ನಿನ್ನಿರುಳು ಕನಸೊಂದ ಕಂಡೆ, ಅತ್ತ ಕಡೆಯಲಿ,
ಪೂರ್ವಕ್ಕೆ, ಕೊಂಚ ಓರೆಗೆ ತೋರುತಿರಲು ಎಳೆ
ಚಂದ್ರ, ಕಿಟಕಿಯ ಬಳಿಯೇ ಕುಳಿತೆನ್ನ ಮುಂಗಡೆಗೆ
ಕಂಬಿಗಳ ನೆರಳು ಮಲಗಿತ್ತು. ಅತ್ತಿತ್ತ ತುಸು
ಬೆಳಕು, ಪಕ್ಕದಲ್ಲಾವುದೋ ಕಿರುಗತೆಯ ಬೆಳೆ
ಕೂಡಿಸಿದ ಸಣ್ಣ ಕತೆಗಳ ಕೂಟ. ಅದು ಸರಿದು
ಯಾವುದೋ ನದಿತೀರದಲಿ ಕುಳಿತಂತೆ. ಬೆಳಕು
ಆಗಲೇ ಕಾದು ಬೆಳ್ಳಿಯಾಗಿತ್ತು. ಪಕ್ಕದಲಿ
ನನ್ನೊಲವು, ಬಲು ದಿನಕೆ ಹಿಂದೆ ನನ್ನನು ಅಗಲಿ
ಹಾರಿಹೋದವಳೆಂದು ನನ್ನ ಬಳಿ ಕುಳಿತುದಕೆ
ಮನಕಾವ ಸಂಶಯವೂ ತೋರದು ; ಅದನವಳ
ಕೇಳುವೆನು ಎಂದೆನುವ ತವಕವೂ ಬರಲಿಲ್ಲ.
ನಾನವಳ ಮೊದಲ ದಿನ ಮುತ್ತಿಟ್ಟ ನೆನಪಿನಲಿ,
ನಗೆಗಾಗಿ, ನನ್ನೊಲವ ಕುರುಹೆಂದು ಕೊಟ್ಟ ಕಿರು-
ಕನ್ನಡಿಯಲಿಬ್ಬರೂ ಚಂದ್ರಬಿಂಬವ ಕಂಡು
ಒಬ್ಬರೊಬ್ಬರ ನೋಡಿ, ಮೋಡಿಯಾ ಗುಂಗಿನಲಿ,
ವೀಳೆಯವ ಮೆದ್ದೊಡನೆ ಸೊಕ್ಕಿ, ತಲೆ, ಎರಡು ಚಣ
ಹಂಗುಗಳ ಮರೆತು, ಹಾಯಿಯಲಿ ಹರಿದಾಡುವೊಲು
ಹರಿದೆವು. ಚಂದ್ರಬಿಂಬ ಕನ್ನಡಿಯ ಕಟ್ಟಿನಲಿ
ಸವಿಗಟ್ಟಿ ಸಿಕ್ಕಿತ್ತು. ನನ್ನವಳ ಕಂಗಳಲಿ
ಹಿಗ್ಗಿತೊ ಏನೊ ಅದ ಕಾಣೆ, ಎಂತೋ ಏನೋ
ಮನಸು ಮಿಡುಕಿನಲೆ ಮಾಧುರ್ಯವಿಳಿಸಿಕೊಂಡದ
ಸವಿದಿತ್ತು,
ಒಂದೆ ಚಣ ! ಕನ್ನಡಿಯು ಕೈಜಾರಿ
ನೂರು ಚೂರಾಗೊಡೆದು, ಸಿಡಿದು, ಪುಡಿಯಾಗಲ್ಲಿ
ಸುತ್ತೆಲ್ಲ ಕೋರೈಸಿ ಬಿತ್ತು. ಒಂದೊಂದು ಅಣು
ಗಾಜಿನಲ್ಲಿ ಒಂದೊಂದು ಚಂದ್ರಬಿಂಬ ತೋರಿತು;
ಚಕಮಕಿಯ ಕಲ್ಲಿನಿಂ ಕಿಡಿ ನೂರು ಹಾರಿದೊಲು
ಚಂದ್ರ ತನ್ನಾಮೋಸದಲಿ ಕಳುಹಿಸಿದ ಮಿಣುಕು ಕಿಡಿ
ಎನುವಂತೆ ಬೆಳಗಿದುವು ; ನೂರು ಕತ್ತಿಯ ಹೊಳಪು
ಒಮ್ಮೆಗೇ ಚಕಚಕಿಸಿ ಕಣ್ಗೆ ಕಂಗಾಲತೆಯ
ತರುವಂತೆ, ನದಿಯ ಅಲೆಗಳ ನೂರು ಏರಿನಲಿ
ಶಶಿಗಿರಣ ಮಿಂಚಾಯ್ತು! ಕನ್ನಡಿಯು ಒಡೆದಿರಲು
ಹೃದಯವೇ ಬಿರಿದಂತೆ ನನಗಾಯ್ತು! ಅದನರಿತೋ
ಏನೋ, ಅಂತು, ಜತೆಗಾತಿ ನಸುನಕ್ಕು, ತುಟಿಯ
ಓರಯಿಸಿ ಸಂತವಿಸೆ ಹೇಳಿದಳು- “ನಿಮ್ಮೊಲವ
ಕುರುಹು ಈ ಕನ್ನಡಿ. ಅದು ಒಡೆದು ಚೂರಾಯ್ತು!
ಆದರದು ಒಂದಲ್ಲ, ನೂರು ಬಿಂಬಗಳ ನೆಲೆ!
ಅಂತೆ ನಾ ನಿಮ್ಮನ್ನು ಕೆಲವು ದಿನ ಬಿಟ್ಟಿರಲು,
ಹೃದಯವೇ ವಿರಹದಲಿ ಸಿಡಿದು ನೂರಾಗಿರಲು,
ನೂರು ಬಗೆಯಲಿ, ನೂರು ಹಾಡುಗಳ ರೂಪದಲಿ,
ನನ್ನ ಪ್ರತೀಕವನು ರೂಪಿಸಿದೆ. ನಿಮ್ಮನ್ನು
ಬಿಟ್ಟಂತ ಸೋಗಿನಲಿ, ನಾನೆ ನಿಮ್ಮವಳಾದೆ!
ಒಂದು ನಾನಾದವಳು, ನೂರು ನಾದದ ನೆಲೆಯ
ಸ್ಥಾಯಿಯಲಿ ಉಳಿವಾದೆ. ನಾನು ನಿಮ್ಮೊಲವಹುದು
ಹೆಣ್ತನದ ಪ್ರತಿಬಿಂಬ!” – ಅವಳ ಮಾತಿಗೆ ನಾನು
ಮರುಳಾದೆ ; ಆದರೂ ಬಿಡಲಿಲ್ಲ, ಕೇಳಿದೆನು :
“ಇನ್ನು ನಾ ನಿನ್ನನ್ನು ಬಿಡಲಾರೆ ಮುಂದಕ್ಕೆ
ಯುಗ ಕಳೆವವರೆಗೆನ್ನ ಜರೆಯೊಳಗೆ ಇರಬೇಕು,
ಇಲ್ಲದಿರೆ ಬಾಳ್ವೆಯಿದು ಸಾವಿಗಿಂತಲು ಕೀಳು.”
ಅದ ಕೇಳಿ, ಮುಸಿ ಮುಸಿದು ನಕ್ಕು ಹೇಳಿದಳವಳು.
“ನಿಮ್ಮೊಲವ ಮಿತಿಯೇನು ಒಂದೆ ವ್ಯಕ್ತಿಗೆ ಸಾಕೆ?
ಅದರ ಮಿತಿ ಜಗದ ಮಿತಿ, ಕಲ್ಪನೆಯ ಮಿತಿಯನೂ
ಮೀರಿ ಅದರಾಡಳಿತ ; ಅಂತಹಾ ಒಲವಿನಲಿ
ಜಗದೆಲ್ಲವನು ಬಾಚಿ ತಬ್ಬಿ ತನ್ನೊಳಗಿಡುವ
ಶಕ್ತಿಯಿದೆ. ಅದು ಮರೆತು, ಯಾವುದೋ ಅರೆಗನಸು
ಮರೆಯಾಗೆ, ಅದಕುರಿತು ಚಿಂತಿಸುತ ಕುಳ್ಳಿಹರೆ
ಆಯಿತೇ ? ನಾನು ಬಗೆ ಬಗೆ ರೂಪ ಧರಿಸುವೆನು,
ಬಗೆ ಬಗೆಯ ರೀತಿಯಲ್ಲಿ ಬಂದೇನು, ಹೋದೇನು!
ವಿಧ ವಿಧದ ಸೃಷ್ಟಿಯನ್ನು ಕಲ್ಪಿಸುವೆ-ಕೊಂದೇನು!
ನನಗೆ ಯಾವ ಬಗೆ ಬಂಧನದ ತೊಡಕೂ ಇಲ್ಲ.
ಅದಕಾಗಿ ಹಿಂದೊಂದು ಹೆಣ್ಣಿನಾಕೃತಿ ಧರಿಸಿ
ನಿಮ್ಮ ಬಳಿ ಬಂದೆನ್ನ ಮೋಡಿಯನು ಹಾಕಿದ್ದೆ;
ಆ ಗುಂಗಿನಲಿ ನೀವು ಗೀತಗಳ ಹಾಡಿದಿರಿ.
ಇಂದು ವಿರಹದ ರೂಪ ತಾಳಿಬಂದೆನು ; ಮುಂದೆ
ಬೇರೊಂದು ಬಿಂಬ ಪಡೆದು ಬಂದೇನು, ಬಳಿಯಲಿ
ನಿಂದೇನು.”
ಒಂದು ಗಳಿಗೆಯಲವಳು ಮಾಯವಾದಳು.
ಪಕ್ಕದಲಿ ಬೊಗಸೆಗಣ್ಣಿನ ಚೆಲುವೆ, ಹೊಸ ಹರಯ
ಕೊಟ್ಟ ಅಚ್ಚರಿಯ ಬಿಚ್ಚುಗಣ್ಣವಳು, ಪಿಳಿ ಪಿಳಿ
ನನ್ನನೇ ದಿಟ್ಟಿಸುತ ನಗುತಿರಲು, ಯಾರಿವಳು
ಎಂದುಕೊಂಡೆನು ಮನದಿ, “ಹೆಣ್ತನದ ಪ್ರತೀಕ,
ಒಲವು ಪಡೆಯುವ ನೂರು ರೂಪದಲೊಂದು-
ನಾನಿಂದು ಈ ರೂಪವಾಂತು ನಿಂದೆ”- ಕಂಗಳು
ನಕ್ಕುವಾಕೆಯವು; ಮನ ನಕ್ಕಿತು; ನೀರು ನಕ್ಕಂತಾಯ್ತು;
ಜೀವ ನಗೆಯಿಂದ ತುಂಬಿದಂತಾಯ್ತು; ಕಾವ್ಯ
ಉಕ್ಕಿ ಹರಿದಂತಾಯ್ತು. ಲಹರಿಲಹರಿಗಳಲ್ಲಿ,
ಚಂದ್ರ ಚೂರಾದ ಅಲೆಗಳಮೃತವಾಹಿನಿಯಲ್ಲಿ
ನನ್ನೆಲ್ಲ ಕನಸುಗಳೂ ಕುಣಿದುವು. ಕೆಳಗುರುಳಿ
ಚೂರಾದ ಕನ್ನಡಿಯ ನೂರುಗಳಲೂ ನೂರು
ನಮ್ಮಿಬ್ಬರ ಚಿತ್ರ ಜತೆ ಕಂಡುವು. ಉಮ್ಮಳಿಸಿ
ಭಾವ ಬಿಚ್ಚಿತು. ಕನಸು ಒಡೆಯಿತು. ಕಣ್ಣು
ಬೆಚ್ಚಿ ಜಗಕಿಳಿಯಿತು. ಆಕಾಶವನು ಹರಿದು
ಅದರಿಂದ ಇಣುಕಿ ನೋಡುತ್ತಿದ್ದ ಬಾಲರವಿ!
*****