ಒಂದಾನೊಂದು ಕಾಡಿನಲ್ಲಿ ಒಂದು ಹುಲಿ ಇತ್ತು. ಅದಕ್ಕೆ ಒಂದು ದಿನ ತನಗೆ ಯಾವ ಬೇಟೆಯೂ ಸಿಕ್ಕದೆ ಹೋಯಿತು. ಹಾಗೆಯೇ ಅಲೆಯುತ್ತ ಬಂದು ದೊಡ್ಡ ಗುಹೆಯನ್ನು ಕಂಡು “ರಾತ್ರಿಯಲ್ಲಿ ಯಾವುದಾದರೂ ಪ್ರಾಣಿಯು ಇಲ್ಲಿಗೆ ಬಂದೇ ಬರುವುದು. ನಾನು ಇಲ್ಲಿದ್ದರೆ ತಪ್ಪದೆ ನನಗೆ ಆಹಾರವು ದೊರೆಯುವುದು” ಎಂದು ಅದರಲ್ಲಿ ಹೋಗಿ ಕುಳಿತುಕೊಂಡಿತು.
ಅಷ್ಟು ಹೊತ್ತಾದ ಮೇಲೆ ಆ ಗುಹೆಯಲ್ಲಿ ವಾಸವಾಗಿದ್ದ ನರಿಯು ಅಲ್ಲಿಗೆ ಬಂತು. ನೋಡಿದರೆ, ಹುಲಿಯ ಹೆಜ್ಜೆಯಗುರುತುಗಳು. ಒಳಕ್ಕೆ ಹೋಗಿರುವುದು ಕಾಣಿಸುತ್ತಿದೆ. ಈಚೆಗೆ ಬಂದ ಗುರುತುಗಳು ಇಲ್ಲ. ಅದನ್ನು ಕಂಡು ನರಿಯು “ಸರಿ ಹುಲಿಯು ಒಳಗೆ ಹೋಗಿದೆ. ನಾನೂ ಹೋದರೆ ಉಳಿಯುವಂತಿಲ್ಲ. ಏನು ಮಾಡುವುದು? ಅದು ಒಳಗೆ ಇದೆಯೋ ಹೊರಟೇ ಹೋಗಿದೆಯೋ ತಿಳಿಯುವುದೆಂತು?” ಎಂದು ಕೊಂಚಹೊತ್ತು ಯೋಚಿಸಿ ಒಂದು ಉಪಾಯವನ್ನು ಮಾಡಿತು.
ಬಿಲಕ್ಕೆ ಅಷ್ಟು, ದೂರದಲ್ಲಿ ನಿಂತುಕೊಂಡು ಒಂದು ಸಲ ಕೆಮ್ಮಿತು. “ಬಿಲವೇ, ಬಿಲವೇ” ಎಂದು ಎರಡು ಸಲ ಕರೆದು ಅಷ್ಟು ಹೊತ್ತು ಸುಮ್ಮನಿತ್ತು. ಮತ್ತೆ ” ಬಿಲವೇ, ಸರಿ. ನನಗೂ ನಿನಗೂ ನಡೆದಿದ್ದ ಮಾತು ಮರೆತುಬಿಟ್ಟೆ. ನಾನು ಇಲ್ಲಿಗೆ ಬಂದು ಕೆಮ್ಮಿದ ಕೊಡಲೇ ಯಾವೊತ್ತು ನೀನು ಒಳಗೆ ಬಾ ಎಂದು ಕರೆಯುವುದಿಲ್ಲವೋ ಆವೊತ್ತು ನಾನು ಇನ್ನೆಲ್ಲಿಗಾದರೂ ಹೊರಟು ಹೋಗುವೆನು ಎಂದು ಹೇಳಿದ್ದುದನ್ನು ನೀನು ನೆನೆದುಕೊ. ಈ ದಿನ ನೀನು ಮಾತಾಡಲಿಲ್ಲ. ನನ್ನನ್ನು ಕರೆಯಲಿಲ್ಲ. ಇದೋ ಮತ್ತೊಂದು ಬಿಲಕ್ಕೆ ಹೋಗುತ್ತೇನೆ.” ಎಂದಿತು.
ಒಳಗಿದ್ದ ಹುಲಿಯು ಇದನ್ನು ಕೇಳಿತು. “ಓಹೋ, ನಿತ್ಯವೂ ಈ ಬಿಲವು ನರಿಯನ್ನು ಕರೆಯುತ್ತಿತ್ತು. ಈ ದಿನ ನಾನು ಬಂದಿರುವೆನೆಂದು ಈ ಬಿಲವು ಹೆದರಿ ಮಾತನಾಡದೆ ಇದೆ. ಇರಲಿ. ನಾನೇ ಬಿಲದ ಪರವಾಗಿ ಮಾತನಾಡುವೆನು.” ಎಂದುಕೊಂಡು, ಬಾ,ಒಳಕ್ಕೆ ಬಾ ಎಂದು ಕರೆಯಿತು. ಹುಲಿಯ ಧ್ವನಿಯೆಂದರೆ ಸಾಮಾನ್ಯವೆ? ಗುಡುಗಿನ ಹಾಗೆ ಬಿಲಕ್ಕೆ ಬಿಲವೇ ಆ ಧ್ವನಿಯಿಂದ ತುಂಬಿ
ಮೊಳಗಿತು.
ನರಿಯು ಅದನ್ನು ಕೇಳಿ “ಸಧ್ಯಕ್ಕೆ ಬದುಕಿದಂತಾಯಿತು ಎಂದು ಅಲ್ಲಿ ಒಂದು ಗಳಿಗೆಯೂ ನಿಲ್ಲದೆ ಕಾಲಿಗೆ ಬುದ್ದಿ ಹೇಳಿತು. ಹಾಗೆ ನಾವೂ ಅಪಾಯ ಬರುವುದಕ್ಕಿಂತ ಮುಂಚೆ ಎಲ್ಲಿಯಾದರೂ ಹೋಗಿ ಬದುಕಿಕೊಳ್ಳೋಣ? ಎಂದು ಹಾಗೆಯೇ ಮಾಡಿತು.
ರಕ್ತಾಕ್ಷನು ಹೊರಟು ಹೋಗುತ್ತಲೂ ಸ್ಥಿರಜೀವಿಯು ಅತಿ ಸಂತೋಷಪಟ್ಟು ಕೊಂಡು “ಆಹಾ, ನಮಗೆ ಅನುಕೂಲವಾಯಿತು. ಈತನು ದೀರ್ಘದರ್ಶಿಯು. ಮುಂದೇನಾಗುವುದು ಎಂಬುದನ್ನು ಬಲ್ಲವನು. ಇವರು ಮೂಢರು. ಅದರಿಂದ ಸುಲಭವಾಗಿ ನನಗೆ ಬಲಿಯಾಗುವರು. ದೀರ್ಘದರ್ಶಿಯಾದ ಆ ಮಂತ್ರಿಯನ್ನು ಬಿಟ್ಟು ಈ ಅರಸನು ಕೆಟ್ಟನ್ನು. ಮುಖ್ಯ ನಮ್ಮ ಅದೃಷ್ಟ ದೊಡ್ಡದು” ಎಂದುಕೊಂಡಿತು.
ಸ್ಥಿರಜೀವಿಯು ದುರ್ಗದ ಬಾಗಿಲಲ್ಲಿ ತನ್ನ ಗೂಡು ಮಾಡಿಕೊಂಡಿತು. ಗೂಡಿಗೆ ದಿನವೂ ಒಂದೊಂದು ಕಡ್ಡಿಯನ್ನು ತಂದು ಇಟ್ಟುಕೊಳ್ಳುವುದು.
ಆ ಉಲೂಕ ಮೂರ್ಖರು ಗೂಡು ಬೆಳೆಯುತ್ತಿರುವುದು ತಮಗೆ ಮೃತ್ಯು ಎಂಬುದನ್ನು ತಳಿಯದೆ ಹೋದರು. ಕೇಳಿಲ್ಲವೆ?
ದೈವ ಸಹಾಯವು ತಪ್ಪಿದ ನರನು ॥
ಶತ್ರುವ ಮಿತ್ರನು ಎಂದಪ್ಪುವನು ॥ ೩೮ ॥
ಮಿತ್ರನ ಬಯ್ವನು ಹೊರದೂಡುವನು ॥
ಪಾಪವ ಮಂಗಳವೆಂದೆಸಗುವನು ॥ ೩೯ ॥
ಆ ಗೂಗೆಗಳಿಗೆ ಹಗಲಿನಲ್ಲಿ ಕಣ್ಣು ಕಾಣಿಸದು. ಅದನ್ನು ಬಲ್ಲ ವಾಯಸವು ದುರ್ಗದ ದ್ವಾರದಲ್ಲಿ ಬೇಕಾದ ಹಾಗೆ ಕಡ್ಡಿಗಳನ್ನು ಕೂಡಿಹಾಕಿ ಒಂದು ದಿನ ತನ್ನ ಅರಸನ ಬಳಿಗೆ ಓಡಿತು. “ದೇವ, ರಿಪುಗಳ ಗುಹೆಯನ್ನು ಈಗ ಸುಟ್ಟುಬಿಡಬಹುದು. ಅದರಿಂದ ತಾವು ತಮ್ಮ ಪರಿವಾರದವರೊಡನೆ ಅಲ್ಲಿಗೆ ಒಬ್ಬೊಬ್ಬರು ಒಂದೊಂದು ಉರಿಯುತ್ತಿರುವ ಕಡ್ಡಿಯನ್ನು ತೆಗೆದುಕೊಂಡು ಬಂದು ನನ್ನ ಗೂಡಿಗೆ ಹಾಕಬೇಕು. ಆಗ ಉರಿಗೆ ಒಳಗಿರುವ ಗೂಗೆಗಳೆಲ್ಲ ನರಕದಲ್ಲಿ ಬೆಂದು ಹೋಗುವ ಹಾಗೆ ಬೆಂದು ಹೋಗುವರು” ಎಂದು ಕೈ ಮುಗಿಯಿತು.
ಮೇಘವರ್ಣನು ಸ್ಥಿರಜೀವಿಯನ್ನು “ನಿನ್ನನ್ನು ನೋಡಿ ಬಹಳ ದಿನವಾಯಿತು. ನಿನ್ನ ವೃತ್ತಾಂತವನ್ನು ಹೇಳು” ಎಂದು ಕೇಳಿದನು. ಸ್ಥಿರಜೀವಿಯು “ದೇವ, ಅದನ್ನೆಲ್ಲಾ ಹೇಳುವುದಕ್ಕೆ ಹೊತ್ತಿಲ್ಲ. ಶತ್ರುಗಳ ಕಡೆಯ ಗೂಡಚಾರನೇನಾದರೂ ನಾನಿಲ್ಲಿಗೆ ಬಂದಿರುವುದನ್ನು ತಿಳಿದರೆ ನಮ್ಮ ಕೆಲಸವು ಕೆಡುವುದು. ಆ ಗೂಗೆಗಳು ಆ ಸ್ಥಲವನ್ನು ಬಿಟ್ಟು ಬೇರೆ ಕಡೆಗೆ ಹೋದರೆ! ಅದರಿಂದ ಬೇಗ ಮಾಡಬೇಕಾದ ಕೆಲಸವನ್ನು ತಳ್ಳಿ ಮಾಡಿದರೆ, ದೇವತೆಗಳಿಗೆ ಕೋಪವು ಬರುವುದು. ಅವರು ಕೆಲಸಕ್ಕೆ ಇಲ್ಲದ ವಿಘ್ನಗಳನ್ನು ಮಾಡುವರು. ಮಾಡಬೇಕಾದ ಕೆಲಸವನ್ನು ಯಾವಾಗ ಮಾಡ ಬೇಕೋ ಆಗಲೇ ಮಾಡಬೇಕು ಇಲ್ಲದಿದ್ದರೆ ಆ ಕಾರ್ಯದ ಫಲವನ್ನು ಕಾಲವು ತಿಂದು ಬಿಡುವುದು. ಮಾಡಿದ ಕಾರ್ಯವು ವಿಫಲವಾಗುವುದು. ಅದರಿಂದ, ತಾವು ಮೊದಲು ಬಂದು ಆ ಗುಹೆಗೆ ಬೆಂಕಿಯಿಟ್ಟು ಬಿಡಿ. ಅದು ಬೆಂದು ಹೋಗಲಿ. ಅನಂತರ, ನನ ಕಥೆಯನ್ನು ವಿಸ್ತಾರವಾಗಿ ಹೇಳುವೆನು.” ಎಂದನು.
ಮೇಘವರ್ಣನೂ ಅದರಂತೆಯೇ ತನ್ನ ಪ್ರಜೆಗಳಿಗೆಲ್ಲಾ ಅಪ್ಪಣೆ ಮಾಡಿದನು. ವಾಯಸಗಳೆಲ್ಲವೂ ಉರಿಯುತ್ತಿರುವ ಒಂದೊಂದು ಕಡ್ಡಿಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹೊರಟವು. ಆ ಗುಹೆಯ ಬಾಗಿಲಲ್ಲಿ ಇದ್ದ ಸ್ಥಿರಜೀವಿಯ ಗೂಡಿನಲ್ಲಿ ಆ ಉರಿಯುವ ಕಡ್ಡಿಗಳನ್ನು ಹಾಕಿದುವು. ಉರಿಯು ಧಗಧಗನೆ ಹತ್ತಿ ಬಿಸಿಯೂ ಹೊಗೆಯೂ ಗುಹೆಯನ್ನೆಲ್ಲ ವ್ಯಾಪಿಸಿದುವು.
ಆಗ ಹಗಲು, ಆ ಗೂಗೆಗಳಿಗೆ ಕಣ್ಣು ಕಾಣಿಸದು. ಎತ್ತ ಹೋಗಬೇಕೋ ತಿಳಿಯದು. “ಅಯ್ಯೋ ರಕ್ತಾಕ್ಷನ ಮಾತು ಕೇಳದೆ ನಾವು ಕೆಟ್ಟೆವಲ್ಲಾ!” , ಎಂದು ಅಳುತ್ತ ಪ್ರಾಣಬಿಟ್ಟವು. ಮೇಘ ವರ್ಣನು ಶತ್ರುವು ನಿಶ್ಶೇಷನಾದನೆಂದು ಸಂತೋಷ ಪಟ್ಟುಕೊಳ್ಳುತ್ತ ತಾನು ಮೊದಲಿದ್ದ ಆಲದ ಮರಕ್ಕೆ ಬಂದು ಸೇರಿಕೊಂಡನು.
ಅನಂತರ ಮೇಫವರ್ಣನು ಸಿಂಹಂಸನದಲ್ಲಿ ಕುಳಿತು ತನ್ನವರೆಲ್ಲಾ ಸಭೆಯಲ್ಲಿ ಕುಳಿತಿರಲು, ಸ್ಥಿರಜೀವಿಯನ್ನು ಕುರಿತು “ತಾತ ನೀನು ಶತ್ರು ಮಧ್ಯದಲ್ಲಿ ಹೇಗೆ ಇಷ್ಟು ಕಾಲವನ್ನು ಕಳೆದೆ? ಅದನ್ನು ಕೇಳಲು: ನಮಗೆ ಬಹಳ ಆಸೆಯಾಗಿರುವುದು. ಪುಣ್ಯವಂತರು ಒಂದುಗಳಿಗೆ ಶತ್ರುಗಳ ಮಧ್ಯ ಇರುವುದಕ್ಕಿಂತ ಬೆಂಕಿಯಲ್ಲಿ ಬಿದ್ದು ಸಾಯುವುದೇ ಲೇಸು ಎನ್ನುವರು. ಹೀಗಿರುವಲ್ಲಿ ಇಷ್ಟು ದೀರ್ಘ ಕಾಲ ನೀನು ಹೇಗಿದ್ದೆ” ಹೇಳು ಎಂದು ಕೇಳಿದನು.
ಆತನು ಹೇಳಿದನು: “ವತ್ಸ, ಮುಂದೆ ಆಗಬೇಕಾಗಿರುವದೊಡ್ಡ ಪ್ರಯೋಜನವನ್ನು ಕುರಿತು ಯೋಚಿಸುತ್ತ ಸದ್ಯದಲ್ಲಿ ಅನುಭವಿಸುವ ಕಷ್ಟವನ್ನು ಸೇವಕರು ಮರೆತು ಬಿಡುವರು. ನಮ್ಮಂಥವರದು ಇರಲಿ. ಪಾಂಡವರು ಅಜ್ಞಾತವಾಸವನ್ನು ಮಾಡಿದ ಕಥೆಯನ್ನು ನೀನು ಕೇಳಿಲ್ಲವೆ? ಮಹಾವೀರನಾದ ಭೀಮಸೇನನು ಶತ್ರುಗಳನ್ನು ಅರೆದು ಹಾಕುವ ದಂಡವನ್ನು ಬಿಟ್ಟು ಸೌಟು ಹಿಡಿದುಕೊಂಡು
ಒಂದು ವರ್ಷ ಅಡುಗೆಯ ಭಟ್ಟನಾಗಿರಲಿಲ್ಲವೆ? ಮೂರು ಲೋಕದ ಗಂಡು ಎಂದು ಪ್ರಸಿದ್ಧನಾದ ಅರ್ಜುನನು ಗಾಂಡೀವವನ್ನು ಬಿಟ್ಟು ಬಳೆಗಳನ್ನು ತೊಟ್ಟುಕೊಂಡು ಜಡೆಯನ್ನು ಹಾಕಿಕೊಂಡು ಕುಣಿತವನ್ನು ಕಲಿಸಿಕೊಂಡು ಇರಲಿಲ್ಲವೆ? ದ್ರುಪದ ಮಹಾರಾಜನ ಮಗಳಾಗಿ ಪಾಂಡು ಮಹಾರಾಜನ ಸೊಸೆಯಾಗಿ, ಪಾಂಡವರ ಮಡದಿಯಾದ ದ್ರೌಪದಿಯು ವಿರಾಟರಾಯನ ಅಂತಃಪುರದಲ್ಲಿ ಗಂಧವನ್ನು ತೇಯುತ್ತ, ಅರಸಿತಿಯರ ಆಳಾಗಿ ಕಾಲಹರಣ ಮಾಡಲಿಲ್ಲವೆ? ಅದಕ್ಕಿಂತ ನಮ್ಮದೇನು?”
ಮೇಫವರ್ಣನು ಅದನ್ನು ಕೇಳಿ “ತಾತ, ಶತ್ರುಗಳ ಸಹವಾಸದಲ್ಲಿ ಇರುವುದು ಎಂದರೆ ಕತ್ತಿಯ ಮೇಲೆ ನಡೆದಹಾಗೆ, ಅಲ್ಲವೆ?” ಎಂದು ಕೇಳಲು, ಸ್ಥಿರಜೀವಿಯು “ಹೌದು. ಆದರೆ, ಆ ಉಲೂಕಗಳಂತಹ ಮಹಾಮೂರ್ಹರನ್ನು ನಾನು ನೋಡಲಿಲ್ಲ, ಅವರಲ್ಲಿ ಮಹಾಪ್ರಾಜ್ಞನೂ ಅನೇಕ ಶಾಸ್ತ್ರಗಳನ್ನು ಬಲ್ಲವನೂ ಅಪ್ರತಿಮ ಬುದ್ಧಿಯೂ ಆದ ರಕ್ತಾಕ್ಷನೆಂಬ ಒಬ್ಬ ಮಂತ್ರಿಯನ್ನು ಬಿಟ್ಟರೆ,ಬುದ್ಧಿವಂತರೇ ಇರಲಿಲ್ಲ. ಆತನೊಬ್ಬನೇ ನನ್ನ ಅಂತರಂಗದಲ್ಲಿ ಇರುವುದೇನು ಎಂಬುದನ್ನು ತಿಳಿದಿದ್ದವನು. ಅಷ್ಟೇನು? ದೇವ, ಶತೃಗಳು ಎಲ್ಲಿ ಹೇಗೆ ಮೋಸಮಾಡುವರೋ ಹೇಳಲಾಗುವುದಿಲ್ಲ. ಅದರಿಂದ ನಾವು ಯಾವಾಗಲೂ ಎಚ್ಚರವಾಗಿಯೇ ಇರಬೇಕು. ಕೇಳಿಲ್ಲವೆ?
ರೋಗಗಳು ತಿನ್ನುವುವು ಪಥ್ಯವುಂಬಾತನನು ॥
ದುರ್ನೀತಿ ತಿನ್ನುವುದು ರಾಜ್ಯ ಸಾಮ್ರಾಜ್ಯವನು ॥ ೪೦ ॥
ಲೋಭ ತಿಂಬುದು ಯಶವ, ಮೋಸ ಕೆಡಿಸುವುದು ಮೈತ್ರಿಯನು ॥
ಕುಲವ ಕೊಲ್ವುದು ದುರಾಚರ ಹಣದಾಸೆ ಧರ್ಮವನು ॥
ಬೆಳೆಸದು ಕಾಮ ವಿದ್ಯ ಕಾರ್ಪಣ್ಯ ಕೊಡದು ಸೌಖ್ಯವನು ॥
ದುಷ್ಟ ಮಂತ್ರಿಯು ಕಳೆವ ಭೂಮಿಪನ ಸಾಮ್ರಾಜ್ಯವನು ॥೪೧ ॥
ಅಲ್ಲದೆ, ಮಾನವಪಮಾನಗಳ ಚಿಂತಿಸದೆ, ಚತುರನಾ ಸ್ವಾರ್ಥವನ್ನು ॥
ಗೆಲಬೇಕು, ಸ್ವಾರ್ಥವನು ತೊರೆವುದೇ ಮೂರ್ಖತೆಯು ಲೋಕದಲ್ಲಿ ॥೪೨॥
ಕೇಳಿಲ್ಲವೆ? ಕಪ್ಪೆಯ ಕುಲವಂ ತಿನ್ನಲು ಸರ್ಪವು |
ಕಾಣೆಯ ಹೊತ್ತಿತವುಗಳ ಬೆನ್ನಲ್ಲಿ ॥ ೪೩ ॥
ಮೇಘವರ್ಣನು ಅದೆಂತು ಎಂದು ಕೇಳಲು ಸ್ಥಿರಜೀವಿಯು ಹೇಳಿದನು:
*****
ಮಂದವಿಷನ ಕಥೆ ಓದಿ