ಬಾನು ರೆಪ್ಪೆ ಮುಚ್ಚುತಿದೆ
ಇರುಳು ಸೆರಗ ಹೊಚ್ಚುತಿದೆ,
ತಾರೆ ಚಂದ್ರ ತೀರದಲ್ಲಿ
ನಕ್ಕು ಹರಟೆ ಕೊಚ್ಚುತಿವೆ,
ಮಾತಾಡದೆ ಸಂಭ್ರಮದಲಿ
ತೇಕಾಡಿದೆ ಮುಗಿಲು,
ಹಾಡಲು ಶ್ರುತಿಗೂಡುತ್ತಿದೆ
ಬೆಳುದಿಂಗಳ ಕೊರಳು!
ದಡವ ಕೊಚ್ಚಿ ಹರಿಯುತಿದೆ
ನದಿಗೆ ಮಹಾಪೂರ,
ಗಡಿಯ ದಾಟಿ ಹಬ್ಬುತಿದೆ
ಪಾರಿಜಾತ ಸಾರ,
ಹಳೆತ ಎಸೆದು ಹೊಸರೂಪಕೆ
ತಡಕುತ್ತಿದೆ ಜೀವ,
ತಳಮಳಿಸುತ ತಾಳಿದೆ
ಹೊಸ ಸೃಷ್ಟಿಯ ನೋವ
ಬಂತು ಹೇಗೆ ಎಲ್ಲಿಯದೀ
ಕೊಳಲಿನ ತೆಳುನಾದ?
ಗೆಜ್ಜೆಕಟ್ಟಿ ಕುಣಿಯಲು
ತವಕಿಸುತಿದೆ ಪಾದ;
ನೋವಿನಾಳದಿಂದ ಚಿತ್ತ
ಮೇಲೆ ತೇಲಿ ಬರುತಿದೆ
ಮಿಂಚುವಂಥ ನವಸೃಷ್ಟಿಗೆ
ಸಂಚು ಸಿದ್ಧಗೊಳುತಿದೆ.
*****