ಮನಸು ಆಕಾಶಗಾಮಿ
ದೇಹವನು ಮಾತ್ರ ಕರೆಯುವುದು ಭೂಮಿ
ಆಹ್! ಯೊಹಾನಸ್ ಕೆಪ್ಲರ್
ಆಕಾಶವನಳೆದವನು ಭೂಮಿಯ
ನೆರಳನಳೆಯುತ್ತಿರುವೆಯ !
ಆ ವಾಕ್ಯಗಳನೆಂತು ಮರೆಯುವುದು
ಆ ಅರ್ಥಗಳನೆಂತು ಬರೆಯುವುದು
ಒಂದು ಹೆಜ್ಜೆಯಲೆ
ಕಲ್ಪಗಳ ದಾಟಿದವನೆ
ಕವಿಯೆ, ವಿಜ್ಞಾನಿಯೆ, ತತ್ವಜ್ಞಾನಿಯೆ
ಎಲ್ಲವನು ಕಂಡವನು ನೀನು
ಕಾಣುವ ಬಗೆ ಹೇಳು
ರೆಕ್ಕೆಗಳುಂಟೆ ಕಲ್ಪನೆಗೆ
ಹಕ್ಕಿಯಾಗಿ ನೆಗೆಯುವುದೆ
ನೋಡನೋಡುತ್ತ ಕೇವಲ
ಚುಕ್ಕೆಯಾಗುವುದೆ
ಸಾಗುವುದೆ ಅದು
ಯಾವ ಅಗೋಚರ ಖಂಡಗಳತ್ತ
ಯಾವ ಅನೂಹ್ಯ ಗೋಲಗಳತ್ತ
ಯಾವ ನಕ್ಷತ್ರಗಳು ಹೊಳೆಯುವತ್ತ
ಯಾವ ಗ್ರಹಗತಿಗೆ ಸಿಕ್ಕಿ
ತಾನೆ ಗ್ರಹವಾಗುವುದೆ
ತಿರುಗುತ್ತ ತನ್ನ ಅಕ್ಷದ ಸುತ್ತ
ಇನ್ನು ಯಾರು ಕೊಡದ ಬೆಳಕ ನೀಡುತ್ತ
ಸುತ್ತಲಾರೆ ದೇಶಗಳ
ದಾಟಲಾರೆ ನನ್ನ ಕಾಲದ ಮಿತಿಗಳ
ಕಾಲು ಕುಸಿಯುವುದು ಮನಸು ಸೋಲುವುದು
ಇನ್ನೆಷ್ಟು ದೂರ?
ಎಲ್ಲ ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
ಸೂರ್ಯನ ಬಳಿ ಹಾರಿದವನ
ಗತಿಯೇನಾಯಿತು ?-ಎಂದು ಕೇಳಿದರವರು
ರೆಕ್ಕೆಗಳು ಕರಗಿ
ಬಿದ್ದನು ನೆಲಕ್ಕೆ-ಎಂದು ಹೇಳಿದರು
ಬಿದ್ದು ಹೊರಳಾಡಿದನು
ಬೆಂಕಿಯಲಿ ನರಳಿದನು- ಎಂದು ಬಣ್ಣಿಸಿದರು
ಬಿದ್ದವನ ಸಮಾಧಿಯನು
ಬಿಡಲಿಲ್ಲ ಜನರು
ಹಸಿರು ಹುಲ್ಲನು ಕೆದಕಿದರು
ಕಲ್ಲು ಗಾರೆಗಳನು ಕೆಡೆವಿದರು
ಹಿಂದೆ ವಾಕ್ಯಗಳು ಇದ್ದಲ್ಲಿ
ಈಗ ಏನಿಲ್ಲ-ಆಚೀಚೆ
ಚದುರಿ ಬಿದ್ದಿವೆ ಕಲ್ಲುಗಳು
ಅಕ್ಷರಗಳ ಹೆಕ್ಕಿ ಜೋಡಿಸುತ್ತಲೆ ಇರುವೆ
ಅವು ಮೂಡಿಸುವ ವಾಕ್ಯಗಳೇನು
ಅರ್ಥಗಳೇನು
ಹೇಳುವುದು ಹೇಗೆ
ಎಲ್ಲ ಅಕ್ಷರಗಳೂ ಸಿಗುವ ವರೆಗೆ-
ಎಲ್ಲವನು ಕಂಡವನು ನೀನು, ಕೆಪ್ಲರ್
ಕಾಣುವ ಬಗೆ ಹೇಳು
*****