ಆ ಗೂಡಂಗಡಿಯ ಬಳಿ
ನಿಂತಿದ್ದಾನೆ ಆ ಪುಟ್ಟ ಚೋರ
ಕೈಯಲ್ಲಿ ಹಿಡಿದಿದ್ದಾನೆ ಸಣ್ಣ
ಪೆಪ್ಪರಮಿಂಟಿನ ಜರಿ ಹಾಳೆ
ಇಳಿದು ಇಳಿದು ಸರಿಯುವ
ಚಡ್ಡಿ ಏರಿಸುತ್ತಿದ್ದಾನೆ ಒಂಟಿ ಕೈಯಲಿ
ಅಂಗಡಿಯ ಬಾಟಿಲುಗಳು
ಅವನ ನೋಟ ಇಳಿದಿದೆ.
ತನ್ನ ಪಾಡಿಗೆ ತಾನೇ ಹಚ್ಚಿಕೊಂಡ
ನಿಂತ ಪೋರನ ಕಣ್ಣುಗಳು ಹೇಳುತ್ತವೆ.
ಪಾತಾಳ ಗರಡಿಯ ಹೋರಾಟ ಸದ್ದಿಲ್ಲದೇ
ಇಳಿದಿದೆ ಒಳಗೆ ತುದಿಗಾಲಿನ ನಿಲಿವು
ಎಷ್ಟು ದಿವಸಗಳಿಗೆ ಸಾಧ್ಯ ಒಂದೆನಿತು
ಜಾರದಂತೆ ಅವನ ಪೆಪ್ಪರಮಿಂಟಿನ ಕನಸು
ತನ್ನದೇ ಖಾಸಗೀ ವಲಯದ
ಅಭೇದ್ಯದ ಕೋಟೆಯೊಳಗೆ.
ಕನಸಿನಂಚಿನಲಿ ತುಂಬಿ ತುಳುಕಿದೆ
ಸಿಹಿರಸಪಾಕದ ಚಪ್ಪರಿಕೆ ಬೆಳಕಿನ
ರೆಕ್ಕೆಗಳ ಹಾರಿಸುತ್ತ ಸಾಗಿವೆ ಹಕ್ಕಿಗಳು
ಅವ್ವ ಸರಿದು ಹೋಗಿದ್ದಾಳೆ ಹೊಲದ
ಬದುವಿನ ಕಳೆ ಕೀಳಲು, ತಂಗಿಯನು
ಸಂಭಾಳಿಸಿದರೆ ವಾರಕ್ಕೆ ಒಂದು ಪೆಪ್ಪರಮಿಂಟು
ಮತ್ತೆ ಪೋರ ಶಾಲೆಯ ದಾರಿ ಮರೆತಿದ್ದಾನೆ.
ಪಾಪ ಅವನಿಗೆ ಗೊತ್ತಿಲ್ಲ ವರ್ಷಕ್ಕೆ
ಒಂದೆರಡು ಬಾರಿ ಧ್ವಜ ಏರಿಸುವಾಗ
ಚಪ್ಪರಿಸಲು ಪೆಪ್ಪರಮೆಂಟು ಕೊಡುತ್ತಾರೆ
ಹಾಗೆ ತಿಳಿದರೆ ಅಂವ ತಂಗಿಯ ಬಿಟ್ಟು
ಶಾಲೆಯ ಚಿಲಿಪಿಲಿ ದಾರಿ ತುಳಿಯುತ್ತಿದ್ದ
ಆಗಸದಲ್ಲಿ ಹಾರಿಸುತ್ತಿದ್ದ ಗಾಳಿ ಪಟವ.
*****