ಈ ಮಗುವಿಗೇನು ಗೊತ್ತು?
ನಗುವುದೊಂದು ಬಿಟ್ಟು!
ಬಣ್ಣಬಣ್ಣದ ಫ್ರಾಕುತೊಟ್ಟು
ಪಿಳಿ ಪಿಳಿ ಕಣ್ಣು ಬಿಟ್ಟು
ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು!
ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ…
ಎಲ್ಲ ತನ್ನವರೆಂದು ಹಿಗ್ಗುವುದು ಗೊತ್ತು!
ಈ ಮಗುವಿಗೇನು ಗೊತ್ತು?
ಎಲ್ಲರ ಕಂಡು, ನಗಬಾರದೆಂದೇನು ಗೊತ್ತು?
-೧-
ಈ ಜಾತಿ, ಮತ, ಭೇದ, ಭಾವ,
ಈ ಬಡವ, ಬಲ್ಲಿದ, ಮೇಲು-ಕೀಳು,
ಇದು ಮಠ, ಇಗರ್ಜಿ, ಮಸೀದಿ… ಬೇರೆ ಬೇರೆಂದೇನು ಗೊತ್ತು?
ನಿತ್ಯ ಪೂಜೆ; ಪ್ರಾರ್ಥನೆ ಮಾಡಿ, ಕವಾಲಿ ಹಾಡಿ,
ಬುದ್ಧ, ಬಸವ, ಯೇಸು, ಅಲ್ಲಾ-ಎಲ್ಲಾ… ಒಂದೆಂಬುದು ಗೊತ್ತು!
ಏನು ಕೇಳಿದರೂ… ಗಿಳಿಪಾಠ ಒಪ್ಪಿಸುವುದು ಗೊತ್ತು!
ಈ ಮಗುವಿಗೇನು ಗೊತ್ತು?
ನಾವು ಕಲಿಸಿದ್ದು ಕಲಿವುದು…
ಹೇಳಿದ್ದು ಮಾಡುವುದು…
ಎಲ್ಲರ ಬಳಿ ಹೋಗಬಾರದೆಂದೇನು ಗೊತ್ತು?
ಬೆಕ್ಕು, ನಾಯಿ, ಕುರಿನ… ಮುದ್ದಿಸುವುದೊಂದೇ ಗೊತ್ತು?
ಈ ಊರು, ಕೇರಿ… ಬೇರೆ ಬೇರೆ! ಒಳಿತು, ಕೆಡುಕೆಂದೇನು ಗೊತ್ತು?
-೨-
ಮಗು ಕೇಳಿದ್ದಕ್ಕೆಲ್ಲ ಉತ್ತರಿಸಿ…
ಮುಗ್ಧ ನಗು ನಕ್ಕು ಸರಿತಪ್ಪುಗಳ ವಿಂಗಡಿಸಿ,
ನ್ಯಾಯದ ತಕ್ಕಡಿ ಎತ್ತಿ ಹಿಡಿದು
ಗಿಣೀಗೆ ಸಾಕಿದಂಗೆ ಜೋಪಾನ ಮಾಡುವಷ್ಟು…
ಪುರುಸೊತ್ತೀಗ ದೊಡ್ಡವರಿಗೆಲ್ಲಿದೆ?
ಮಗುವಿನ ಮುಂದೆ: ದೊಡ್ಡವರ ನಗು ಬಂಗಾರವಾಗಿ…
ಸುಳ್ಳು, ವಂಚನೆ, ದಡ್ಡತನಗಳೇ ಸಿಂಗಾರವಾಗಿ…
ಸಿನಿಮಾ, ನಾಟಕ, ಧಾರವಾಹಿಗಳೇ ಆದರ್ಶವಾಗಿ…
ಈ ನಮ್ಮ ಸಂಸ್ಕೃತಿ, ನಾಗರಿಕತೆನ ಗಾಳಿಗೆ ತೂರಿರುವುದು ಗೊತ್ತು!
-೩-
ಈ ಮಗುವಿಗೇನು ಗೊತ್ತೆಂದು?
ಗತ್ತಿಲಿ ತಿರುಗುವುದು ಬಿಟ್ಟುಬಿಡಿ!
ದೊಡ್ಡವರಿಗಿಲ್ಲ ದೊಡ್ಡ ಮನಸ್ಸು…
ಕನಸುಗಳ ಚಿವುಟಿ, ತಲೆ ಮೇಲೆ ಹೊರೆಹೊರಿಸಿ…
ಲಕ್ಷಣರೇಖೆ ಎಳೆದು, ಪ್ರಚಾರಕ್ಕೆ ಹಪಹಪಿಸುವುದೇ…
ದೊಡ್ಡವರ ಸಾಧನೆಯೇನು??
ದೊಡ್ಡವರ ಇಂಥ ಕಲಿಕೆ, ಮಗುವಿಗದು ಸೊನ್ನೆ!
ಅದರ ಪಾಡಿಗೆ ಅದನು ಬಿಟ್ಟುಬಿಡಿ
ಅದು ಎದ್ದು, ಬಿದ್ದು, ಜಗವ ಗೆಲ್ಲುವ ಆತ್ಮವಿಶ್ವಾಸ!
-೪-
ಹಕ್ಕಿಯಂಗೆ ಹಾರಿ, ಮೀನಿನಂಗೆ ಈಜಿ
ನವಿಲಿನಂಗೆ ಕುಣಿಕುಣಿದು, ಕುಪ್ಪಳಿಸಲಿಬಿಡಿ!
ಏನಾಗಬೇಕೋ ಅದಾಗುವುದು! ಚಿಂತೆಬಿಡಿ!
ಈ ಪುಟ್ಟ ಮಗುವಿಗೇನು ಗೊತ್ತೆನಬೇಡಿ?
ಈ ಮಗು; ಈ ಜಗದ; ಸುಂದರ ಕಣ್ಣು!
‘ಮೂರು ವರ್ಷಕೆ, ನೂರು ವರ್ಷದ ಬುದ್ಧಿ’ ಅದಕೆ!
*****