ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ,
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ |
ಹೊಂಬೆಳಗಲ್ಲರಳಿ, ಸೌಗಂಧ ಸೂಸಿ
ತನಿಗಾಳಿಯೋಳ್ ಬೆರೆತು ಮಕರಂದ ನೀಡೆ
ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ
ನಸುನಗುವ ನಂದನದ ಹೂವಾಗೋ ಬಯಕೆ
ಬಯಕೆಯೊಂದದು
ಮನದೊಳಂದುದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ
ಬೆಟ್ಟ ಗುಡ್ಡ ಸಾಲಲಿ ಪಯಣಿಗರ ಪಥದಲಿ
ತಣ್ಣೆಳಲನಿತ್ತು, ಸವಿ ಫಲವ ನೀಡೆ
ಕಡಿದುರಿಯೊಳಿಟ್ಟರು, ಬೆಂದುದನುಂಡವರಲಿ
ಸಂತೃಪ್ತವಾಗೋ ಗಿಡ-ಮರವಾಗುವಾ ಬಯಕೆ
ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ
ಗಿರಿಶೃಂಗದಿಂದಲಿ ಧುಮ್ಮಿಕ್ಕಿ ನಲಿಯುತ
ತೊರೆ ನದಿಯಾಗಿ ಸಾಗರೆಡೆಗೆ ಓಡೆ
ಹಾದಿ ಹಾದಿಯಿಕ್ಕೆಲದ ಹಸಿರ ಹೆಸರ ಕಾಣುತ
ಜೀವದೆದೆಯ ದಾಹಕೆ ಧಾರೆಯಾಗುವ ಬಯಕೆ
ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ, ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ.
ಭುವಿ ಬಾನ ಬಿತ್ತರ ಕಡಲೈಸಿರಿಯ ಚಿತ್ತರ
ಬಯಲ ಬಯಲ ಸೀಮಾ ಸೀಮೆಗಳಾಚೆ
ದಾಟಿ ದಾಟಿದ ರೆಕ್ಕೆ-ಪುಕ್ಕ ಬಲದ ಸಿಂಗರ
ಪಾರತಂತ್ರ ತೊರೆದಾ ಹಕ್ಕಿಯಾಗುವ ಬಯಕೆ
ಬಯಕೆಯೊಂದದು
ಮನದೊಳಂದದು
ಎನಿತೆನಿತೊ ತವಕದಿ ಮೂಡುತೆ
ಹಿತದ ಹಿತಕೆ
ನಿಸ್ಪೃಹದ ನೇರಕೆ
ಇನಿಸು ತಪ್ಪದೆಡೆ ಮಾಡುತೆ
ಕಂಡ ಅಗುಳಿಗೆ ತನ್ನ ಬಳಗವ ಕೂಗಿ ಕರೆಯುವ
ಹಂಚಿಕೊಳುತ ನೇಹದ ಮಮತೆ ಮೂಡೆ
ಗೂಡ ಕಟ್ಟಿದ ಪಿಕದ ಕುಲಕೂ ಗುಟಕನೀಯುವ
ಒಲವೆದೆಯ ಗೂಡಿನ ‘ಕಾಕ’ವಾಗುವ ಬಯಕೆ.
*****