ಕಾಲವೇ,
ನನಗೆ ನನ್ನ
ಕಳೆದು ಹೋದ
ಬಾಲ್ಯ ಕೊಡು.
ಕುಣಿಯಲು ಅಂಗಳ ಕೊಡು,
ಆಡಲು ಆಟಿಕೆ ಕೊಡು.
ನನ್ನ ಯೌವನವನ್ನು
ಮತ್ತೆ ಬರುವ
ಮುದಿತನವನ್ನು
ನೀನೇ ಇಟ್ಟುಕೋ.
ನಾನು ಮಗುವಾಗಿ
ಬೀಳುತ್ತಾ, ಏಳುತ್ತಾ, ಕುಣಿಯುತ್ತಾ
ನಡೆಯ ಬೇಕಾಗಿದೆ
ಆಡಬೇಕಾಗಿದೆ, ಓಡ ಬೇಕಾಗಿದೆ,
ಬೀಳ ಬೇಕಾಗಿದೆ. ಮತ್ತೆ
ಅಳ ಬೇಕಾಗಿದೆ.
ಕಾಲವೇ,
ನನಗೆ ನನ್ನ ಕಳೆದು ಹೋದ
ಬಾಲ್ಯ ಕೊಡು.
ಚಿಂತಿಸುವ ಅಪ್ಪನ
ಭುಜವನ್ನು ತಬ್ಬಬೇಕಾಗಿದೆ.
ಉಣಿಸುವ ಅಮ್ಮನ
ಸೆರಗಿನಂಚಿನಲ್ಲಿ ಅಡಗಬೇಕಾಗಿದೆ.
ನೀ ಸೃಷ್ಟಿಸಿದ
ಈ ಜಾತಿ-ವಿಜಾತಿ,
ಧರ್ಮ-ಕರ್ಮ
ಅದು ನಿನಗೇ ಇರಲಿ.
ನನಗೆ
ನನ್ನ ಕಳೆದು ಹೋದ
ಬಾಲ್ಯ ಕೊಡು.
ಕುಣಿಯಲು ಅಂಗಳ ಕೊಡು.
ಆಡಲು ಆಟಿಕೆ ಕೊಡು.
ಕೊಡು,
ಕಾಲವೇ ಕೊಡು.
*****