ಸ್ವಾಗತ ಸಂಕ್ರಾಂತಿಯೇ
ಕಾಲ ತರುವ ಕ್ರಾಂತಿಯೇ,
ಹೊಸ ಬಾಳಿಗೆ ಹಸೆ ಹಾಸುವ
ಮಿತ್ರಾರುಣ ಕಾಂತಿಯೇ
ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ,
ಬಳಲಿದ ಕಾಲಿಗೆ ಬಲವ ಊಡುವಂಥ ವರವೆ,
ಕನಸಿನ ಹೆದೆ ಚಿಮ್ಮಿದ ಆಕಾಂಕ್ಷೆಯ ಶರವೆ,
ಬವಣೆಯ ಭಾರವ ನೀಗಿ, ಬಾ ಓ ಸಂಕ್ರಾಂತಿಯೇ!
ಕಾಣದೊಂದು ಪಥಕೆಳೆಯುವ ಅನಿರೀಕ್ಷಿತ ಪಯಣವೆ
ಹೊಸ ಕಾಣ್ಕೆಗೆ ಎವೆ ಬಿಚ್ಚುವ ಬೆಳಕಿನೊಂದು ನಯನವೆ
ಎಳ್ಳು ಬೆಲ್ಲ, ಜಲ್ಲೆ ಕಬ್ಬು ನಾಂದಿಯಾದ ಅಯನವೆ
ಭಾವೀ ದಿನಗಳ ಭಾಗ್ಯದ ಕದತೆರೆಯುವ ಕಿರಣವೆ!
ಬರಿ ಗಾಳಿಯೆ? ಬರಿ ಜಲವೇ? ಬರಿ ಬೆಳಕೇ? ಅಲ್ಲ,
ಬದಲಾಗಲಿ ಮುಡಿಯ ತನಕ ಇಡೀ ದೇಶವೆಲ್ಲ,
ಸತ್ಯ ಸ್ವಾಭಿಮಾನಯುಕ್ತ, ಭೇದಮುಕ್ತ ಮನವ
ನೀಡಲಿ ಈ ಸಂಕ್ರಾಂತಿ ನೀಡಲಿ ಹೊಸ ದಿನವ.
*****