ಹಗಲ ಹೊನ್ನಿನ ಕಿರಣರಾಸಿಯ ಬೆಳಕು ಕತ್ತಲ ಮಡಿಲಲಿ
ಮಲಗಿ ನಿದ್ರಿಸೆ ಸಂಜೆರಾಗದ ಜೋಗುಳದ ಸವಿನುಡಿಯಲಿ,
ಗಾಳಿ ತೂರಿದೆ ಮೇಘಮಾಲೆಯ ಮುಗಿಲ ಮಂಟಪ ಗೆಜ್ಜೆಗೆ
ಮಾಲೆಯಾಗಿದೆ ನಿಶೆಯ ಒಲವಿನ ರವಿಯ ನೀರವ ಸೆಜ್ಜೆಗೆ!
ಹೊನ್ನ ಹೊರಗನು ತೊರೆದು ಭೂಮಿಯು ಬಣ್ಣ ಬಣ್ಣವ ತಾಳಿದೆ;
ಋತು ವಸಂತವು ಮೂಡಿ ಬಂದಿದೆ, ಶಿಶಿರ ದೂರಕೆ ಸಾರದು!
ಜಗದ ವೀಣೆಯು ನುಡಿಯುತ್ತಿರುವುದು, ನನ್ನ ವೀಣೆಯು ನುಡಿಯದು!
ಎದೆಗೆ ಜವ್ವನ ಋತುವು ಬರುತಿರೆ, ನುಡಿವ ತಂತಿಯ ಮುರಿದಿದೆ!
ನೀಲಮಂಚದ ಮೇಲೆ ತಾರೆಯ ಮೊಲ್ಲೆ ಹೂಗಳನೆರಚುತ
ಸುತ್ತು ಮೋಡದ ಮುತ್ತು, ಹವಳವ ಕಿತ್ತು ಎಲ್ಲೆಡೆ ಚೆಲ್ಲುತ
ಶಶಿಯ ಒಲವಿನ ಕಿರಣದುದಯಕೆ ಇರುಳು ಕಾದಿರೆ ನಾಚುತ
ಸುಪ್ತ ಗೀತವ ಮತ್ತ ರಾಗದಿ ತಪ್ತ ಕೋಕಿಲ ಹಾಡಿದೆ!
ಶಶಿಯು ತೋರಲು ನೀಲದಿರುಳಲಿ ತಾರೆಗಡಣದ ಮಧ್ಯದಿ
ಒಲವ ಗೀತದ ನಾಡಿ ಮಿಡಿದರು ವೀಣೆಯೇತಕೊ ಸೊರಗಿದೆ.
ಇರುಳ ರಾಗವು ಹೂವ ಹಾಸಿಗೆ ಹಾಸಿ ಕಾದಿರೆ ಮೌನದಿ
ಉಷೆಯು ಬಾರದೆ ಹಾಡಲೇತಕೆ ಎನುತ ವೀಣೆಯು ಮಲಗಿದೆ!
*****