ಯಾವ ಸೌಭಾಗ್ಯ ಸಮ ಈ ಚಲುವಿಗೆ
ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ?
ಸಾಲು ಹಿಮಗಿರಿ ಇವಳ ಹೆಮ್ಮೆಯ ಮುಡಿ
ಸಾಗರವೆ ಬಿದ್ದಿಹುದು ಕಾಲಿನ ಅಡಿ,
ಹಣೆಯಲ್ಲಿ ಮುಗಿಲ ಮುಂಗುರುಳ ದಾಳಿ
ಉಸಿರಾಡುವಳು ಮರುಗ ಮಲ್ಲಿಗೆಯಲಿ.
ಉದಯರವಿ ಹಣೆಗಿಟ್ಟ ಭಾಗ್ಯಬಿಂಬ
ಆಗಸದ ಕಪ್ಪು ಜಡೆ ಬೆನ್ನ ತುಂಬ,
ಸಾಲು ತೇಲುವ ಹಸಿರುಗಿಳಿಯ ಮಾಲೆ
ಸರವಾಗಿ ಹೊಳಿಯುತಿದೆ ಎದೆಯ ಮೇಲೆ.
ರಾಮಕೃಷ್ಣರು ಇವಳ ಧೀರಭಾವ
ವ್ಯಾಸ ಶುಕ ವಾಲ್ಮೀಕಿ ಜ್ಞಾನದಾಹ,
ಇವಳ ಸಹನೆಗೆ ಹೆಸರು ಸೀತೆಯೆಂದು
ಪ್ರೀತಿ ಕ್ಷಮೆ ಕರುಣೆಯೇ ನೀತಿ ಎಂದೂ.
*****