ನೋಡಲ್ಲಿ ತಲೆಬುರುಡೆ ನೆಲದ ಮೇಲಲ್ಲಿ !
ಆಗಿಹುದು ಗೋಲ್ ಚಂಡು ಗೊಲ್ಲ ಬಾಲರಿಗೆಲ್ಲ.
ಬೆಳೆದು ಬಾಳಿಹ ಅಸ್ತಿ ಅದೋ ನಾಯ ಬಾಯಲ್ಲಿ !
ಒಲವು ಗೆಲವಿನ ಬಾಳು ಮೂಕವಾಗಿಹುದಲ್ಲ !
ಓ ವೀರ ಕಾಣಿದೋ ಜೀವನಾಂತ್ಯವಿದೆಲ್ಲ !
ಆಗೋ ಆ ಗೋರಿ ಬರಿಯ ಸುಣ್ಣದ ಮಾರಿ !
ನಲಿದ ಜೀವನ ನಾಟ್ಯ ಮೌನವಾಗಿಹುದಲ್ಲ !
ಅಂತಿಮದ ಈ ದಾರಿ ನಮಗೆಲ್ಲ ಕೇರಿ !
ರಣಹದ್ದು ಸ್ವಾನಗಳ ಘೋರರವವು ;
ಹರಿದು ತಿನ್ನಲೋ ರಕ್ತ ಮಾಂಸವನ್ನು ?
ರೌದ್ರ ಜೀವನಧರ್ಮದಿದೋ ಮರ್ಮವು
ಕಣ್ಣು ತಿಳಿಮಾಡಿ ಕಾಣಿಲ್ಲಿ ಮಾಯ ಬಗೆಯನ್ನು
ಏರಬೇಕೆಲ್ಲರೀ ಕೊನೆಯ ತೇರನ್ನು
ಹಿರಿಯ ಕಿರಿಯರೆಲ್ಲರ ಬೀಡು ಈ ಮಣ್ಣ ಗೂಡು !
ಸಿರಿತನದ ಲಾಸ್ಯ ಲಾವಣ್ಯ ಕಲ್ಯಾಣದಿರವನ್ನು
ಕರೆದಿಹುದು ಮಳೆಗಾಳಿ ಚಳಿಯ ಈ ನಾಡು
ಮಾಯಜಾಲದ ಸವಿಗೆ ಮುತ್ತನಿತ್ತಿಹ ಧೀರ !
ಬಾ ಇಲ್ಲಿ ಅರಘಳಿಗೆ; ನಿನ್ನ ಜೀವನ ಸೂಡು !
ಹರುಷದಾ ಬದುಕು ಈ ಮಣ್ಣ ಶೃಂಗಾರ !
ಬಾಳ ಬಾನಿನ ಬಯಕೆಯಲ್ಲಿ ತೋಡಿ ನೋಡು !
*****