ಉತ್ತರೀಮಳೆ

ಉತ್ತರೀಮಳೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅತ್ತೆ ಸೊಸೆಯರು ಹಿತ್ತಲ ಮನೆಯಲ್ಲಿ ಒಂದಿಷ್ಟು ವಾದಿಸಾಡುತ್ತಿದ್ದರು. ಅಷ್ಟರಲ್ಲಿ ಹೊಲದಿಂದ ಮಗನು ಬಂದನೆಂದು ಅತ್ತೆ ಎದ್ದು ಹೋದಳು. ಮಗನಿಗೆ ಉಣಬಡಿಸಬೇಕಲ್ಲವೇ?

ಊಟಕ್ಕೆ ಕುಳಿತ ಮಗನಿಗೆ ಉಣಬಡಿಸುತ್ತ ಹಗುರಾಗಿ ಎಳೆತೆಗೆದಳು ತಾಯಿ – “ಈ ಸೊಸೆ ಬೇಡಪ್ಪ ಮಗನೇ, ಇವಳನ್ನು ತವರಿಗೆ ಕಳಿಸು.”

“ಕಳಿಸಿಬಿಡುವುದಕ್ಕೆ ಎತ್ತೇ ಎಮ್ಮೆಯೇ? ಖರ್ಚು – ಮಾಡಿತಂದು ಕೈಹಿಡಿದವಳನ್ನು ಹೇಗೆ ಬಿಡುವುದವ್ವ” ಎಂದು ಕೇಳಿದನು ಮಗ.

“ನನ್ನ ಚಿನ್ನದ ಒಂಕೆ ಮಾರುವೆನು. ಸೂತ್ರದ ಗೊಂಬೆಯಂಥ ಹೆಣ್ಣು ತರುವೆನು. ಮಗನೇ, ಬಿಟ್ಟುಬಿಡು ಇವಳನ್ನು” ತಾಯಿಯ ಆಗ್ರಹ.

“ಆವಲ್ಲ ಕರುವಲ್ಲ, ಬೊಗಸೆತುಂಬ ತೆರವುಕೊಟ್ಟು ತಂದವಳನ್ನು ಬಿಡುವುದೆಂತು ತಾಯಿ?”

“ಕಿವಿಯೊಳಗಿನ ವಜ್ರದೋಲೆ ಮಾರುತ್ತೇನೆ. ಬ್ಯಾಂಗಡಿಯಂಥ ಹೆಣ್ಣು ತರುತ್ತೇನೆ. ಬಿಟ್ಟುಬಿಡು ನನ್ನ ಮಗನೇ ಇವಳನ್ನು” ಮತ್ತೆಯೂ ಅದೇ ಒತ್ತಾಯ ತಾಯಿಯದು.

“ಕೊಂಡುತಂದ ಆಡು-ಕುರಿ ಬಿಟ್ಟುಬಿಡುವುದಕ್ಕಾಗುವದಿಲ್ಲ. ದೈವಸಾಕ್ಷಿಯಾಗಿ ಕೈಹಿಡಿದವಳನ್ನು ಹೇಗೆ ಬಿಡುವುದು ಅವ್ವಾ ?”

“ಇದೋ ಈ ಮೂಗುತಿಯನ್ನು ಮಾರುತ್ತೇನೆ. ಮುತ್ತಿನಂಥ ಮಡದಿಯನ್ನು ತರುತ್ತೇನೆ. ಬಿಟ್ಟುಬಿಡು ಇವಳನ್ನು” ಅನ್ನುತ್ತಾಳೆ ತಾಯಿ.

ನೂರು ಸಾರೆ ಹೇಳುತ್ತ ಬಂದರೆ ಸುಳ್ಳೇ ಸತ್ಯವಾಗುವದಂತೆ. ಛಲಹಿಡಿದು ಬಿಟ್ಟು ಮಾತು ಗೆಲ್ಲಲೇ ಬೇಕಲ್ಲವೇ ? ಸೊಸೆ ತನ್ನ ತವರಿಗೆ ಹೊರಟುನಿಂತಳು.

“ಸೊಸೆ ಮುದ್ದೇ, ನೆಲುವಿನ ಮೇಲಿಟ್ಟ ನೆಲ್ಲಕ್ಕಿ ಬೋನವನ್ನಾದರೂ ಉಂಡು ಹೋಗು” ಎಂದು ಅತ್ತೆ ತೋರಿಕೆಯಲ್ಲಿ ಆಗ್ರಹಪಡಿಸಿದರೆ, ಸೊಸೆ ಏನೆಂದು ಮರುನುಡಿಯುತ್ತಾಳೆ – “ಅದನ್ನು ನೀನುಣ್ಣು ಇಲ್ಲವೆ ಮಗನಿಗೆ ಉಣಬಡಿಸು. ಉಳಿದರೆ ಬರುವವಳಿಗಾಗಿ ಕಾಯ್ದಿಡು.”

“ಚೆಟ್ಟಿಗೆಯೊಳಗಿರುವ ಗಟ್ಟಿತುಪ್ಪವೊಂದಿಷ್ಟು ತಿಂದಾದರೂ ಹೋಗಮ್ಮ ಮುದ್ದು ಸೊಸೆಯೇ” ಎಂದು ಅತ್ತೆಯಾಡಿದ ಉಪಕಾರದ ಮಾತಿಗೆ ಸೊಸೆ ಹೇಳುತ್ತಾಳೆ – “ನೀನಾದರೂ ತಿನ್ನು. ನಿನ್ನ ಮಗನಿಗಾದರೂ ತಿನ್ನಿಸು. ಅದರಲ್ಲಿ ಒಂದಿಷ್ಟು ಬರುವವಳಿಗಾಗಿ ಕಾಯ್ದಿರಿಸು.”

ಒಲೆಯಮೇಲಿಟ್ಟ ಹಸುವಿನ ಹಾಲನ್ನಾದರೂ ಕುಡಿದು ಹೋಗು ಎಂದಾಗ ಹಾಗೂ, ಪಟ್ಟಿಗೆಯೊಳಗಿನ ಸಂಣಂಚಿನ ಕುಪ್ಪಸವನ್ನಾದರೂ ತೊಟ್ಟುಕೊಂಡು ಹೋಗು ಎಂದಾಗ, ಸೊಸೆ ಅದೇರೀತಿಯಲ್ಲಿ ಉತ್ತರಿಸುತ್ತಾಳೆ.

ಹೇಳಿದ್ದಕ್ಕೆಲ್ಲ ಮರಳಿ ಉತ್ತರ ಕೊಡುವಳೆಂದು ಆ ಸೊಸೆಗೆ ಉತ್ತರಾದೇವಿಯೆಂದು ಹೆಸರಾಯಿತೇನೋ. ಅಂತೂ ಉತ್ತರಾದೇವಿ ಅತ್ತೆಯ ಮನೆಯಿಂದ ತವರು ಮನೆಯತ್ತ ಹೊರಟಳು.

ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡಿದ್ದಾಳೆ. ಇನ್ನೊಂದನ್ನು ಕೈಹಿಡಿದು ನಡೆಸುತ್ತಿದ್ದಾಳೆ. ತುಸು ಮುಂದೆ ಸಾಗುವಷ್ಟರಲ್ಲಿ ಬಾಳೆ ಬನವನ್ನು ಕಂಡು, ಅದಕ್ಕೆ ಹೇಳುತ್ತಾಳೆ, ತವರುಮನೆಗೆ ಹೋಗುವೆನೆಂದು. “ನೀನು ಹೋದರೆ ನಮಗೆ ನೀರುಣಿಸುವವರಾರು ? ಹಣ್ಣಾದರೆ ತಿನ್ನುವವರಾರು?” ಎಂದು ಕೇಳಿತು ಬಾಳೆಯ ಬನ.

“ನೀರುಣ್ಣಿಸುವದಕ್ಕೂ ಹಣ್ಣು ತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ” ಎಂದು ಮರುನುಡಿಯುತ್ತಾಳೆ ಉತ್ತರೆ.

ಇನ್ನೂಮುಂದೆ ಹೋದಾಗ ಕಿತ್ತಳೆಯ ಬನಕ್ಕೂ ಹೇಳುತ್ತಾಳೆ ತವರೂರಿಗೆ ಹೋಗುವೆನೆಂದು. ಕಿತ್ತಳೆ ಬನವೂ ಕೇಳುತ್ತದೆ – “ನೀನು ಹೋದರೆ ನನಗೆ ನೀರುಣ್ಣಿಸುವರಾರು? ಹಣ್ಣಾದರೆ ತಿನ್ನುವವರಾರು” ಎಂದು. ಅದಕ್ಕೂ ಮರುನುಡಿಯುತ್ತಾಳೆ ಅದೇಬಗೆಯಾಗಿ -“ನೀರುಣಿಸುವದಕ್ಕೂ ಹಣ್ಣುತಿನ್ನುವದಕ್ಕೂ ನನಗಿಂತ ಜಾಣೆಯಾದವಳು ಈ ಮನೆಗೆ ಬರುತ್ತಾಳೆ.”

ಅತ್ತೆಯಾದವಳು ಸೀರೆಕುಪ್ಪಸಗಳ ದೊಡ್ಡ ಗಂಟನ್ನೇ ಆಕೆಯ ಮುಂದೆ ಇಳುಹಿದರೆ ಸೊಸೆ – “ಇನ್ನಾವ ಸೀರೆಯೂ ಬೇಡ. ಬೇರಾವ ಕುಪ್ಪಸವೂ ಬೇಡ, ನಮ್ಮವ್ವ ನನಗೆಂದು ಕೊಟ್ಹ ಸೀರೆಕುಪ್ಪಸ ಎತ್ತಿ ಇಡಿರಿ ಈಚೆಗೆ” ಎಂದಳು.

ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು, ಕಾಲ್ಗೆಜ್ಜೆಯನ್ನು ಗಿಲಿಸುತ್ತ ಹೊರಟ ಆಕೆಯನ್ನು ಕಂಡು ದೊಡ್ಡ ಮನುಷ್ಯರೊಬ್ಬರು ಕೇಳಿದರು – “ನೀನಾವ ರಾಜನ ಸೊಸೆಯಮ್ಮ?”

“ನಾನಾವ ರಾಜನ ಸೊಸೆಯಾಗಲಿ ? ಅತ್ತೆಮ್ಮನ ಉರವಣಿಗೆಯಲ್ಲಿ ತವರೂರಿಗೆ ಹೊರಟಿದ್ದೇನೆ” ಎಂದು ಉತ್ತರಾ ಮರುನುಡಿಯುತ್ತಾಳೆ.

ಮೊದಲು ತಂದೆಯ ಮನೆಗೆ ಹೋಗಿ –  ಕದತೆಗೆ, ಅಪ್ಪಯ್ಯ, ಕದತೆಗೆಯಿರಿ. ನನ್ನಪ್ಪಾ ನನಗೆ ಕದತೆಗೆ” ಎಂದು ಕೂಗಲು ಒಳಗಿನಿಂದ ತಂದೆಯ
ಉತ್ತರ ಬರುತ್ತದೆ. –

“ಕಂದವ್ವನನ್ನು ತೊಡೆಯಮೇಲೆ ಹಾಕಿಕೊಂಡು ಚಾಪೆಯಮೇಲೆ ಕುಳಿತಿದ್ದೇನೆ. ದೀಪದ ಬುರುಡೆ ತುಂಬಿದೆ. ಹೇಗೆ ಎದ್ದು ಬರಲಿ ? ಮಗಳೇ, ನಿಮ್ಮಣ್ಣನ ಮನೆಗೆ ಹೋಗವ್ವ”

ಬಳಿಕ ಅಣ್ಣನ ಮನೆಗೆ ಹೋಗಿ ಅಲ್ಲಿಯೂ ಅದೇ ಬಗೆಯಾಗಿ ಹಲುಬಿದರೆ, ಅಣ್ಣನ ತೊಡೆಯ ಮೇಲೆ ಮುದ್ದುಮಗು ಮಲಗಿದ್ದರಿಂದ ಅವನಿಗೂ ಎದ್ದು ಬರಲಿಕ್ಕಾಗಲಿಲ್ಲ. ಅಕ್ಕನಮನೆಗೆ ಹೋಗಲು ತಿಳಿಸಿದನು.

ಅಕ್ಕನ ಮನೆ ಆಯಿತು. ತಂಗೆಯಮನೆ ಆಯಿತು. ಅಲ್ಲಿ ತೋಳಿನಲ್ಲಿ ಕೆಂಪವ್ವ ಮಲಗಿದ್ದರೆ, ಇಲ್ಲಿ ಕಾಳವ್ವ ಮಲಗಿದ್ದಳು. ಆದ್ದರಿಂದ ಎದ್ದು ಬರುವವರಾರು? ತಂಗಿಯ ಸೂಚನೆಯಂತೆ ಅವ್ವನ ಮನೆಗೆ ಹೋದಳು.

ಕಣ್ಣೀರು ಕೋಡಿಯಾಗಿ ಹರಿಯುತ್ತದೆ.

“ಕದ ತೆಗೆ ಅವ್ವಾ” ಅಂದಾಗ ಅವಳು ಕದತೆಗೆದು ಮಗಳನ್ನು ಅಪ್ಪಿಕೊಂಡು ತಲೆತಡವಿದಳು. ಕಣ್ಣೀರು ಹೊಳೆಯಾಗಿ ಹರಿಸುತ್ತ ಹೇಳಿದಳು –

“ನಿನ್ನಪ್ಪ ನನ್ನನ್ನು ಉರಿಸಿದನು. ನನ್ನ ಪಾಡು ನಿನಗೂ ತಗುಲಿತೇ ? ನೀನು ಉತ್ತರಾಮಳೆಯಾಗಿ ಹೊರಡಿನ್ನು”.

ಮಗಳು ಒಂದು ಮಗುವನ್ನು ಬಗಲಲ್ಲಿ ಎತ್ತಿಕೊಂಡು, ಇನ್ನೊಂದನ್ನು ಕೈಯಲ್ಲಿ ಹಿಡಿದುಕೊಂಡು ಕಾಲುಗೆಜ್ಜೆ ಗಿಲಕ್ ಅನ್ನುತ್ತಿರಲಿ, ಉತ್ತರೆ ಮಳೆಯಾಗಿ ಹೊರಟಳು.

ಉತ್ತರೆಮಳೆಗಾಗಿ ದಾರಿಕಾಯದವರು ಯಾರಿದ್ದಾರೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡ್ಯಾಡಿ ಅನ್ನೋಲ್ಲ
Next post ಡೇ ಟೈಂ ಕೆಲಸಗಾರ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…