ನನ್ನಪ್ಪ ದುಡಿಮೆಗಾರ
ಹೆಣಗಾಡಿ ಕೊಂಡ ಗದ್ದೆಗಳ
ಮತ್ತೆ ಹದಮಾಡಿ ಹಸನುಗೈದ
ಅಸಲಿಗೆ ಈಗ ಅಲ್ಲಿ
ಗದ್ದೆಗಳೇ ಇಲ್ಲ
ಬದಲಿಗೆ ತೋಟಗಳು ತಲೆ ಎತ್ತಿದೆ
ತೆಂಗು ಕಂಗು ವಾಣಿಜ್ಯ ಬೆಳೆಗಳು
ನನ್ನಣ್ಣನ ಜೊತೆಗೂಡಿ
ಎತ್ತರ ಜಿಗಿವಾಡುತ್ತಿದ್ದ
ಗದ್ದೆ ಹಾಳಿಗಳು
ಈಗ ಮಂಗಮಾಯ
ಗಿಡಗಳಿಗೆ ಬುಡಗಳಾಗಿ
ಅಪ್ಪ ಗದ್ದೆಯ ಬದುವಿಗೆ
ಅಂದು ಕಟ್ಟಿಸಿದ ಕಲ್ಲು ಮಣ್ಣಿನ
ಪಾಗಾರು ಇಂದಿಲ್ಲ – ಅಲ್ಲಿ
ಕಾಂಕ್ರೀಟು ಕಂಪೌಂಡು
ರೆಡಿಯಾಗಿದೆ
ನೀರು ಹಾಯಿಸಲು
ತೋಡಿದ ಬೆಲಗುಗಳು
ಅದೃಶ್ಯ-ಪರ್ಯಾಯಕ್ಕೆ
ಪ್ಲಾಸ್ಟಿಕ್ಕು ಪೈಪುಗಳು
ಮಣ್ಣಲ್ಲಿಯೇ ಅಡಗಿ
ಗಿಡಗಳಿಗೆ ಡ್ರಿಪ್ ಇರಿಗೇಷನ್‌ಸ್ಪ್ರಿಂಕಲರು
ನಮ್ಮ ಮನೆಯ ಕೊಟ್ಟಿಗೆಯಲ್ಲಿ
‘ಅಂಬಾ’ ದನಿ ನಿನದಿಸುತ್ತಿಲ್ಲ
ಮನೆ ಹಾಲ ರುಚಿ ಹೋಗಿ
ಬದಲಿಗೆ ಕಲಬೆರಕೆಯ
ಹಾಲಿನ ಪಾಕೀಟು
ಮನೆಬಾಗಿಲಿಗೆ ಬೆಳ್ಳಂಬೆಳಗ್ಗೆ
ನನ್ನಮ್ಮ ಎರಡು ರಟ್ಟೆ
ಬಳಸಿ ಮಸಾಲೆ ಅರೆಯುತ್ತಿದ್ದ
ರುಬ್ಬು ಕಲ್ಲು ಈಗಿಲ್ಲ
ಆ ಜಾಗದಲ್ಲಿ ರಾರಾಜಿಸುತ್ತಿದೆ
ಮಿಕ್ಸರು, ಗ್ರ್‍ಯಾಂಡರು
ನಮ್ಮ ಮನೆಯಲ್ಲೀಗ ವರ್ಷಾ ಒಂದಾವರ್ತಿ
ಮನೆ ಮುಂದಿನಂಗಳ ಹಸನು ಮಾಡಬೇಕಿಲ್ಲ
ಅದಕ್ಕೆ ಅಮ್ಮನ ಒರೆಗ ಕಲ್ಲುಗಳು
ಅಟ್ಟಕ್ಕೇರಿದೆ ಬಾಳಿಲ್ಲದೆ
ಹೊರತಿಗೆ, ಸಿಮೆಂಟು ನೆಲ
ಸಿರಿವಂತಿಗೆ ಸಾರುತ್ತಿದೆ
ಅಮ್ಮ ಅಂದು ಸೌದೆ ಅಟ್ಟಿ
ಅಡುಗೆ ಬೇಯಿಸುತ್ತಿದ್ದ ಮಣ್ಣಿನ
ಒಲೆಗಳು ಈಗಿಲ್ಲ
ಆ ಜಾಗದಲ್ಲಿ ಕಲ್ಲಿನ ಕಟ್ಟೆ
ಎದ್ದು ಗ್ಯಾಸ ಒಲೆ
ಸ್ಥಾಪನೆಯಾಗಿದೆ
ನಮ್ಮ ಮನೆಯಲ್ಲೀಗ
ಆಡಂಬರವಿದೆ, ಆದರೆ
ಹಿಂದಿನ ಆನಂದವಿಲ್ಲ
ಒಡಹುಟ್ಟಿದವರ ಸಂಬಂಧವಿದೆ
ಹಿಂದಿನ ಅನುಬಂಧವಿಲ್ಲ.
*****