ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ!
ನವ ನವ ಮಾಸಗಳೋ… ಸ್ವರ್ಗ ಸೋಪಾನವೇ…
ನವ ನವ ವಸಂತದ, ಚೈತ್ರ ಯಾತ್ರೆ…
ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ!
ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು…
ಸುಖ, ಶಾಂತಿ, ನೆಮ್ಮದಿಗೆ, ಯೋಗಾಯೋಗ ನಿದ್ರಾ ತಾಣ!
ಇಂಥಾ ಯೋಗಾ ಯೋಗಾ ದೇವತೆಗಳಿಗುಂಟೇ??
೧
ಬಲು ಬಲು ದುಃಖಮಯ…
ಈ ನೆಲ ಸೋಂಕಿದಂದನಿಂದಲೇ…
ತೆರೆದ ಬಾಯಿ, ಮುಚ್ಚಿಲ್ಲ.
ಮುಗಿಯದ ಗೋಳಿದು!
ಮರುಗಟ್ಟಿದೆ ಎಷ್ಟು ಅತ್ತರೂ ತಿರುಗಿ ನೋಡದಾಮಂದಿ!
ರಾತ್ರಿಯಿಟ್ಟು ಹಗಲು ಭವಣೆ ತೀರಿತು.
೨
‘ಈ ನರ ಜನ್ಮ, ತಾಳಿದ ಬಳಿಕ, ಏನೆಲ್ಲ ಇದ್ದದ್ದೇ…’
ಎಂದು… ಎರಡೂ ಸ್ವಾಟ್ಟಿಗೆಟ್ಟಿ, ತಲೆ ತಲೆಗೇ ಮೋಟಿ,
ಊರಹಂದಿಯಂಗೆ ‘ಅಡ್ರುಗ್’ ಎನ್ನುವ, ಮಂದಿ ಮಧ್ಯೆ
ನನ್ನಮ್ಮ ದುರುಗವ್ವ ನೆನಪಾಗುವಳು! ಸಹಜವಾಗಿಯೇ…
ಬಿಸಿಲು ಬೆಳದಿಂಗಳಾಗುವಳು ಅಮ್ಮ…
ತಾವರೆ ತಿಳಿಗೊಳದಂತೇ…
ಅಮ್ಮ ಅಮ್ಮಗಲ್ಲದೆ, ಬೊಮ್ಮಗೆ ಸಾಧ್ಯನೇ?!
ಬೆಟ್ಟದಶ್ಟು, ಕಶ್ಟ ಹೊತ್ತ, ಭೂಮಿ ನೀ…
ಯಾವ ಋಣದ, ಮಣ ಭಾರ ನಾಽ…
ಒದ್ದೆ ಕಂಗಳ, ಮುದ್ದು ಮಾಡಿ, ಮಂತ್ರಿಸಿಬಿಟ್ಟೆ!
೩
‘ಓ… ದೇವರೇ! ಸಾಕಿನ್ನು ಸಾಕು!
ಈ ಕ್ಷಣ ನನ್ನುಸಿರನ್ನೊಮ್ಮೆ ನಿಲ್ಲಿಸಿ ಬಿಡು!
ನೀ ಬಂದು ಪುಣ್ಯವನ್ನೆಲ್ಲ ಕಟ್ಟಿಕೋ…’
ಮೇಲಿಂದಾ ಮೇಲೆ, ನಾ… ಅಂಗಲಾಚುತ್ತೇನೆ! ಈ ಜನರ ತಂತ್ರ, ಕುತಂತ್ರ, ಕುಬುದ್ಧಿಗೆ ತಲೆರೋಸಿಗೆ ಬಂದಿದೆ!
ನಿತ್ಯ ಸಂತೆ ಗದ್ದಲದಲಿ ನನ್ನ ಅಳು, ಕೂಗು, ಕೇಳಿಸಿಕೊಳ್ಳುವವರ್‍ಯಾರು??
ಇಲ್ಲಿ ನಗುವ ಒತ್ತಿಟ್ಟು; ಅಳುವೆಂಬ ವಸ್ತು ಕೊಳ್ಳುತ್ತಿದ್ದಾರೆ!
ನೀರ ಮೇಲಿನ ಗುಳ್ಳೆಗೆ, ಬಾಸಿಂಗ ಕಟ್ಟುತ್ತಾರೆ.
ಈ ಜನ ಚಿನ್ನ
ಈ ನೆಲ ಅನ್ನ
ಈ ಜಲ ರನ್ನ
ಅನ್ನೊದೆಲ್ಲ ಗಿಮಿಕ್!!
೪
ಇಲ್ಲಿ ಜನರಿಲ್ಲಿ… ಸಳ್ಳಿಡಿದು, ಗುಡಿ ಗುಡಿಸಿ, ಗುಡ್ಡೆ ಹಾಕುವುದು ನೋಡಿದರೆ,
ಈ ದೇಶನಾ ಮಸಾಲೆ ಮಾಡಿ, ತಿನ್ನಾದೊಂದೇ ಬಾಕಿ!
ಈ ನೆಲ, ಜಲ, ಜನರ ಒಡಲು, ಬಗೆ ಬಗೆದು, ಬರಿದು ಮಾಡುತ್ತಾ,
ತಮ್ಮ ತಾವು ಮಾರಿಕೊಳ್ಳುವ, ಕೊಂಡುಕೊಳ್ಳುವುದ ಕಂಡರೆ…
ಅಸಹ್ಯ ಹುಟ್ಟುವುದು!
ಬದುಕಿಲ್ಲಿ… ನನ್ನ ಮುಟ್ಟದ ಗಾಳಿ.
ಎಲ್ಲ ಮುಗಿದ ಮೇಲೆ, ಉಳಿಯಲೇನಿದೆ??
ಖಾಲಿ ಕೊಡಗಳೊಂದಿಗೆ ಸಂಸಾರ!
*****