ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ
ಲೆಕ್ಕ ಇಡುತ್ತಾ ಹೋಗುತ್ತಾನೆ!!
ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?!
ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ,
ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?!
*
ಲೆಕ್ಕ… ಲೆಕ್ಕ… ಈ ಹುಲ್ಲು, ಜ್ವಲ್ಲು ಮಾನವಂದೇನು ಲೆಕ್ಕ?!
ಪ್ರಕೃತಿ, ವಿಕೃತಿ, ಸುಕೃತಿಗೆ ಲೆಕ್ಕವಿಲ್ಲ ಪತ್ರವಿಲ್ಲ!
ಕಶ್ಟವಿಲ್ಲದೆ, ಸುಖ ಅನಿಶ್ಟವೆಂಬಾತತ್ವ ನನ್ನದು!
ಮೂಗಿಡಿದರೆ ಬಾಯಿ ತೆರೆಯದೇ?!
ದೇವರ ಲೆಕ್ಕದಾ ಮುಂದೆ, ಮಾನವರದೇನು ಲೆಕ್ಕ?!
*
ಸ್ವಿಚ್, ಆನ್ ಮಾಡಿದಶ್ಟು, ಸುಲಭವಲ್ಲ
ಮುಮ್ಮುಖದ ಋತುಮಾನದ ಈ ಲೆಕ್ಕ?!
ಆಹಾ! ಮರ, ಗಿಡ, ಪೊದೆ, ಪೊದೆಗಳೆಲ್ಲ…
ಬೆದೆಗೆ ಬರುವುದು ಯಾವ ಲೆಕ್ಕ?
ಅಂಗಾಂಗ ಅಗಲಿಸಿ, ಮಾಗಿದ ಎಲೆ ಎಲೆ… ಉದುರಿಸಿ,
ಚಿಗುರೆಲೆಯ ಚಿಗುರಿಸುವುದೆಂಥಾ ಲೆಕ್ಕ?!
ಮರ ಮರದ ಎಲೆ ಎಲೆಯಲಿ, ಅಲೆ ಅಲೆಯಾಗಿ,
ಕೋಗಿಲೆ ಕೂಗುವುದೆಂಥಾ ಲೆಕ್ಕ?!
ಅಪ್ಪ, ಅಮ್ಮ, ಸಂಸಾರ ಮಾಡಿ, ಮಕ್ಕಳ ಹಡೆದು,
ಜಗದೊಟ್ಟಿಗೆ ಜೀವಿಸುವುದೆಂಥಾ ಲೆಕ್ಕ?
ಲೆಕ್ಕ ಲೆಕ್ಕ ಯಾರಿಟ್ಟರೀ ಲೆಕ್ಕ?!
ಲೆಕ್ಕವಿಲ್ಲ, ಪತ್ರವಿಲ್ಲ, ಬರಿ ಭ್ರಮೆ
ಹಾವು, ಪೊರೆ ಕಳಚಿದಶ್ಟು, ಸುಲಭವಲ್ಲ!
ಎಲೆಯುದುರಿದಾ ಜಾಗದಲ್ಲೇ, ಮತ್ತೆ ಮತ್ತೆ ಹುಟ್ಟಿಬರುವ,
ಭರವಸೆಯ ಚಿಗುರು ನಾ!
ಪಾತಾಳ ಲೋಕದಿ, ಹೊರ ಹೊಮ್ಮಿದ, ನೋವು ನಾ!!
ನನ್ನ ನೋವಿಗೂ ಅರ್ಥವಿಲ್ಲ ಭಾವವಿಲ್ಲ! ಬರೀ ದುಕ್ಕ ಕಾರಂಜಿ!
*
ಬೇಡ ಬೇಡೆಂದರೂ… ನಿಲ್ಲದಾ ಋತುಗಾನಕ್ಕೆ,
ವಸಂತ ಇಡುವನೆ ಲೆಕ್ಕ?!
ಹುಟ್ಟು, ಸಾವು, ನೋವು, ನಲಿವು, ದುಕ್ಕ, ದುಮ್ಮಾನಗಳಿಗಿಲ್ಲ ಲೆಕ್ಕ?!
ಬೇರಿಂದ ಲೆಕ್ಕವೋ? ಮರದಿಂದಾ ಲೆಕ್ಕವೋ? ಎಲ್ಲಿಂದಾಲೆಕ್ಕ ಹೇಳಲಿ??
ಸೃಷ್ಟಿ, ಲಯ, ಜೀವ, ಜಲ, ಚೇತನ, ಅನಿಕೇತನ…
ಯಾವ ಲೆಕ್ಕ ಮೊದಲು?!
ಲೆಕ್ಕವಿಟ್ಟವರಿದ್ದರೆ… ಮೊದಲು, ಲೆಕ್ಕ ಕೊಡಿ!
*
ಒಣಗಿ ಬೋಳಾದವೆಲ್ಲ, ಧಗ್ಗನೆದ್ದು ಚಿಗುರುವ, ಹೆಣ್ತನಕ್ಯಾವ ಲೆಕ್ಕ?!
ಮನುಶ್ಯ ಕ್ರಿಯೆಯಲ್ಲಿಲ್ಲದ, ಹೊಸತನಕೆ ಲೆಕ್ಕವೆಲ್ಲಿದೆ ಗೆಳೆಯಾ??
ಮರದೊಳಗೆ ಮರಹುಟ್ಟಿ, ಅಮರವಾಗುವ ಕ್ರಿಯೆಗ್ಯಾವ ಲೆಕ್ಕ?
ಪ್ರಕೃತಿ ಹೆಣ್ಣೆಂಬೆ! ಹೆಣ್ಣೇ ಪ್ರಕೃತಿಯೆಂಬೆ, ಎಲ್ಲಿಯ ಲೆಕ್ಕೆಂಬೇ?!
ಮಳೆ, ಗಾಳಿ, ನೀರು, ಗುಡುಗು, ಸಿಡಿಲು, ಬಿಸಿಲು, ಮಿಂಚಿಗೆ ಲೆಕ್ಕವೆ?
*****