ಅಂಗಿಯ ಮೇಲದು ಶಾಯಿಯ ಚುಕ್ಕಿ.
ಜೇಬಿನಲ್ಲಿ ಚಕ್ಕಲಿ ಅವಲಕ್ಕಿ,
ನಾಲಿಗೆ ಬಹಳೇ ಹೋಗಿದೆ ಸೊಕ್ಕಿ !
ಬಂದ ಬಂದನವ ಗೋವಿಂದಾ.
ಮಾಮಿಡಿಯೊಂದೂ ಮರದೊಳಗಿಲ್ಲ;
ಪೇರಲ ಹಣ್ಣೂ ಕಾಣುವದಿಲ್ಲ;
ಆತನು ಹುಡುಕದ ಗಿಡಮರವಿಲ್ಲ !
ಬಂದ ಬಂದನವ ಗೋವಿಂದಾ
ಸಂಗಡ ಹುಡುಗರ ತಂಡವ ಕಟ್ಟಿ.
ಊರಿನ ನಾಲ್ಕೂ ಗಡಿಯನೆ ಮುಟ್ಟಿ,
ತಂಟೆಯ ತರುವುದಕವನೇ ಗಟ್ಟಿ !
ಬಂದ ಬಂದನವ ಗೋವಿಂದಾ
ಕುಂಬಾರನ ಗಡಿಗೆಗೆ ಗುರಿ ಹಿಡಿದು,
ಮಣ್ಣಿನ ಕೊಡವನು ಠಣ್ಣನೆ ಒಡೆದು,
ಅಡಗಿದ ಸ್ಥಳದಿಂ ಬೇಗನೆ ನಡೆದು
ಬಂದ ಬಂದನವ ಗೋವಿಂದಾ
ಹುಣಸೆಯ ಮರವನು ತುದಿವರೆಗೇರಿ,
ಹುಲ್ಲಿನ ಬಣವೆಗೆ ಡಬ್ಬನೆ ಹಾರಿ,
ಅತುಲ ಪರಾಕ್ರಮ ಜಗದಲಿ ತೋರಿ
ಬಂದ ಬಂದನವ ಗೋವಿಂದಾ.
ಮೂಲೆಮೂಲೆಗೂ ಅವನದೆ ಕಣ್ಣು :
ಬೇಲಿಯ ಅಂಚಿನ ಅನಾಸು ಹಣ್ಣು !
ಆತನ ಬಾಯಲಿ ಬೀಳಲಿ ಮಣ್ಣು !
ಬಂದ ಬಂದನವ ಗೋವಿಂದಾ.
ಮಂಗನವೊಲು ಟೊಂಗೆಯ ಹಾರಾಟ,
ಕುರಿಮರಿ ಪರಿಯಲಿ ಜಿಗಿಜಿಗಿದಾಟ,
ಸಂಜೆಯ ವರೆಗೂ ಬರಿ ಚೆಲ್ಲಾಟ!
ಬಂದ ಬಂದನವ ಗೋವಿಂದಾ.
ನೆಟ್ಟನೆ ಮೂಗೂ, ಉದ್ದನ ಜುಟ್ಟು,
ಜಟ್ಟಿಯ ತೆರದಲಿ ದೇಹದ ಕಟ್ಟು,
ಇವನೇ ಶ್ಯಾಮಲ ವರ‍್ಣದ ಕಿಟ್ಟು !
ಬಂದ ಬಂದನವ ಗೋವಿಂದಾ.
ಬೃಂದಾವನದಲಿ ನಮ್ಮ ಮುಕುಂದ!
ಬೆಣ್ಣೆಯ ಕಳ್ಳನಿಗಿಂತಲು ಚಂದ !
ನಮ್ಮ ಹಳ್ಳಿಗೆ ಗೋಪಿಯ ಕಂದ!
ಬಂದ ಬಂದನವ ಗೋವಿಂದಾ
*****









