ಅಂತರಿಕ್ಷ ನೌಕಾ ನಡುಮನೆಯೊಳಗೆ
ಸುತ್ತು ಹೊಡೆದೂ ಹೊಡೆದೂ
ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ
ಮೊನ್ನೆಯಷ್ಟೇ ಬಂದಿಳಿದ
ಡೆನಿಸ್ ಟಿಟೋ ಮಾತಿಗೆ ಸಿಕ್ಕ.
ಎಂಥಾ ಛಲಗಾರನೋ ನೀನು ಟಿಟೋ
ಕನಸು ನನಸಾಗಿಸಿಕೊಂಡು ಬಿಟ್ಟೆ
ಹಣ ಇದ್ದರೇನಂತೆ
ಸರಿಸಾಟಿ ಧೈರ್ಯವೂ ಇದೆಯಲ್ಲ ನಿನಗೆ-
ನಕ್ಕ, ನಗುತ್ತಲೇ ಇದ್ದ
ಅಫ್ರಿಕದ ಕರಿ ಯುರೋಪದ ಬಿಳಿ
ಏಶಿಯದ ನಾವುಗಳೆಲ್ಲ
ಬೇರೆ ಬೇರೆಯಾಗಿ ಕಂಡೆವೇನೊ ಟಿಟೋ
ಮೇಲೆ ಸೂರ್ಯ ಚಂದ್ರ ಆಕಾಶ
ಕೆಳಗೆ ಬೋಳಾದ ಗುಡ್ಡಗಾಡುಗಳು
ತುಂಡರಿಸಿಕೊಂಡಿರುವ ಮನಸುಗಳು
ಗುಂಡು ಮದ್ದು ತುಂಬಿದ ಬಂದೂಕುಗಳು
ಯಾವುದು ಹಿತವಾಗಿ ಕಾಣಿಸಿತು ನಿನಗಲ್ಲಿ?
ಏನವನ ನಗುಮುಖ
ಗಂಟಲು ತುಂಬಿ ಮಾತು ಹೊರಡದೆ
ಕಣ್ಣಲ್ಲೇ ಹೇಳುತ್ತಿದ್ದನವ-
ಪ್ರೀತಿ ಕ್ಷಮೆ ಎಲ್ಲಾ ಅಲ್ಲಿತ್ತೆಂದು
ಮೌನ ಸಹಕಾರ ಶಾಂತಿ ಅಲ್ಲಿ ಸಿಕ್ಕಿತೆಂದು
ನಿನ್ನೆ ಹೆಸರು ಇಡುತ್ತಿದ್ದಾರಂತೆ ಎಲ್ಲೆಲ್ಲೂ
ಹರಕೆಯೂ ಹೊತ್ತಿದ್ದಾರಂತೆ ಆಕಾಶಕ್ಕೇರಲು
ನಿನೊಂದು ವಿಚಿತ್ರ ಶಕ್ತಿ
ಅರವತ್ತರ ಟಿಟೋ ನೀನು ಗೆದ್ದೆ.
ಸದ್ದು ಗದ್ದಲವಿಲ್ಲದ
ವಿಷದ ಹುನ್ನಾರ ಬೀಜಗಳಿಲ್ಲದ
ತೂಗು ತೊಟ್ಟಿಲೊಳಗೆ ಹಗುರಾಗಿ ಹಾರಾಡಿ
ಕುಣಿದಾಡಿ ತಂದಿದ್ದಾನೆ
ಎಲ್ಲರಿಗೂ ಕಾಣಿಕೆ
ಸ್ವರ್ಗದನುಭವದ ಹಿತ
ಬಾಯ್ತುಂಬ ನಗು
ಎದೆ ತುಂಬ ಹೆಮ್ಮೆ.
ವಿಶ್ವದ ಮೊದಲ ಅಂತರಿಕ್ಷ ಪ್ರವಾಸಿ, ಅಮೇರಿಕದ ಶ್ರೀಮಂತ ಉಧ್ಯಮಿ ಡೆನಿಸ್ ಟಿಟೋ ೨೦೦ ಮಿಲಿಯನ್ ಡಾಲರ್ಸ್ ಕೊಟ್ಟು ರಶಿಯಾದ ನೌಕೆಯಲ್ಲಿ ೭ ದಿನಗಳವರೆಗೆ ಏಪ್ರಿಲ್ ೨೦೦೧ ರಲ್ಲಿ ಪ್ರವಾಸ ಮಾಡಿಬಂದ ಹೆಗ್ಗಳಿಕೆ ೧ ಡಾಲರ್= ರೂ. ೫೦
*****