ಹೆಗಲೇರಿ ಕುಳಿತುಬಿಟ್ಟಿದ್ದಾನೆ ಮರ್ಕಟಿ ಮುದುಕ
ಇಳಿಯುವುದಿಲ್ಲ ಕೊಡವಿದರೆ ಬೀಳುವುದಿಲ್ಲ
ಕಾಲದ ಆಯಾಮಕ್ಕೆ ಸುತ್ತಿಹಾಕಿದ
ಸ್ಥಿರವಾದ ಬಾಧಕ ಸ್ವಯಂಕೃತ
ಕೃತತ್ರೇತಗಳ ಗೂನು
ನಾನು ನಡೆಯಬೇಕಾದಲ್ಲಿ ನಡೆಯ ಗೊಡದೇ
ನಾನು ಓಡಬೇಕಾದಲ್ಲಿ ಓಡಗೊಡದೇ
ನನಗೆ ವಿಶ್ರಾಂತಿ ಬೇಕಾದಲ್ಲಿ ಬಿಡದೇ
ಹೆಗಲ ಮೇಲೇರಿ ಕುಳಿತ ಅಜೀಗರ್ತ
ಲೆಪ್ರಸಿಯಂತೆ ಮೈಗೆ
ಕ್ಯಾನ್ಸರಿನಂತೆ ಸ್ಮೃತಿಗೆ
ಅಂಟಿಕೊಂಡಿದ್ದಾನೆ ಈತ!
ಮುತ್ತಾತ
ಇವನ ಮೂಗಿನ ತುದಿಗೆ ಬೆವರಿನ ಬಿಂದು ಇಳಿದು
ದಾಡಿಯಲ್ಲಿ ಹರಿದು ಚಹಾದ ಕಪ್ಪಿಗೆ ಬಿದ್ದು
ಮೈ ಬೆವರು ಕರೆದು ನಕ್ಕಿದ್ದ ಬಾಯಿಗಟಾರ
ಈತ ದೊಡ್ಡ ಎರೆಹುಳವಾಗಿ ಉದ್ದಕ್ಕೆ ಹೊದ್ದು
ನಡು ಬಗ್ಗಿಸಿ ಲಾಳದಂತೆದ್ದು ಅಲ್ಲೇ ಬಿದ್ದು
ನಶಾದ ವೃದ್ಧನ ಬೇಡಾದ ರತಿಯ ನಿಷ್ಫಲ
ಕಚಗುಳಿಯ ಹೇಸಿಗೆ ಮೈಮೇಲೆ ಹರಿಸಿ
ಈತ ಲಕ್ವಾ ಹೊಡಿಸಿ ಮೌನಿ!
ಶೂನ್ಯಕ್ಕೆ ನೋಡಿ
ಕೊನೆಗೊಂದು ದಿನ ನನ್ನ ಹೆಗಲ ಮೇಲೆ ಚಟ್ಟಾದಲ್ಲಿ ಸವಾರಿ ಬಿಟ್ಟ
ಕಪ್ಪು ಹೊಗೆಬಂಡಿಯಂತೆ ಕಟ್ಟೆಗೆ ಇವನ ಚುಟ್ಟಾ ಸೇದಿ
ಎಲ್ಲಾ ಮುಗಿಯಿತೆಂದು ಮುಳುಗು ಹಾಕಿದರೆ
ಎದ್ದಾಗ ಹೆಗಲ ಮೇಲೆ ಇವನ ಇಮ್ಮಡಿ ಒಜ್ಜೆ
ಮಂತ್ರದ ಮಾಟದ ಸೋಗು ಹಾಕಿ ವಿಚಿತ್ರ ಮುಖವಾಡದೊಳಗೆ
ಒಸಡು ಬಿರಿಯುವ ಹಾಗೆ ಧ್ವನಿಸುತ್ತದೆ ಇದು
ಇದಕ್ಕೆ ಪ್ರತಿಧ್ವನಿ ಕೊಟ್ಟೆನೇ?
ಇದರ ವರ್ತುಲದಲ್ಲಿ ಸುತ್ತಿದೆನೇ?
ಸುತ್ತಾ ಸುತ್ತಾ ನಾನೂ ಮುದುಕಾ
ಬರಿ ಕಂಬಕ್ಕೆ ನನ್ನ ಕಟ್ಟಿ ನಾನೇ ಕಟ್ಟಿದೆನೇ?
ಕತ್ತಿ ಹಿರಿದು ಹಲ್ಗಿರಿದು
ಬರುತ್ತಿದ್ದಾನೆ-ನಾನೇ ಬಂದೆನೇ?
ಬಲಿ ಕೊಡುವುದಕ್ಕೆ ನನ್ನ ನಾನೇ?
ಏಪ್ರಿಲಿನ ಝಳಕ್ಕೆ ಒಂಟಿ ಹಾಸಿಗೆಯಲ್ಲಿ ಬಿದ್ದು
ಕಣ್ಣರಳಿಸಿ ನೋಡಿದೆ; ಸಿಗಾರು ಹಚ್ಚೆ ಸೇದಿದೆ;
ಆ ಮುದುಕ ಸತ್ತದ್ದು ನಿಜ
ಆದರೆ ಇವರಾರು ಸುತ್ತ ಮುತ್ತ
ದುಃಸ್ವಪ್ನದ ತುಂಡುಗಳು
ಬಿಸಿಲಿಗೆ ಬಿದ್ದ ಎರೆ ಹುಳುಗಳು
ಬೆಂಕಿಗೆ ಬಿದ್ದ ನರೆಳುಗಳು
ಇದು ಯಾರ ಸಂತಾನ?
ನನ್ನದೇ? ಅವನದೇ?
*****