ಚಿಕ್ಕೆಯಾಗಿ ಒಳಗೆ ಹೊಳೆದು
ತುಟಿಗೆ ಬಾರದವನೆ,
ಮಕ್ಕಳ ನಗೆಗಣ್ಣಿನಲ್ಲಿ
ಬಾಗಿಲು ತೆರೆದವನೆ,
ಉಕ್ಕುವ ಹೂಚೆಲುವಿನಲ್ಲಿ
ಸೊಕ್ಕುವ ತೆನೆ ಪಯಿರಿನಲ್ಲಿ
ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ!
ಆಡುವ ಮಗು ಓಡಿ ಬಂದು
ತೊಡೆಯನೇರಿದಾಗ,
ಗೂಡ ನೆನೆದು ಗಿಳಿಯ ಹಿಂಡು
ಕೂಗುತ ಬರುವಾಗ,
ತಾಯಿಯ ಸಿರಿನಗೆಯಲಿ
ಮರಿಗಳ ಚಿಲಿಪಿಲಿಯಲಿ
ಸಿಕ್ಕಿದಂತೆ ತೋರಿ ಆಹಾ! ಸಿಗದೆ ಸಾಗುವವನೆ!
ಒಲಿದ ಹೆಣ್ಣ ಕೊರಳಿನಲ್ಲಿ
ಕೊಳಲು ನುಡಿಯುವಾಗ,
ಎರಡು ಮನಸಿನಲ್ಲು ಒಂದೆ
ಕನಸು ತುಡಿಯುವಾಗ,
ಅಪ್ಪಿ ನಿಂತ ಜೋಡಿಯ
ಕಣ್ಣು ತೋಳು ತುಟಿಯಲಿ
ಸಿಕ್ಕ ಇಗೋ ಎನಿಸಿ ಸಿಗದೆ ಅಲ್ಲೆ ಕರಗುವವನೆ!
*****