ಹಲ್ಲು ಹಲ್ಲು ಮಸೆದವು, ಕರುಳು ಕರುಳ ಕಡಿದವು
ಹೊಟ್ಟೆ ತನ್ನನ್ನೇ ಸುತ್ತಿ ತಿನ್ನಲನುವಾಯ್ತು
ಹಸಿವು ತೀರದೆ ಇನ್ನೂ ಹೆಚ್ಚಾಯಿತು
ಒಂದು ಚಣದ ಬೇಡಿಕೆಯಲ್ಲ
ಇದು ಜೀವಮಾನದ ಬೇಡಿಕೆ
ಜನ್ಮಾಂತರಗಳ ಕುಣಿಗಳನ್ನು
ನಾವೇ ತೊಡುವ ತೋಡಿಕೆಯಾಗಿ
ಜೀವ ಜೀವಗಳ ಹರಿದು ತಿನ್ನುವ ಕಾಡಿಕೆಯಾಗಿ
ಭೂತಾಕಾರವಾಗಿ ಬೆಳೆದು ನಿಂತು
ಸ್ವರ್ಗ ಮರ್ತ್ಯಗಳಿಗೇಕರೂಪವಾಗಿ
ಕಣ್ಣು ತಲೆ ತಿರುಗಿ ಚಿತ್ತ ಭ್ರಮೆಯಾಗಿ
ಸೂರ್ಯನೇ ಭ್ರಮಿಸುತ್ತಾನೆಂಬ ಭ್ರಮೆಯಾಗಿ
ನಾಯಿ ಬಯಸಿತು ಆಗಸದನ್ನ
ಸುರಸೋಮ ಪಾನ
ರಾಜಭಕ್ಷ್ಯ ಭೋಜ್ಯ
ಸಿಕ್ಕಿದ್ದು ಸೇವಕರೊಗೆದ
ಒಣ ತೊಗಲಿನಂಥ ತುಣುಕುಗಳು
ತೇಲುಗಣ್ಣಲ್ಲಿ ಅದನ್ನು ಕಬಳಿಸುವಾಗ ಅದೇ ಸುಧೆ
ಮುಗ್ಗಿದ ರೊಟ್ಟಿಯೇ
ಗಮಗಮಿಸುವ ಮೃಷ್ಟಾನ್ನವಾಯಿತು
ವಿಷವೂ ಅಮೃತವಾಯಿತು
ಹಸಿವಿಂಗಿದಾಗದೇ ವಿಷವಾಯಿತು
ಬೈರಾಗಿಯೆ ಬಿಂಕಕ್ಕೆ ವಿಷಯವಾಯಿತು
*****