ಹಿಮಶೈಲ ಕಾಯುವ
ಮಗನೇ ನೀನೆಲ್ಲಿದ್ದೀಯೋ
ನನಗೊಂದೂ ಗೊತ್ತಿಲ್ಲ.
ಕಾಲಿಗೆರಗಿ ಹೊರಟ ಆ ದಿನ-
ಕಣ್ಣೀರು ಒರೆಸಿದ್ದೇನು
ಮುದ್ದಾಗಿ ಮಾತಾಡಿ ನಗಿಸಿದ್ದೇನು
ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ
ಹೊರಟೆಯಲ್ಲ! ಮಗಾ
ಈಗ ನಿನೆಲ್ಲಿದ್ದೀಯೋ ನನ್ನ ಕಂದಾ.
ಆ ಹಿಮಮಳೆ ಚಳಿಗಂಜದೆ ಮುನ್ನುಗ್ಗುವ
ನಿನ್ನ ಬಿಸಿರಕ್ತದ ಕೆಚ್ಚೆದೆಯ ಹೆಜ್ಜೆಗಳನು
ಕಣ್ಣಲ್ಲೇ ತುಂಬಿಕೊಂಡಿದ್ದೇನೆ.
ಕಾರ್ಗಿಲ್ಲಿನ ಕಿಡಿ
ನಿನ್ನ ಕಿಡಿಕಿಡಿಯಾಗಿರಿಸಿದರೂ
ನನ್ನ ಮನ ಕಾರ್ಗತ್ತಲೆಯಂತೆ
ವ್ಯಾಕುಲಗೊಳ್ಳುತ್ತಿದೆಯಲ್ಲ! ಮಗಾ
ಯಾವ ಕಣಿವೆಯ ಆಳೆತ್ತರದಲ್ಲಿರುವಿಯೋ,
ನನ್ನ ಕಣ್ಮಣಿ.
ಅಬ್ಬರಿಸುವ ಗುಂಡು ಮದ್ದು ಬಂದೂಕುಗಳಿಗೆ
ನೆಲ ನಡುಗಿದಂತೆ ಒಳಗೊಳಗೇ
ನಾನೂ ನಡುಗುತಿರುವೆ
ಅಸಹಾಯಕ ಪಂಜರದ ಗಿಳಿಯಂತೆ
ಅತ್ತಿಂದಿತ್ತ ಸುತ್ತುತ
ದುಃಖ ಗಂಟಲಿನೊಳಗೇ ಹೂತಿಟ್ಟು
ಹೆತ್ತೊಡಲ ಸಂಕಟ ಹೊಟ್ಟೆಯೊಳಗೇ ಹಾಕಿ
ವೀರಯೋಧನ ತಾಯಿ ಎನ್ನುತ
ಒಮ್ಮೊಮ್ಮೆ ಇಬ್ಬಗೆಯ ನೀತಿಗೂ
ಕಣ್ಣೀರು ಸುರಿಸುತ ಒರೆಸುತ
ರಣರಂಗದ ನಿನ್ನೆದೆಯ ಕೆಚ್ಚತನಕೆ
ನಾನೂ ಸೋಲುತ ಗೆಲ್ಲುತ
ನಿನಗಾಗಿ, ದೇಶಕ್ಕಾಗಿ
ಪ್ರಾರ್ಥಿಸುತ್ತಿದ್ದೇನೆ ಮಗಾ.
ಪ್ರೀತಿಪ್ರೇಮ ವಿಶ್ವಾಸಕೆ
ಮೋಸಬಗೆದ ದ್ರೋಹಿಗಳ ನೀತಿಗೆ
ವೀರ ಮಕ್ಕಳು ಜೀವತೆತ್ತು
ಶಿಖರದ ಆಳೆತ್ತರಕೂ ನೆತ್ತರಚಿಮ್ಮಿ
ವೀರಸ್ವರ್ಗ ಏರುತ್ತಿದ್ದಾರಲ್ಲ.
ದೃತಿಗೆಡಬೇಡ ಕಾರ್ಗಿಲ್ಲಿನ
ಕಾರ್ಗತ್ತಲೆಯಲ್ಲೂ ಹೊನ್ನಕಿರಣ
ಬಂದೇ ಬರುತ್ತದೆ ಮಗಾ-
ಕೆಚ್ಚೆದೆಯಿಂದ ಇರು ನನ್ನ ವೀರಪುತ್ರಾ.
*****