾರಿ |
ಸುಯ್ಯುತ ನೋಡಿದ ದೇವರ ಮುಖವನು
ಅತ್ತನು ಬಳ ಬಳ ಪೂಜಾರಿ.

“ಲೋಕದ ತೊಡಕನು ಬಿಡಿಸದೆ ದೇವರೆ
ಪಾಪದ ಭೀತಿಯ ತೊಲಗಿಸದೆ |
ಏಕಿಂತೆಲ್ಲರ ದುಃಖಕೆ ಸಿಕ್ಕಿಸಿ
ತಾಪಕೆ ನೀಗುರಿ ಮಾಡಿಸುವೆ ?

ಲೋಕದ ದುಃಖವ ನೋಡುತ ನೋಡುತ
ಭರವಸೆ ಜೀವನವೆನಿಸುವುದು |
ಸಾಕೈ ದೇವರೆ ಭರವಸೆ ಕೊಡುವೆನು
ಪೊರೆಯುವ ಶಕ್ತಿಯ ಕರುಣಿಪುದು.

ನಿನ್ನಯ ಹೆಸರಲಿ ನಿನ್ನಯ ಮರೆಯಲಿ
ನೋವನು ಕಳೆಯಲು ಆಡುವೆನು |
ನಿನ್ನೀ ಮೂರ್ತಿಯನೊಡೆದದ್ದಾದರೆ
ಆವನ ಮರೆಯಲಿ ನಿಲ್ಲುವೆನು.”

ಆಯಿತು ಅಲ್ಲಿಯೆ ಕಾಂತಿಯ ವಿಗ್ರಹ
ಒಡನೆಯೆ ಬೆಳಗಿತು ಮಂದಿರವು |
ಭಯದಿಂದರ್ಚಕ ಕೈಗಳ ಮುಗಿದನು
ಹಿಡಿದನು ದೇವರ ಪದಗಳನು.

ಮಂದಸ್ಮೇರವ ದೇವರು ಬೀರುತ
ಮುಂದಿನ ಮಾತನು ಆಡಿದನು |
“ಮಂದಿಯ ಸಲಹಿದೆ ನೀನೇ ದೇವರು
ಕುಂದದೆ ನೀಡಿದೆ ಅಭಯವನು.

ದಯವೇ ದೇವರು, ದೇವರೆ ದಯೆಯು
ಭರವಸೆ ತಪ್ಪದೆ ಫಲಿಸುವುದು |
ಭಯದಲಿ ರಕ್ಷಣೆ ಬೇಡುವ ದೀನರ
ಪೊರೆಯುವ ಶಕ್ತಿಯು ದೊರೆಯುವುದು.

ಗೊಡ್ಡೋ ಗಿಡ್ಡೋ ನಂಬಿಕೆಯಿದ್ದರೆ
ತೊರೆಯನು ದಾಟಿಪ ಹರುಗೋಲು |
ಗಡ್ಡೆಯನೇರಿಸಿ ಕಷ್ಟವ ನೀಗಿಸಿ
ಕರೆಯನು ಕಾಣಿಪ ಸಾಧನವು.”

ಬೆಳಕೂ ಮಾತೂ ಅಡಗಲು ಒಡನೆಯೆ
ಮೆಲ್ಲನೆ ಎದ್ದನು ಪೂಜಾರಿ |
ಕಳೆದುವು ಕೆಲದಿನ, ದೇವರು ಕರೆದನು
ಅಲ್ಲಿಗೆ ಹೋದನು ಪೂಜಾರಿ.

ಬಿತ್ತರ ದೇಗುಲವಲ್ಲಿಯೆ ಇರುವುದು
ದೇವರು ಒಳಗಡೆ ನಿಂದಿಹನು |
ಸುತ್ತಿಗೆ ಹಾರೆಯು ಮೂಲೆಯಲಿರುವುದು
ಆವನೊ ಅರ್ಚಕ ಕಾಣುವನು.

ದೇವರ ಸತ್ಯವು ಮಾಸುತ ಬಂದಿತು
ಗೋಡೆಯ ಕಲ್ಗಳು ಉರುಳಿದವು |
ಸೇವೆಗೆ ಬಂದವರೆಲ್ಲರು ಕದಿಯುತ
ಮಾಡದ ಮನೆಗಳ ಕಟ್ಟಿದರು .
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮಗುವಿಗೇನು ಗೊತ್ತು…?
Next post ಎಲೆಯಡಕೆಯಜ್ಜ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…