ಹಿಂದುಸ್ತಾನದಲ್ಲಿ ಹುಟ್ಟುವ ಕಬ್ಬಿನಲ್ಲಿ ೧೨೦ ಲಕ್ಷ ಟನ್ನು ಕಬ್ಬು ತಿನ್ನುವದರಲ್ಲಿ ಮತ್ತು ಕುಡಿಯಲಿಕ್ಕೆ ಹಾಲು ತೆಗೆಯುವದರಲ್ಲಿ ಉಪಯೋಗಿಸಲ್ಪಡುತ್ತದೆ. ೧೫ ಲಕ್ಷ ಟನ್ನು ಕಬ್ಬಿನಿಂದ ಸಕ್ಕರೆಯು ತಯಾರಾಗುತ್ತದೆ. ೪೪೦ ಲಕ್ಷ ಟನ್ನು ಕಬ್ಬಿನಿಂದ ಬೆಲ್ಲವು ತಯಾರಾಗುತ್ತದೆ.
****
ಈ ಮಾಹಿತಿಯು ಪರಿಪೂರ್ಣವಿಲ್ಲ. ಸ್ವಲ್ಪ ಹೆಚ್ಚು ಮಾಹಿತಿಯು ನಮಗೆ ಬೇಕಾಗಿತ್ತು. ಅಂದರೆ ೪೪೦ ಲಕ್ಷ ಟನ್ನ ಕಬ್ಬಿನಿಂದಾದ ಬೆಲ್ಲದಲ್ಲಿ ಗೋದಿಯ ಹುಗ್ಗಿಗೆ ಎಷ್ಟು ಉಪಯೋಗವಾಗುತ್ತದೆ ? ಮಾಲ್ದಿ ಮಾಡಲಿಕ್ಕೆ ಎಷ್ಟು ಬೆಲ್ಲ ಹತ್ತುತ್ತದೆ ? ಹೋಳಿಗೆ ಕರಿಗಡಬಿಗೆ ಎಷ್ಟು ಹತ್ತುತ್ತದೆ ? ಅಳುವ ಹುಡುಗರ ಕೈಯಲ್ಲಿ ಕೊಡಲು ಎಷ್ಟು ಬೆಲ್ಲ ಖರ್ಚಾಗುತ್ತದೆ ? ಇಲಿ ಇರಿವೆಗಳು ಎಷ್ಟು ತಿನ್ನುತ್ತವೆ ?
* * * *
ಅದರಂತೆ ಸಕ್ಕರೆಯು ಚಹಾಕ್ಕೆ ಎಷ್ಟು ಉಪಯೋಗವಾಗುತ್ತದೆ ? ಚೋಂಗೆಯಮೇಲೆ ಹಾಕಲು ಎಷ್ಟು ಸಕ್ಕರೆಯು ಉಪಯೋಗಿಸಲ್ಪಡುತ್ತದೆ? ಮಠ ದರ್ಗಾಗಳಿಗೆ ಎಷ್ಟು ಸಕ್ಕರೆಯ ಪುಡಿಕೆಗಳು ಹೋಗುತ್ತವೆ ? ಬೆಂಡು ಬೆತ್ತಾಸ ರೇವಡಿ ಮೊದಲಾದ ಮಿಠಾಯಿಯ ಸಾಮಾನು ಮಾಡಲು ಎಷ್ಟು ಸಕ್ಕರೆಯು ಖರ್ಚಾಗುತ್ತದೆ ?
* * * *
ಚಿಕಿತ್ಸಕರಾದ ಸಂಶೋಧಕರಿಗೆ ಇನ್ನೂ ವಿಶಾಲ ಕ್ಷೇತ್ರವಿದೆ. ಇನ್ನೂ ಹೆಚ್ಚು ಮಾಹಿತಿಯನ್ನು ಹುಡುಕಿ ತೆಗೆಯುವದು ಶಕ್ಯವಿದೆ. ಉದಾಹರಣಾರ್ಥ: ಕೇವಲ ಸಕ್ಕರೆಯನ್ನು ಉಪಯೋಗಿಸುವ ಜನರೆಷ್ಟು ? ಕೇವಲ ಬೆಲ್ಲವನ್ನು ಉಪಯೋಗಿಸುವ ಜನರೆಷ್ಟು ? ಸಕ್ಕರೆ ಬೆಲ್ಲ ಎರಡನ್ನೂ ಉಪಯೋಗಿಸುವ ಜನರೆಷ್ಟು ? ಎರಡೂ ಉಪಯೋಗ ಮಾಡದ ಜನರೆಷ್ಟು ? ಬೆಲ್ಲವನ್ನು ಉಪಯೋಗಿಸುವದಿಲ್ಲೆಂದೂ ಕೇವಲ ಸಕ್ಕರೆಯನ್ನು ಉಪಯೋಗಿಸುತ್ತೇವೆಂದೂ ಜಂಭ ಕೊಚ್ಚಿ ಮನೆಯಲ್ಲಿ ಮಾತ್ರ ಬೆಲ್ಲವನ್ನೇ ಉಪಯೋಗಿಸುವ ಬಿಳಿ ಛಾಯದ ಜನರೆಷ್ಟು ? ಅದರಂತೆ ಪರದೇಶದ ಸಕ್ಕರೆಯನ್ನು ಉಪಯೋಗಿಸುವದಿಲ್ಲೆಂದೂ ದೇಶಿ ಸಕ್ಕರೆಯನ್ನಾಗಲಿ ಅದು ಸಿಗದಿದ್ದರೆ ಬೆಲ್ಲವನ್ನಾಗಲಿ ಉಪಯೋಗಿಸುತ್ತೇವೆಂದು ಹೇಳಿ ಮನೆಯಲ್ಲಿ ಮಾತ್ರ ಪರದೇಶದ ಸಕ್ಕರೆಯನ್ನೇ ಉಪಯೋಗಿಸುವ ಸ್ವದೇಶಾಭಿಮಾನಿಗಳೆಷ್ಟು ? ಮೊದಲಾದ ಮನೋರಂಜಕವಾದ ಮಾಹಿತಿಯನ್ನು ಮನಸ್ಸು ಕೊಟ್ಟು ಯಾರಾದರೂ ಇನ್ನಾದರೂ ತೆಗೆಯುವರೆಂದು ಬಲವಾದ ಆಶೆ ಇದೆ.
ಅರ್ಥಶಾಸ್ತ್ರ ಸಂಶೋಧಕರು ಇತ್ತ ಅವಶ್ಯ ಲಕ್ಷಗೊಡಬೇಕು. ನಮ್ಮ ಇತಿಹಾಸ ಸಂಶೋಧನೆಯನ್ನು ಪರಕೀಯರು ಮಾಡಿದರು. ನಮ್ಮ ಭಾಷೆಗಳ ಸಂಶೋಧನೆಯನ್ನು ಸಹ ಪರದೇಶದವರು ಮಾಡಿದರು. ಏನು ? ನಮ್ಮ ಹುಗ್ಗಿ, ನಮ್ಮ ಮಾಲ್ದಿ, ನಮ್ಮ ಹೋಳಿಗೆ ಕಡಬು, ನಮ್ಮ ಚೊಂಗೆಗಳ ವಿಷಯವಾಗಿಯೂ ಪರಕೀಯರೇ ಸಂಶೋಧನೆಯನ್ನು ಮಾಡಬೇಕೆ ? ಸಕ್ಕರೆ ಬೆಲ್ಲ ಇವೆರಡರಲ್ಲಿ ಅಂತರ-ಸಕ್ಕರೆಯ ಬಣ್ಣ ಹಳದಿ, ಕೆಂಪು, ಬಿಳಿ ಇರುತ್ತದೆ. ಬೆಲ್ಲವ ಬಣ್ಣ ಬೆಲ್ಲದಂತಹದಿರುತ್ತದೆ. ಸಕ್ಕರೆ ಹಗರು; ಬೆಲ್ಲ ಜಡ, (ಆದರೆ ಒಂದು ಸೇರು ಸಕ್ಕರೆ, ಒಂದು ಸೇರು ಬೆಲ್ಲ ಎರಡೂ ಆಷ್ಟೆ ಭಾರವಾಗಿರುತ್ತವೆ !) ಬೆಲ್ಲವನ್ನು ಚಾಪಿಯಲ್ಲಿ ತುಂಬಿ ಇಡುತ್ತಾರೆ. ಸಕ್ಕರೆಯನ್ನು ಡಬ್ಬಿಗಳಲ್ಲಿ ತುಂಬಿ ಇಡುತ್ತಾರೆ. ಬೆಲ್ಲಕ್ಕೆ ಮೀಸಲು ಇದೆ. [ಗಾದೆಯ ಮಾತು: ಅಂಗಡಿಯ ಬೆಲ್ಲ ಮನೆಗೆ ಮೀಸಲ! ] ಸಕ್ಕರೆಗೆ ಮೀಸಲು ಇಲ್ಲ. ಸಕ್ಕರೆಯ ಮೇಲೆ ಸುಧಾರಿಸಿದವರ ಪ್ರೀತಿ ಬಹಳ, ಬೆಲ್ಲದ ಮೇಲೆ ಮುದುಕೆಯರ ಮತ್ತು ಸಣ್ಣ ಹುಡುಗರ ಪ್ರೀತಿ ಬಹಳ. ಅಮಾವಾಸ್ಯೆ ಹುಣ್ಣಿವೆಗಳಿಗೆ ಬೆಲ್ಲವ ಧಾರಣಿಯು ಹೆಚ್ಚಾಗುತ್ತದೆ. ಹಿಂದುಸ್ತಾನ ಸರಕಾರದವರು ಸಕ್ಕರೆಯ ಮೇಲಿನ ಕರವನ್ನು ಹೆಚ್ಚಿಸಿದರೆ ಮಾತ್ರ, ಸಕ್ಕರೆಯ ಧಾರಣೆಯು ಬೆಳೆಯುತ್ತದೆ. ಹಳೆಯ ಬೆಲ್ಲ ಔಷಧಕ್ಕೆ ಉಪಯೋಗ ಬೀಳುತ್ತದೆ. ಸಕ್ಕರೆಯನ್ನು ಹಳೆಯದಾಗಗೊಡುವದಿಲ್ಲ. ಇನ್ನೂ ಹೊಸದಿರುವಾಗಲೇ ಅದನ್ನು ಖರ್ಚು ಮಾಡಿಬಿಡುತ್ತಾರೆ.
*****






