ಎತ್ತದಿರು ಕಲ್ಲುಗಳ ಮೆಟ್ಟದಿರು ಹುಲ್ಲುಹಾಸುಗಳ
ಮುಟ್ಟದಿರು ಅಲ್ಲಿ ಮಲಗಿರುವ ಹಸುಳೆಗಳ
ಎಷ್ಟೋ ವರ್ಷಗಳಿಂದ ಮಲಗಿರುವರವರು
ಮಳೆಗಾಳಿಗೊಮ್ಮೊಮ್ಮೆ ಕನವರಿಸುವರು
ಇನ್ನು ಈ ತೆರೆಗಳ ನಿರಂತರ ಶಬ್ದ
ಅದನುಳಿದರೆ ಬಾಕಿ ಎಲ್ಲವೂ ಸ್ತಬ್ದ
ಪಾರ್ವತಿಸುಬ್ಬನೆಂಬ ಕವಿಯೊಬ್ಬನಿದ್ದ
ಯಾರಿಗೂ ಕೇಳಿಸದ ಶಬ್ದಗಳ ಕೇಳಿದ್ದ
ಬಂದವೆತ್ತಣಿಂದ ಹೊರಟವೆತ್ತ ಕಡೆ?
ಇದು ಮಾಯಾಮೃಗದ್ದೆ ಕಾಲ್ನಡೆ
ಅತ್ತ ಪಂಚವಟಿ ಇತ್ತ ಹಾತೊರೆವ ತೊರೆ
ಅಂದು ಹಾಡಿದವರು ಇಂದು ಹಾಡುವರೆ ?
ಹಾಡು ಗಾಯಕನೆ ಹಾಡು ಎದ್ದು ಕುಣಿಯಲಿ ನಾಡು
ಕುಂಬಳೆ ಮಂಜೇಶ್ವರ ಕಾಸರಗೋಡು
ಪೆರಡಾಲ ಪುತ್ತೂರು ಮಂಗಲವಾಡಿ
ನಿನ್ನ ಗಾನದ ಅಲೆ ಎತ್ತಲೂ ಹರಡಿ
ಕೈಯ ಕಂಕಣ ಕಾಲ ಝಣಝಣ
ಅಹಾ! ಒಂದು ಶಬ್ದಕ್ಕೆ ಎಷ್ಟೊಂದು ಅನುರಣ!
ಚಿಕ್ಕ ಪ್ರಾಯದ ಬಾಲೆ ಚದುರೆ ನಿನ್ನಂಗವ-
ನೆಷ್ಟೆಂದು ಬಣ್ಣಿಸಲಿ ಬಯಸಲಿ ಸಂಗವ
ನಿನ್ನಂಥ ಚೆಲುವೆಯರು ಏಳು ಲೋಕದೊಳಿಲ್ಲ
ಇದನು ಬಣ್ಣಿಸಲಾವ ರೂಪಕವು ಸಲ್ಲ
ಆದ್ದರಿಂದಲೆ ಬಂದೆ ಎಲ್ಲರಿಗಿಂತ ಮುಂದೆ
ಅತಿರಥರೆಲ್ಲರ ಬಿಟ್ಟು ಯೋಜನ ಹಿಂದೆ
ಚಿಕ್ಕ ಪ್ರಾಯದ ಬಾಲೆ ಚದುರೆ ನೀನಾದರೆ
ಏರು ಬಾ ನನ್ನ ಈ ಅತಿವೇಗದ ಕುದುರೆ
ಭಾಗವತರಿಗೆಲ್ಲ ಗೊತ್ತಾಗುವ ಮೊದಲೆ
ಹೊರಡೋಣ ನೋಡು ಈಗಾಗಲೆ
ಮುಂಜಾವದ ಬೆಳಕಿನಲಿ ಕಾಣಿಸುವುದೇನು?
ಒಂದರ ಮೇಲೊಂದು ಘಟ್ಟಗಳ ಸಾನು!
ಅರರೆ! ಇದೇನು ಕೇಳಿಸುತಿದೆ ಗೋಳು!
ಎಲೋ ವಿದೂಷಕನೆ ಈಗೇಕೆ ಬಂದೆ ಹೇಳು
ಇಂಥ ರಾಜಾಂಗಣಕ್ಕೆ ಹೀಗೆ ಬರುವುದಕ್ಕೆ
ಯಾರಿಗೇನು ಬಂತಯ್ಯ ಅಂಥ ಧಕ್ಕೆ
ದೂತನೊ ಸಾರಥಿಯೊ ಗುಪ್ತಚಾರನೊ ನೀನು
ಒದರು ಬೇಗನೆ ಬಂದ ಕಾರ್ಯವೇನು?
ಅದೇನಾಕ್ರಂದನ! ಕೂಗಿ ಕರೆದವರಾರು?
ಅಂತಃಪುರದಿಂದ ರಾಣಿಯಲ್ಲದಿನ್ನಾರು?
ನವಮಾಸ ತುಂಬಿ ನರಳುತಿಹಳು
ಇಡಿಯ ರಾಜ್ಯದ ಭವಿಷ್ಯವನು ಹಡೆವವಳು
ಏಳು ಅಂಬಿಗನೆ ಏಳು! ಕಣ್ಣ ತೆರೆ ಏನು ನೆರೆ!
ಏನಾದರೂ ಸರಿಯೆ ಸೂಲಗಿತ್ತಿಯನೊಡನೆ ಕರೆ
ವೃಷಭ ಮಾಸದಲಿ ಬಂದರು ವೃಷಭೇಂದ್ರ ಸ್ವಾಮಿಗಳು
ಮಿಥುನ ಮಾಸದಲಿ ಮೈಥುನದ ರಾತ್ರಿಗಳು
ಮೀನದಲಿ ಜನಿಸಿದರು ನೋಡಿ ಮೂರು ಕನ್ನಿಕೆಯರು
ಮೀನುಗಣ್ಣಿನ ಚೆಲುವೆಯರು ಅವರು
ಹೊಳೆಗೊಬ್ಬಳಾಯ್ತು ಕಡಲಿಗಿನ್ನೊಬ್ಬಳು
ಉಳಿದವಳ ಕತೆಯೇನು ಹೇಳು ಕವಿಯೆ ಹೇಳು
ಹೊದಲಿಗೆಚ್ಚರಗೊಂಡವನೆ ಅರಮನೆಯ ಸ್ಥಪತಿ
ರಾಜಧಾನಿಯ ಹೊರಗೆ ಶಿಲ್ಪಶಾಲೆಯಲವನ ವಸತಿ
ಎದ್ದು ಸರಿಸುವನು ಕಣ್ಣುಗಳ ಪರದೆ
ನೋಡಿದರೆ ಏನು ಉಳಿದಿದೆ ಏನು ಅಳಿದಿದೆ
ಆಹಾ! ರಾಣಿ ನೆಫರತಿತಿ ರಾಣಿ ನೆಫರತಿತಿ
ಎಂಥ ಕಲ್ಪನೆಗೆ ಎಂಥ ಗತಿ!
ಅತಿದೂರದಿಂದ ಬಂದಿದ್ದವು ಶಿಲಾಖಂಡ
ಒಂದೊಂದರಲ್ಲು ಒಂದೊಂದು ರೂಪವ ಕಂಡ
ರಾಜಾಂಗಣಕ್ಕೆ ಸೋಪಾನದ ಸಾಲುಗಳು
ಸಾಲುಸಾಲಿಗೆ ನಿಂತ ಸಾಲಭಂಜಿಕೆಗಳು
ಒಂದು ಮಾತ್ರವೆ ಇತ್ತು ರೂಪು ಹುಡುಕುತ್ತ
ಒಂದೊಂದು ಮಗ್ಗುಲಿಗು ಅರ್ಥ ಬದಲುತ್ತ
ಯಾರ ಕುಚ ಚಂಚುಕವ ತೊಡಿಸಿದೆ
ಶಿಲ್ಪಿ ನೀನಾಕೆಗೆ ಯಾರ ಬಿಂಕ
ಬಿನ್ನಾಣಗಳ ಬೆರೆಸಿ ಮರೆಸಿದೆ-
ಯವಳ ಭಂಗಿಯಲಿ ಯಾರ ಆತಂಕ-
ವನಡಗಿಸಿದೆ ಆ ತುಂಬಿದೆದೆ-
ಯೊಳಗೆ ಯಾವ ಅರಸೊತ್ತಿಗೆಯ ಅಂಕ!
ನಿಧಾನ ಹರಿಯುವುದು ಕುಂಬಳೆ ಹೊಳೆ
ಯಾರಿಗೂ ತಿಳಿಯದೆಯೆ ಸರಿಯುವುದು ವೇಳೆ
ನೆತ್ತಿಯ ಮೇಲಿದ್ದ ಸೂರ್ಯನೀಗೆಲ್ಲಿ?
ಪರ್ವತಗಳು ಹೊತ್ತಿ ಉರಿಯುವಲ್ಲಿ
ಕಾಯುವಂತಿದೆ ಕಡಲು ಚಂದ್ರೋದಯವ
ಹಿಡಿದಿಟ್ಟುಕೊಂಡು ಎಲ್ಲ ಕಳವಳವ
ಕಂಡಿದ್ದೆಯ ನೀನು ನಿನ್ನ ಶಿಲಾಬಾಲಿಕೆಯ
ಇನ್ನು ಯಾರೂ ಕಾಣದಂಥ ಭವಿಷ್ಯ?
ಕಣ್ಣುಗಳು ಕಡಲಾಚೆ ಹೋಗುವುವು
ಯುಗಯುಗಗಳನ್ನು ಕಾಡುವುವು
ಕಾಲಾಂತರಕ್ಮೆ ಕಾಲನಿರಿಸಿದ ಲಯ
ಯಾರನ್ನೂ ಬಿಡವು ಎಂಬ ವಿಷಯ
ಎಲ್ಲ ಮುಚ್ಚಿದೆ ಆಳೆತ್ತರದ ಹುಲ್ಲು
ಬಿಟ್ಟು ಅಲ್ಲಲ್ಲಿ ಹಾಸುಗಲ್ಲು
ಸ್ನಾನದ ಕೊಳದಲ್ಲಿ ನೀರಿಲ್ಲ ತಾವರೆಯಿಲ್ಲ
ಯಾರ ಕಾಲಿನ ಗುರುತೂ ಈಗ ಉಳಿದಿಲ್ಲ
ಉಳಿದಿಲ್ಲ ಅರಮನೆ ಉಳಿದಿಲ್ಲ ಬಂದೀಖಾನೆ
ಉಳಿದಿರುವುದು ಕೇವಲ ಕವಿಕಲ್ಪನೆ
ಕಲ್ಪನೆಯ ರಥವಾದರೂ ನಿಲ್ಲಿಸೆಲೆ ಸಾರಥಿಯೆ
ಇಳಿದುಬಿಡುವೆವು ನಾವು ಇದೋ ಇಲ್ಲಿಯೆ
ದಾರಿ ಕಿರಿದಾದರೂ ನಡೆದೆ ಹೋಗುವೆವು
ನಮ್ಮ ಮಂದಿಯ ನೋವ ಖುದ್ದಾಗಿ ತಿಳಿಯುವೆವು
ಅರೆ! ಬೆಳಕು ಯಾಕಿಲ್ಲ ಬೆಳಕು ಇರಬೇಕಾದಲ್ಲಿ ?
ನಡೆಯುವುದು ಹೇಗೆ ಇಂಥ ಕತ್ತಲೆಯಲ್ಲಿ?
ಕರೆದವರು ಯಾರು ಓಹೊ ಭಾಗವತರಿರಬೇಕು
ಗೊರಲು ಧ್ವನಿಯೊಂದು ಗುರುತುಹಿಡಿಯಲು ಸಾಕು
ತಡೆಯದಿರಿ ಸ್ವಾಮಿ ತಲೆಮರೆಸಿ ನಾವು
ರಾಜ್ಯವನೊಂದು ಬಾರಿ ಸುತ್ತಿ ಬರುವೆವು
ಅದೊ ಕಾಣಿಸುತಿದೆಯಲ್ಲ ಕಮ್ಮಾರ ಸಾಲೆ
ವೆಂಕಣಾಚಾರಿ ಉರಿಸುತಿರುವನು ಒಲೆ
ಉರಿಯುವುದು ಬೆಂಕಿ ನಳನಳಿಸುವುದು ಕೆಂಡ
ಕಬ್ಬಿಣದ ತುಂಡಿನಲಿ ಉಜ್ವಲ ಸೂರ್ಯಖಂಡ
ವೆಂಕಣಾಚಾರಿ ಹೊಡೆಯುವನು ಬಾರಿ ಬಾರಿ
ಒಂದೊಂದು ಹೊಡೆತಕೂ ಶಕ್ತಿ ಮೀರಿ
ನೇಗಿಲ ಗುಳ ಖೈದಿಗಳ ಕೈಕೊಳ
ಲೋಹ ತಾಳುವುದು ಬಯಸಿದ ರೂಪಗಳ
ಏನಿದೇನಿದು ಧುತ್ತೆಂದು ಎದ್ದ ಆಕಾರ
ಬಯಸದಿದ್ದರು ಬರುವ ವಿದೂಷಕನ ಅವತಾರ
ನೆರೆಯಲ್ಲಿ. ಹೋದವನು ನೆರಳಾಗಿ ಬರುವ
ಪ್ರತಿ ರಾತ್ರಿಯೂ ಸೂಲಗಿತ್ತಿಯನು ತರುವ
ರಾಣಿ ನೆಫರತಿತಿ ರಾಣಿ ನೆಫರತಿತಿ
ಯಾಕೆ ಹೀಗೆ ನನ ನೋಡತಿ
*****