ಇವರು ನಮ್ಮ ಮಕ್ಕಳು ನೋಡಿ
ಮನೆತುಂಬಾ ಕೈಯಿಟ್ಟಲ್ಲಿ ಕಾಲಿಟ್ಟಲ್ಲಿ
ಲಲ್ಲೆಗರೆವ ಮಕ್ಕಳು
ಬರೀ ಕೈಹಿಡಿದರೆ ಸಾಲದು
ಎದೆಗಪ್ಪಿಕೋ ಎನ್ನುತ್ತವೆ-ಅಷ್ಟು ಮಾಡಿದರೆ
ಅಲ್ಲಿಂದ ತಲೆ ಮೇಲೆತ್ತಿಕೋ ಎನ್ನುತ್ತವೆ
ಕೆಲವು ಗುಲಾಬಿ, ಸೇಬುಗಳಂತೆ
ಕಂಡವರ ಕಣ್ಣು ಸೆಳೆಯುತ್ತವೆ
ಕೆಲವು ಸುಲಿದ ಬಾಳೆಹಣ್ಣಿನಂತೆ
ಒಲಿವ ಹೆಣ್ಣಿನಂತೆ ಮನವನಪ್ಪುತ್ತವೆ
ಕೆಲವು ರೊಚ್ಚೆ ಹಿಡಿದು ಕಿಚಕಿಚ ತಲೆತಿನ್ನುತ್ತವೆ
ಕೆಲವೆಲ್ಲರ ಕೈಲಾಡುವ ಚೆಂಡುಗಳಂತುಂಡಾಡಿಗಳು
ಆಡಿ ಆಡಿ ಮೈ ಕೈ ತರಚಿಕೊಂಡು
ಚಿಂದಿ ಮಂದಾಗಿ ಮೂಲೆ ಹಿಡಿಯುವವು
ಚಿಕಿತ್ಸೆಗೆ ಮೈತೆರೆದುಕೊಂಡು
ಕೆಲವು ಮಹಾರಾಜ-ರಾಣಿಯರ ಜರ್ಬಿನಿಂದ
ಎಲ್ಲರ ಕಣ್ಣು ಮುಜರೆಗಳಿಂದ ಬೀಗುತ್ತ
ಯಾರ ಕೈಗೂ ನಿಲಕದಷ್ಟೆತ್ತರ
ಸಿಂಹಾಸನದಲ್ಲಾಸೀನವಾಗುತ್ತವೆ
ಇವರನ್ನೆಲ್ಲಾ ನಾನೇ ಹಡೆದಿರುವೆನೆಂದೀರಿ ಮತ್ತೆ
ಕುಟುಂಬ ಯೋಜನೆಯಲ್ಲಾದೇನು ಕತ್ತೆ
ಎಲ್ಲೆಲ್ಲೋ ಹುಟ್ಟಿ ಬಂದು ಬಿದ್ದಿವೆ ನನ್ನ ಮಡಿಲಲ್ಲಿ
ನಾನು ಜತನವಾಗಿ ಸಾಕುವ ಮಕ್ಕಳಿವರು
ಯಾರವಾದರೇನು ನನ್ನ ಕರುಳಿಗಂಟಿ
ರಕ್ತ ಕಣ ಕಣಗಳಾಗಿ ಬೆರೆತು ಹೋಗಿವೆ
ಇವರು ಬೇರೆಯವರಲ್ಲಿ ದುಡಿದು ಬಂದು
ಸೋತು ಮುಖ ಬಾಡಿಸಿಕೊಂಡು ಕೂತಾಗ
ಕಂಡ ನನ್ನ ಕಣ್ಣು ಕೆಂಡವಾಗುತ್ತವೆ
ಮೈತಟ್ಟಿ ಮೂಕವಾಗಿ ರೋದಿಸಿ
ಕಟುಕ ಕರುಳುಗಳನ್ನು ಬೈದುಕೊಂಡು
ಸಮಾಧಾನ ಮಾಡಿಕೊಳ್ಳುತ್ತೇನೆ
ಅವುಗಳು ಮಾಡುವ ಮೌನಾರೋಪಣೆಗಳನ್ನು ಕೇಳಿ ಸುಮ್ಮನೆ
ಸಾಧ್ಯವಾದಷ್ಟು ಬೆಚ್ಚಗೆ ತಟ್ಟಿ ಮಲಗಿಸುತ್ತೇನೆ
(೩-೭-೭೫)
*****