ಅಲ್ಲಿ ಗುಹೆ ಅಂತಹ ಕತ್ತಲು
ಒಂಟಿಯಾಗಿ ಕುಳಿತಿದ್ದಾನೆ ಅವನು
ಏನೇನೋ ಯೋಚನೆಗಳು ಹೆದರಿಕೆಗಳು
ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ
ಆಗಾಗ ಬರುವ ಚಳಿ ಮಳೆಗೆ ಮುದುರಿ
ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ.
ಊರಿಗೆ ಹೋಗುವ ಗಾಡಿ ಕಾಯುತ್ತ
ಕುಳಿತಿದ್ದಾನೆ ದಿಗಿಲು ಸುಮ್ಮನೆ
ಕಣ್ಣು ಮುಚ್ಚಿ ಕುಳಿತು ಏರುವ
ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ
ಮಗಳು ಓಡಿ ಹೋಗಿದ್ದಾಳೆ
ಮಗ ಅಡ್ಡದಾರಿಯಲ್ಲಿ ನಡೆದಿದ್ದಾನೆ.
ಯಾವ ಕನವರಿಕೆಗಳೂ ದಕ್ಕುವದಿಲ್ಲ ಅವನಿಗೆ.
ನೀವೇಕೆ ಒಮ್ಮೆ ಅವನನ್ನು ಮಾತನಾಡಿಸಬಾರದು
ನಿಮ್ಮ ಮನೆಯ ಕಿಟಕಿಗಳಲಿ ಗಾಳಿ ಉಸಿರಾಡುತ್ತಿದೆ.
ಅಂಗಳದ ತುಂಬ ರಂಗೋಲಿ ಅರಳುತ್ತದೆ.
ನಿರಾಳವಾದ ಪ್ರೀತಿಯು ಎದೆಗೆ ಅಮರುತ್ತದೆ.
ಒಂದು ಮನಸ್ಸು ಇದೆ ತಬ್ಬಲಿ ಹಾಗೂ
ಎಲ್ಲಾ ರಹಸ್ಯಗಳು ಒಗಟುಗಳು ಬದಲಾಗುತ್ತವೆ
ಒಮ್ಮೆ ಅತಿಥಿಯಾಗಿ ಬಾ ಎದೆಯ ಒಳಗೆ ಎಂದು.
ಆತ ಸುಮ್ಮನಿದ್ದಾಗ ನೀವು ಮಾತನಾಡುತ್ತೀರಿ
ನೀವು ಸುಮ್ಮನಾದಾಗ ಆತ ಮಾತನಾಡುತ್ತಾನೆ
ಮಲಗಿದ ಹಳಿಗುಂಟ ಗಾಡಿ ಬಂದು ಇಬ್ಬರನ್ನೂ
ಹೊತ್ತೊಯ್ಯುತ್ತದೆ ಮತ್ತೊಂದು ಆಕಾಶದೆಡೆಗೆ
ಅಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಮುಖಗಳು ಅರಳುತ್ತವೆ
ಮನಸ್ಸು ಗುರುತ್ವಾಕರ್ಷಣೆಯ ಆಚೆ ಇದೆ
ಯಾಕೆಂದರೆ ಪ್ರೀತಿ ಎಂದಿಗೂ ಮುಗಿಯುವದಿಲ್ಲ.
*****