ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ
ನಿನ್ನ ಸತ್ಯ ಶೋಧದ ಅಮೃತ ವಚನಗಳು
ಗುಣ ಗುಣಿಸುತ್ತೇನೆ ಕನವರಿಸುತ್ತೇನೆ
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು
ಬಂದು ನನ್ನ ಭುಜ ತಲುಕಾಡಿದೆ
ಕ್ಷಮಿಸು! ಗುರುತು ಹಿಡಿಯಲೇ ಇಲ್ಲ
ಮರುವೋ; ನಿದ್ದೆಗಣ್ಣೋ
ವೈರಾಗ್ಯ ಖಣಿ ಮುಕ್ತಿಮಣಿ ಅಕ್ಕ
ನನ್ನಕ್ಕ ತಬ್ಬಿ ಖುಷಿಪಟ್ಟೆ
ಶತ ಶತಮಾನಗಳ ಅಂತರಂಗದ
ಅಂತಃಕರಣದ ಮಾತುಗಳು ಕುಶಲೋಪಚಾರ
ಉತ್ತರ ಏನು ಹೇಳಲಿ ಅಕ್ಕ
ಏನೇನೂ ಬದಲಾಗಿಲ್ಲ
ನಿನಗೆ ಅಡ್ಡಗಟ್ಟಿದ ಪುಂಡ ಪೋಕರಿಗಳ
ದಾರಿ ಇನ್ನೂ ಹಾಗೇ ಇದೆ.
ಧರ್ಮದ ಹೆಸರಿನಲ್ಲಿ ಅಧರ್ಮ
ಮೇಲು ಕೀಳು ಭಾವನೆ.
ಬದಲಾಗಿವೆ ಟಾಪ್ ಬಾರ್‌ಗಳಾಗಿರುವ ಅನುಭವ ಮಂಟಪಗಳು
ಫ್ಯಾಶನ್ ಪರೇಡ್ ಲೇಡಿಜ್
ಕ್ಲಬ್‌ಗಳಾಗಿರುವ ಅಕ್ಕನ ಬಳಗಗಳು
ಪರಶಿವನೇ ಗಂಡನಾಗಬೇಕೆಂದು
ತಪಿಸಿದ ನೀನೆಲ್ಲಿ ಇಂದಿನ ಪಾಂಚಾಲಿಗಳೆಲ್ಲಿ
ಚಿಲಿಪಿಲಿಸದ ಅನಾಥ ಗಿಳಿಗಳು
ಬೇಟೆಗಾರರ ಗಿರಿಕಂದರಗಳು
ಅಕ್ಕ ಈ ಸೀರೆ ಸುತ್ತಿಕೋ
ಈಗ ಅಲ್ಲಮಪ್ರಭು ಬಸವಾದಿ ಗಣಗಳಿಲ್ಲ
ಬಾ ಒಂದಿಷ್ಟು ಸುತ್ತಾಡಿ ಬರೋಣ….
ಲೌಕಿಕ ಜಂಜಡದ ನಿನ್ನ ಮಾತುಗಳಲ್ಲಿ
ಹೊರಳಾಡಿ ಮುಳುಗೇಳುವ ಈ ಜನರೆಲ್ಲಿನೋಡು –
ಅಕ್ಕ ನೋಡಕ್ಕ ಏನೂ ಬದಲಾಗಿಲ್ಲ
ಹೆಣ್ಣಿನ ತುಳಿತ ತೊತ್ತುಗಳಲ್ಲಿ
ಆಗಿದ್ದೀಷ್ಟೆ ಅಲ್ಲಲ್ಲಿ ಕೊರಡು ಕೊನರುತಿವೆ
ಕಲ್ಲು ಕವಿತೆ ಹಾಡುತಿವೆ
ಸುಟ್ಟುಕೊಂಡ ದೇಹಗಳಲಿ ಜ್ವಾಲೆ ಉರಿಯುತಿದೆ.
ಆದರೂ ಅಕ್ಕ ನಾವು ಸೋತಿಲ್ಲ.
ಹದ್ದುಮೀರಿ ವರ್ತಿಸಿಯೂ ಇಲ್ಲ.
ಹಂಬಲಿಸಿ ಕೊರಗಿ ನೀ ಕಂಡ “ಮಲ್ಲಿಕಾರ್ಜುನನಂತೆ”
ನಾವು ಹಂಬಲಿಸಿ ಅಂತರೀಕ್ಷಕ್ಕೇರಿ ಸಮುದ್ರದಾಳಕ್ಕಿಳಿದು
ವಿಜ್ಞಾನ ತಂತ್ರಜ್ಞಾನಗಳನ್ನಲ್ಲಾಡಿಸಿ
ಆಗುಂತಕ ‘ಶಕ್ತಿ’ ಕಂಡುಹಿಡಿಯುತ್ತಲಿದ್ದೇವೆ.
*****