ಎಷ್ಟೊಂದು ವರ್ಷಗಳಿಂದ
ನನ್ನಲ್ಲಿಯೇ ಉಳಿದುಬಿಟ್ಟ
ನನ್ನವಲ್ಲದ ಹಳೆಯ ಎಕ್ಕಡಗಳೂ!
ದಂತದ ಕುಸುರಿ ಮಾಡಿದ
ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ
ಅವುಗಳ ವಾಸ
ಎಲ್ಲಿ ಹೋದರೂ ಎಲ್ಲಿ ಬಂದರೂ
ಹಳೆಯ ಎಕ್ಕಡಗಳ
ಗಂಧದ ಪೆಟ್ಟಿಗೆಯ
ಬೆನ್ನಿನ ಮೇಲೆಯೇ ಹೊತ್ತು
ಸಾಗಬೇಕಿರುವುದು ನನ್ನ ಹಣೆಬರಹ!
ಬೆನ್ನಿನಲ್ಲೇ ಬೇತಾಳನ ಹೊತ್ತ
ವಿಕ್ರಮರಾಜನ ತರಹ
ಅದೆಂದು ಆ ಹಳೇ ಎಕ್ಕಡಗಳು
ಗಂಧದ ಪೆಟ್ಟಿಗೆ ಸೀಳಿ
ನನ್ನ ಬೆನ್ನಿನ ಮೇಲೆಲ್ಲಾ
ಆಳ ಬೇರೂರಿದವೋ ಕಾಣೆ
ಮೆಚ್ಚಬೇಕು.
ತಲೆಯೆತ್ತಿ ದಿಟ್ಟತನದಿ
ನೇರ ನಡೆಯಲಾಗದಂತೆ
ತನ್ನ ಜಾಲ ಹರಡಿದ
ಎಕ್ಕಡದ ವಿಚಕ್ಷಣೆ
ನಿಧಾನಕ್ಕೆ ಎಕ್ಕಡದ ಬೇರುಗಳು
ಇಡೀ ಮೈಯೆಲ್ಲಾ ವ್ಯಾಪಿಸಿ
ತಲೆ-ಹೃದಯಗಳಿಗೆಲ್ಲಾ
ತನ್ನ ವಾಸನೆ ಬೆರೆಸಿ
ರಕ್ತದ ಹನಿಹನಿಯಲ್ಲೂ
ತನ್ನತನ ಕಲೆಸಿ
ನನ್ನುಸಿರ ಕಣಕಣದಲ್ಲೂ ನೆಲೆಸಿ
ಇತ್ತೀಚೆಗೆ,
ನಾನು-ನಾನೋ
ಹಳೆಯ ಎಕ್ಕಡವೋ
ತಿಳಿಯಲಾಗದೇ
ಅಯೋಮಯ ಎಲ್ಲವೂ!
*****