ಪಶ್ಚಿಮ ಪರ್ವತದ ಸಮೀಪದಲ್ಲಿ ಒಂದು ಕಡೆಯಲ್ಲಿ ಮಂದವಿಷನೆಂಬ ಒಂದು ಮುದಿಯ ಕೃಷ್ಣಸರ್ಪವಿತ್ತು. “ನಾನು ಈ ಕೊನೆಯ ಕಾಲದಲ್ಲಿ ಸುಖವಾಗಿರುವುದು ಹೇಗೆ?” ಎಂದೇ ಅದಕ್ಕೆ ಯೋಚನೆ. ಹಾಗೆಯೇ ಯೋಚಿಸುತ್ತ ಕಪ್ಪೆಗಳು ತುಂಬಿರುವ ಒಂದು ಕೆರೆಯ ಬಳಿ ಹೋಗಿ ಸತ್ತಂತೆ ಬಿದ್ದುಕೊಂಡಿತ್ತು.
ಅದು ಹಾಗೆ ಬಿದ್ದಿರಲು, ನೀರಿನಲ್ಲಿದ್ದ ಒಂದು ಕಪ್ಪೆಯು “ಮಾವ, ಇದೇನು, ಎಂದಿನಂತೆ ಆಹಾರಾರ್ಥವಾಗಿ ಸಂಚರಿಸದೆ ಹೀಗೆ ಬಿದ್ದು ಕೊಂಡಿರುವೆ?” ಎಂದು ಕೇಳಿತು. ಅದಕ್ಕೆ ಆ ಹಾವು “ಅಯ್ಯೋ ಮಂದಭಾಗ್ಯನಾದ ‘ ನನಗೆ ಇನ್ನು ಆಹಾರಕ್ಕಾಗಿ ಹೋಗುವ ಭಾಗ್ಯವೆಲ್ಲಿ? ಕೇಳು. ನಿನ್ನೆಯ ಸಂಜೆಯಲ್ಲಿ ಆಹಾರವನ್ನು ಹುಡುಕಿಕೊಂಡು ಬಂದು ಒಂದು ಕಪ್ಪೆಯನ್ನು ಕಂಡೆನು. ಅದನ್ನು ಹಿಡಿದುಕೊಳ್ಳಲು ನಾನು ಹಾರಿದೆನು. ಆದು ಮರಣ ಭೀತಿಯಿಂದ ಓಡಿ ಹೋಗಿ ವೇದಾಧ್ಯಯನಮಾಡುತ್ತ ನೀರಿನಲ್ಲಿ ನಿಂತಿರುವ ಬ್ರಾಹ್ಮಣರ ನಡುವೆ ಹಾರಿತು. ಅದು ಎಲ್ಲಿಹೋಯಿತೋ ಎಂದು ಹುಡುಕುತ್ತಾ, ನೀರಿನಲ್ಲಿ ನಿಂತಿದ್ದ ಒಬ್ಬ ಬ್ರಾಹ್ಮಣ ವಟುವಿನ (ಮುಂಜಿಯಾಗಿರುನ ಹುಡುಗನಿಗೆ ವಟು ಎಂದು ಹೆಸರು) ಹೆಬ್ಬೆಟ್ಟನ್ನು ನೋಡಿ, ಇದು ಕಪ್ಪೆಯಿರಬೇಕು ಎಂದು ಕಚ್ಚಿ ಕೊಂಡೆನು. ಅವನು ಆ ಕೂಡಲೇ ಸತ್ತು ಹೋದನು. ಅದನ್ನು ಕಂಡು ದುಃಖದಿಂದಲೂ ಕೋಪದಿಂದಲೂ ಆ ಹುಡುಗನ ತಂದೆಯು “ಎಲೆ ದುರಾತ್ಮನೆ, ನಿರಪರಾಧಿಯಾದ ನನ್ನ ಮಗನನ್ನು ಕಚ್ಚಿ ಕೊಂದೆ. ಅದರಿಂದ ನೀನು ಇನ್ನು ಮೇಲೆ ಕಪ್ಪೆಗಳಿಗೆ ವಾಹನವಾಗಿ ಅವು ಕೊಟ್ಟಷ್ಟರಿಂದ ಜೀವಿಸಿ ಕೊಂಡಿರು” ಎಂದು ಶಾಪವನ್ನು ಕೊಟ್ಟನು ಆದಕ್ಕಾಗಿ ಇಲ್ಲಿ ಬಿದ್ದಿರುವೆನು” ಎಂದಿತು.
ಆ ಕಪ್ಪೆಯು ಈ ಸುದ್ದಿಯನ್ನು ಇತರ ಮಂಡೂಕ(ಕಪ್ಪೆ) ಗಳಿಗೆ ಹೇಳಿತು. ಅವು ಹೋಗಿ ಜಲಪಾದನೆಂಬ ತಮ್ಮ ಅರಸಗೆ ಹೇಳಿದುವು. ಅದೂ ತನ್ನ ಮಂತ್ರಿ ಪರಿವಾರಗಳೊಡನೆ ಈ ಅದ್ಭುತವನ್ನು ನೋಡಲು ಬಂತು. ಹಾವು ಅದನ್ನು ಏನೂ ಮಾಡದಿರಲು ಅದರ “ಹೆಡೆಯ ಮೇಲೆ ಹತ್ತಿ ಕುಳಿತಿತು. ಅದರ ಪರಿವಾರವೂ ಹಾಗೆಯೇ ಅದರಮೇಲೆ ಹತ್ತಿ ಕುಳಿತುವು. ಮಂದವಿಷನೂ ಅವುಗಳನ್ನು ಮೆಚ್ಚಿಸಲು ನಾನಾವಿಧವಾಗಿ ಓಡಾಡಿ, ಹಾರಾಡಿ ಕುಣಿದಾಡಿತು. ಅರಸನು ಅದರ ಮೈಮೇಲೆ ಕುಳಿತು. ಸುಖಪಡುತ್ತಾ “ಇದನ್ನು ಬಿಟ್ಟರೆ ಆನೆಯಮೇಲೆ, ಕುದುರೆಯಮೇಲೆ, ಮನುಷ್ಯರ ಮೇಲೆ ತಾನೇ ಕುಳಿತರೆ, ಇಂಥ ಸುಖವು ದೊರೆಯುವುದೆ?” ಎಂದು ಬಹುವಾಗಿ ಹೊಗಳಿತು.
ಇನ್ನೊಂದು ದಿನ ಮಂದವಿಷನು ದುರುದ್ದೇಶದಿಂದ ಮೆಲ್ಲ ಮೆಲ್ಲಗೆ ಹೋಯಿತು. ಅದನ್ನು ನೋಡಿ ಅರಸು “ಏನಿದು? ಏಕೆ? ಈ ದಿನ ಹೀಗೆ ಮಾಡುತ್ತಿರುವೆ? ಸರಿಯಾಗಿ ಹೋಗುತ್ತಿಲ್ಲ?” ಎನಲು ಮಂದವಿಷನು “ಬುದ್ಧಿ, ಈ ದಿನ ನನಗೆ ಹಸಿವು. ಶಕ್ತಿಯಿಲ್ಲ.” ಎನ್ನಲು, “ಅಯ್ಯಾ, ಇನ್ನು ಮೇಲೆ ಸಣ್ಣಪುಟ್ಟ ಕಪ್ಪೆಗಳನ್ನು ತಿಂದುಕೊ? ಎಂದು ಅಪ್ಪಣೆಯನ್ನು ಕೊಟ್ಟಿತು. ಅದನ್ನು ಕೇಳಿ ಆ ಕಳ್ಳ ಹಾವು “ನನಗೆ ವಿಪ್ರಶಾಪವಿದೆ. ಅದರಿಂದ ನೀನು ಅಪ್ಪಣೆ ಮಾಡಿದ ಹೊರತು ತಿನ್ನುವಂತಿರಲಿಲ್ಲ. ನನ್ನನ್ನು ಬದುಕಿಸಿದೆ?” ಎಂದು ಹೇಳಿ ಅಂದಿನಿಂದ ಕಪ್ಪೆಗಳನ್ನು ತಿನ್ನಲು ಮೊದಲುಮಾಡಿತು.
ಕಪ್ಪೆಗಳನ್ನು ತಿಂದು ತಿಂದು ಹಾವಿಗೆ ಬಲವು ಬಂತು. ಆಗ ತನ್ನೊಳಗೆ ತಾನೇ ನಗುತ್ತ “ಚಿಂತೆಯಿಲ್ಲ. ಇಲ್ಲಿ ಎಷ್ಟೋ ಜಾತಿಯ ಕಪ್ಪೆಗಳಿವೆ. ಸುಖವಾಗಿ ಬಹುಕಾಲ ತಿಂದುಕೊಂಡಿರಬಹುದು” ಎಂದುಕೊಂಡಿತು. ಜಲಪಾದನೂ ಅದು ಹಾಗೆ ಕಪ್ಪೆಗಳನ್ನು ತಿನ್ನುತ್ತಿದ್ದರೆ ಕಂಡರೂ ಆಕ್ಷೇಪಿಸುತ್ತಿರಲಿಲ್ಲ.
ಹೀಗಿರಲು ಒಂದು ದಿನ ಇನ್ನೊಂದು ದೊಡ್ಡ ಕೃಷ್ಣ ಸರ್ಪವು ಅಲ್ಲಿಗೆ ಬಂದು ಮಂದವಿಷನು ಮಾಡುತ್ತಿರುವ ಕೆಲಸವನ್ನು ಕಂಡು ವಿಸ್ಮಯಪಟ್ಟು “ಇದೇನು ಹೀಗೆ?” ಎಂದು ವಿಚಾರಿಸಿತು. ಮಂದವಿಷನು “ಹೀಗೆ ಮಾಡದಿದ್ದರೆ, ಇಲ್ಲಿರುವ ಕಪ್ಪೆಗಳೆಲ್ಲಾ ನನ್ನ ಹೊಟ್ಟೆಗೆ ಸೇರುವ ಬಗೆ ಹೇಗೆ?” ಎಂದಿತು. ಕಾಲಕ್ರಮದಲ್ಲಿ ಅಲ್ಲಿದ್ದ ಕಪ್ಪೆಗಳ ಹೆಸರೇ ಇಲ್ಲದಂತೆ ತಿಂದೂ ಹಾಕಿತು.
ಅದರಿಂದ ಹಾಗೆ ಹೇಳಿದೆನು ಎಲೈ ರಾಜನೆ, ಮಂದವಿಷನು ಕಪ್ಪೆಗಳನ್ನು ಕೊಂದಂತೆ, ನಾನೂ ನನ್ನ ಬುದ್ಧಿಯಿಂದ ವೈರಿಗಳನ್ನು ನಿರ್ಮೂಲ ಮಾಡಿದೆನು. ಕೇಳಿಲ್ಲವೆ?
ಸುಡುವ ಬೆಂಕಿಯು ಬಿಡುವುದು ॥
ಮರದ ಬುಡಗಳ ಕೊಲ್ಲದೇ ||
ಸಣ್ಣ ಶೀತದ ಗಾಳಿಯು ||
ಬಿಡದೆ ಕೊಲ್ವುದು ಬುಡಗಳಾ ॥ ೪೪ ॥ ಎಂದನು.
ಮೇಘವರ್ಣನು “ತಾತ ಇದು ನಿಜವು. ಮಹಾತ್ಮರಾದವರು ಮಹಾ ಶಕ್ತಿಶಾಲಿಗಳು. ಅಪತ್ತು ಬಂದರೂ ಆರಂಭಿಸಿದ ಕಾರ್ಯವನ್ನು ಬಿಡುವುದಿಲ್ಲ. ಕೇಳಿಲ್ಲವೆ?
ವಿಘ್ನ ಕಂಜಿ ಕೆಲಸ ಮೊದಲು ಮಾಡನೀಚನು ॥
ಮೊದಲು ಮಾಡಿ ವಿಘ್ನ ಬರಲು ಬಿಡುವ ಮಧ್ಯಮ ॥
ವಿಫ್ನ ನೂರು ಬರಲು ಬಿಡದೆ, ಮೊದಲು ಮಾಡಿದ ॥
ಕೆಲಸ ಹಿಡಿದು ಫಲದ ತನಕ ಮಾಳ್ಪನುತ್ತಮ ॥ ೪೫ ॥
ಶತ್ರುಗಳನ್ನು ನಿಶ್ಶೇಷವಾಗಿ ಕೊಂದು ನನ್ನ ರಾಜ್ಯವು ನಿಷ್ಠಂಟಕವಾಗುವ ಹಾಗೆ ಮಾಡಿದೆ. ರಾಜ ನೀತಿಯನ್ನು ಬಲ್ಲವರ ಕೆಲಸವೇ ಇದು. ಋಣಶೇಷ, ಶತ್ರುಶೇಷ, ಅಗ್ನಿ ಶೇಷ, ವ್ಯಾಧಿಶೇಷ, ಗಳನ್ನು ಬಿಡದೆ ಪರಿಹಾರ ಮಾಡುವವನೇ ಪ್ರಾಜ್ಞನು” ಎಂದು ಹೊಗಳಿದನು.
ಸ್ಥಿರ ಜೀವಿಯು ಹೇಳಿದನು: “ದೇವ, ನೀನು ಭಾಗ್ಯವಂತನು ಅದರಿಂದಲೇ ಹಿಡಿದ ಕೆಲಸವು ಸಫಲವಾಯಿತು. ಕೇವಲ ಶೌರ್ಯವೊಂದೇ ಕೆಲಸವನ್ನೂ ಸಾಧಿಸುವುದಿಲ್ಲ. ಅದರ ಜೊತೆಗೆ ಪ್ರಜ್ಞೆಯೂ ಬೇಕು. ಎರಡೂ ಸೇರಿದರೆ ವಿಜಯವು ತಪ್ಪದೆ ಕೈ ಸೇರುವುದು. ಕೇಳಿಲ್ಲವೆ?
ಶಸ್ತ್ರದಿಂದ ಹೊಡೆಯೆ ರಿಪುವು ಸುಹತನಾಗನು ॥
ಪ್ರಜ್ಞೆಯಿಂದ ಹೊಡೆಯೆ ರಿಪುವು ಆಗ ಸುಹತನು ॥
ಶಸ್ತ್ರ ಹೊಡೆಯೆ ದೇಹವೊಂದೆ ಅಳಿದು ಹೋದರೆ ॥
ಪ್ರಜ್ಞೆ ಹೊಡೆಯೆ ಕುಲವು ವಿಭವ ಯಶವು ಹೋಹುದು ॥ ೪೬ ॥
ಅದರಿಂದ ಹೀಗೆ ಪ್ರಜ್ಞೆಯನ್ನೂ ಪುರುಷ ಪ್ರಯತ್ನವನ್ನೂ ಸೇರಿಸಿ ಕೆಲಸ ಮಾಡಿದರೆ, ಕಾರ್ಯಸಿದ್ಧಿಯು ಸುಲಭವಾಗಿ ಆಗಿಯೇ ಆಗುವುದು. ತ್ಯಾಗಿಯೂ ಶೂರನೂ ವಿದ್ವಾಂಸನೂ ಆದವನಲ್ಲಿ ಜನರಿಗೆ ವಿಶ್ವಾಸವು ಹುಟ್ಟುವುದು. ಆ ವಿಶ್ವಾಸದಿಂದ ಧನವು, ಧನದಿಂದ ವೈಭವವು, ವೈಭವದಿಂದ ರಾಜ್ಯವೂ ಸಿದ್ಧಿಸುವುವು.” ಎಂದನು.
ಮೇಘವರ್ಣನು “ನೀತಿಶಾಸ್ತ್ರಗಳು ಕೂಡಲೇ ಫಲವನ್ನು ಕೊಡತಕ್ಕವು. ನೀನು ಇದನ್ನು ಮಾಡಿ ತೋರಿಸಿದೆ? ಎಂದನು. ಸ್ಥಿರಜೀವಿಯು “ದೇವ, ಯಾವುದೋ ಕಾಲದಲ್ಲಿ ಬಹುಕಷ್ಟದಿಂದ ಫಲಿಸುವ ಕಾರ್ಯವನ್ನು ಮಾಡಿ ಆಗುವುದೇನು? ಆಡಿದುದನ್ನು ಮಾಡಿ ತೋರಿಸಬೇಕು. ಇಲ್ಲವಾದರೆ ಲೋಕವು ನಗುವುದು. ಅದರಿಂದ ಸಣ್ಣ ಕಾರ್ಯದಲ್ಲಾದರೂ ಬುದ್ಧಿವಂತನು ಅನಾದರವನ್ನು ತೋರಬಾರದು. ಇನ್ನು ನಾನು ಮಾಡಬೇಕಾಗಿದ್ದ ಕಾರ್ಯವನ್ನು ಮಾಡಿದೆನಾಗಿ, ನೆಮ್ಮದಿಯಿಂದಿರುವೆನು. ನೀನೂ ನಿಷ್ಕಂಟಕವಾದ ಈ ರಾಜ್ಯವನ್ನು ಪ್ರಜಾಪಾಲನ ತತ್ಪರನಾಗಿ, ಪುತ್ರ ಪೌತ್ರ ಕ್ರಮದಿಂದ ಅಚಲವಾಗಿ ಅನುಭವಿಸು. ಒಂದು ಮಾತ್ರ ನೆನೆಪಿರಲಿ.
ಪ್ರಜೆಯ ರಂಜನೆ ಮುಖ್ಯ ರಾಜನಿಗೆ ॥
ಯಾವ ರಾಜ್ಯದ ಪ್ರಜೆಯು ಸುಖಿಸದೋ ॥
ರಾಜ್ಯವದು ಬರಿ ಬರಿದು ಫಲವಿಲ್ಲ ॥
ಆಡ ಕತ್ತಿನ ಮೊಲೆಯ ತೆರದಿಂದ ॥ ೪೭ ॥
ಅದರಿಂದ ಮದ್ದಾನೆಯ ಕಿವಿಯಂತೆ ಚಂಚಲವಾದ ರಾಜ್ಯ ಲಕ್ಷ್ಮಿಯನ್ನು ನ್ಯಾಯ ನಿಷ್ಠನಾಗಿದ್ದುಕೊಂಡು ಉಪಭೋಗಿಸು.” ಎಂದು ಆಶೀರ್ವಾದ ಮಾಡಿದನು.
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ
“ವೈರ ಸಾಧಿಸುವುದು” ಎಂಬ
ಮೂರನೆಯ ತಂತ್ರವು ಮುಗಿದುದು.
*****









