ಅತೃಪ್ತ ತಾಲಿಬಾನ್‌ಗಳ ನಡುವೆ
ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ.
ಜಾತಿ ಮತಗಳನೆಲ್ಲ ಮರೆತು
ಮಾನವೀಯತೆಯೇ ಮುಖ್ಯ ಎಂದು
ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ!
ಮೂಲಭೂತವಾದಿಗಳ ಮಾತು
‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು.
ಧರ್ಮಾಂಧರ ನಾಡಿನಲಿ ಇನ್ನೂ ಮೌನವೇಕೆ ಬುದ್ಧಾ,
ವಿಕೃತಮನಸುಗಳನು ಕುಲುಮೆಗೆ ಹಾಕು
ಮೈಗೆ ಹೊಲಸುಹತ್ತಿದರೆ ತೊಳೆಯಬಹುದು
ಅದರೆ ಅವರ ಮನಸ್ಸಿಗೆಽ ಹತ್ತಿದೆಯಲ್ಲ ಬುದ್ಧ!?
ನಿನ್ನೆದೆ ಛಿದ್ರಗೊಳಿಸಿದ್ದು
ಅಮೇರಿಕದ ವಾಣಿಜ್ಯ ಸಂಕೀರ್ಣ ಬಿದ್ದದ್ದು-
ದಿವ್ಯ ಮೌನದೊಳಗೂ ಜನರಯಾತನೆಗಳೊಳಗೂ
ಕಾಣಿಸಿತು ಬುದ್ಧಾ ನಿನ್ನ ಕೋಪ ಶಾಪ.
ಅಪಘಾನ ಬೆಟ್ಟ ಕಂದರಗಳ ಎದೆಎದೆಗೆ
ಗುಂಡಿನಧಾಳಿಗಳ ಅಬ್ಬರ ಏರಿ ಸೂರಾಡಿದ್ದು.
ನೀನು ಜಗದಗಲ ಮುಗಿಲೆತ್ತರ
ಅನಂತ ಅದ್ಭುತಗಳ ದಿವ್ಯಚೇತನ
ಕ್ಷಮಿಸು ತಿಳಿಸು ಹಾರೈಸು
ಬುದ್ಧಿಹೀನ ಮಂದೆಯವುಗಳ
‘ಹಾರಲಿ ಪಾರಿವಾಳ ನಿನ್ನೆದೆಯಿಂದ ಅವರೆದೆಗೆ’
—-
ಹಿಂಸೆ ಮನುಷ್ಯನ ಕೆಲಸವಲ್ಲ ಅದು ರಾಕ್ಷಸೀ ಕೆಲಸ
-ಗೌತಮಬುದ್ದ
*****