ಗಂಡ: —
ಹೆಸರಾವುದು ನನ್ನಯ ಪ್ರಿಯತಮೆಗೆ ?
ಯಾವುದು ಹೆಸರಲಿ ಕರೆಯಲಿ ನಿನಗೆ ?
ಕಮಲಾ, ವಿಮಲಾ, ಲೀಲಾ, ಮಾಲಾ,
ನಲಿನೀ, ದಲಿನೀ, ಸೀತಾ, ಗೀತಾ,
ಎಂಬೀ ಸಕ್ಕದ ಹೆಸರೊಳಗೊಂದನು
ಆರಿಸಿಕೊಂಬುದು ಓ ನನ್ನರಸಿ.
ಕಸ್ತುರಿ ಕನ್ನಡದಿಂಪಿನ ಹೆಸರುಗ-
ಳಿದ್ದೂ ಸಕ್ಕದ ನಾಮಗಳೇಕೆ ?
ಅನ್ನುವೆಯಾದರೆ ಇವುಗಳ ಕೇಳು :
ನೀಲೀ, ನಿಂಗೀ, ಮಾದೀ, ಗೋದೀ,
ನಾಗೀ , ಬಾಗೀ, ಬೆಳ್ಳಿ, ಹೂವೀ,
ಆರಿಸಿಕೊಂಬುದು ಓ ನನ್ನರಸಿ,
ಹೆಂಡತಿ:-
ಹೆಸರೊಳಗೇನಿದೆ ಓ ನನ್ನರಸಾ,
ಹೆಸರೆಂದರೆ ಬರಿ ಮಾತಿನ ಸರಸ !
‘ಕಮಲೇ’ ಅನ್ನಲು ತಾವರೆ ನಾನೇ ?
‘ನಾಗಿ’ ಅನ್ನಲು ನಾಗಿಣಿಯೇನೇ ?
ಯಾವುದು ಹೆಸರಾದರು ನನಗೇನು ?
ನಿಮ್ಮವಳೆನ್ನಿರಿ, ಹಿಗ್ಗುವೆ ನಾನು !
*****









