Home / ಕವನ / ಕವಿತೆ / ದಾರಿಯಲ್ಲಿ

ದಾರಿಯಲ್ಲಿ

ಭೂತ ಭವಿಷ್ಯಗಳನಂತ ತಮದ
ನಡುವೊಳು ಬೆಳಗುವ ಮಾನವ ಮನದ
ಸೇತುವೆ ದಾರಿಯೊಳಿತ್ತಣಿನತ್ತ
ಸುಳಿದಾಡುವ ಎಲೆ ಭಾವದ ಮೊತ್ತ,
ಪಯಣ ವೆತ್ತ ನಿಲ್ದಾಣವದೆಲ್ಲಿ ?
ಮುಂಬರಿಯದೆ ತಳುಗುವಿರೇಕಿಲ್ಲಿ?
ನುಡಿಬಡವಂ ಕವಿ; ಇಲ್ಲೇನೆರಕೆ?
ಎನ್ನಿಂ ಸಲ್ಲುವುದೇ ನಿಮ್ಮರಕೆ!

ನಟ್ಟಿರುಳೊಳು ನಿದ್ದೆಯನೊತ್ತಿಟ್ಟು
ಹಿರಿದಲಗನು ಹೆಗಲಿನ ಮೇಲಿಟ್ಟು
ಹೆಬ್ಬಾಗಿಲ ಮುಂಗಡೆ ನಡೆದಾಡಿ
ಹೆಜ್ಜೆಯನೆಣಿಸುವ ಯಂತ್ರದ ಮೋಡಿ,
ಎಲೆ ಸೀಪಾಯಿ, ನಿನ್ನೀ ಭ್ರಮಣೆ
ಪ್ರತಿಯಂತೆಸಗುವ ಪರಿಚಂಕ್ರಮಣೆ-
ಆವ ಹರಕೆಗೆ ಆವ ಸಲಿಕೆಗೆ ?
ಆರ ಭಯಕು ನಿನ್ನಾಸೆಗು ಸಲಿಗೆ?
ಆವ ಬಯಕೆಯೀ ಭ್ರಮಣೆಯ ಮೂಲ?
ನೀ ನಾವಿಚ್ಛೆಯ ಭೂತದ ಬಾಲ?

ಗ್ರೀಷ್ಮದ ರವಿ ಹಾದಿಯ ಸುಡುತಿರಲು
ಜಂಗಮವೆಲ್ಲವು ನಡೆಯುಡುಗಿರಲು
ವಟವಟ ಗುಟ್ಟುವುದುರಬಿಸಿಲೆನಲು
ಉಕ್ಕಿನ ಗಾಡಿಯ ಕಟಕಟ ಕಿರಲು
ಹೇಸರ ಕತ್ತೆಗು ಕಠೋರವಾಗೆ
ಸದ್ಧಡಗಲು ಸುಡುಧೂಳಿನ ಕಡೆಗೆ

ಗಾಡಿಯ ನಡೆಬಿಡುವೆಲೆ ಸಾರಥಿಯೆ,
ಸಂಸಾರದ ಹಠಯೋಗದ ಯತಿಯೆ,
ಈಗ ನೀನು ತಣಿವಾಂತವನಂತೆ
ಕಂಗಳ ಮುಚ್ಚಿಹೆ, ತುಸ ನಗುವಂತೆ
ತುಟಿಗಳ ತೆರೆದಿಹೆ ಸುಖಿಯಾದಂತೆ.
ಹಿಂಜರಿವುದೆನ್ನ ಕರುಣೆಯಹಂತೆ
ನಿನ್ನೀ ನಗುವಿನ ಬೆರಗನು ನೋಡಿ;
ಬಿಸಿಲು ಬಾಡುವುದು ನಾಚಿಕೆಗೂಡಿ.
ನಿನ್ನೀ ಯೋಗಕೆ ನಾನೇನೊರೆವೆ
ಎಂತೀ ನಗೆಯಚ್ಚರಿಯನು ಮರೆವೆ!

ಹೋ ಹೋ ಏನಿದು ಗಜಬಜವಿಲ್ಲಿ?
ಹುಡುಗರ ಗೇಲಿಯ ಭಿಕಾರಿಯಲ್ಲಿ!
ಡಬ್ಬದ ಕಸಗಳ ಬೆದಕುತ್ತಿಹಳು
ಬಣ್ಣದ ಚಿಂದಿಯ ಹುಡುಕುತ್ತಿಹಳು
ಹಸುರಿನ ಹಳದಿಯ ಕಪ್ಪಿನ ಕೆಂಪಿನ
ಸೆರಗಿನ ಸರಿಗೆಯ ದೋತರದಂಚಿನ
ರೇಶಿಮೆ ಚೂರುಗಳಿನಿತಿನಿತಾಯ್ದು
ಮುತ್ತುವ ಹುಡುಗರ ಸುತ್ತಲು ಬೈದು
ನಡೆವಳು ಅಂಗಡಿ ಜಗಲಿಯ ಕಡೆಗೆ
ತನ್ನೆಳಮುದ್ದನು ಕುಳಿತಿರುವೆಡೆಗೆ.
ಮೂಗಿನ ಸಿಂಬಳ ಕಣ್ಣಿನ ಜಿಬುರು
ಈ ಕೊಳೆಮೊದ್ದಗೆ ಹೇಸದರಾರು?
ತಲೆಗೇನೀ ಸಿಂಗರದ ಕುಲಾವಿ
ಮಿರು ಜರತಾರಿಯ ಕಳೆಯಂ ತೀವಿ!
ಜನನಿಯ ನೇಹವೆ ಹೊಗರಿಟ್ಟಂತೆ
ಮಾತೆಯ ಕನಸೇ ಚಿಗುರಿಟ್ಟಂತೆ
ನೋಡಿರಿ ನೇಹಿಗರೇ ಆ ಕೂಸ
ದೊರೆಗೂ ಒಪ್ಪದು ಮಣಿಯುಷ್ಣೀಷ!

ಆ ಕರಿಮುದ್ದನ ಕಂಕುಳೊಳೆತ್ತಿ
ಚಪ್ಪಳೆ ಕೈಗಳ ಕಂಗಳಿಗೊತ್ತಿ
ಹಿಗ್ಗೊಳು ನಡೆವಳು ಆ ಕಡುಬಡವೆ
ತಂಟೆಯ ಮಾಡುವ ಹುಡುಗರ ನಡುವೆ.
ದೊರೆಕುವರನಲಾ ಪೇಳಿರಿ ಇವನು
ಎನುವಂತಿರಲಾ ದೃಷ್ಟಿಯ ಹವಣು,
ದೊರೆಕುವರನಲ್ಲವೆನ್ನುವರಾರು?
ಈ ನನ್ನಿ ಯನೀ ಜಗಕ್ಕೆ ಸಾರು
ಎನ್ನುವಳಿಂದಿಗು ನೆನಪೊಳಗಾಕೆ
ಅವಳಾ ಭಾವಕೆ ಈ ನುಡಿ ಸಾಕೆ?

“ನೋಡು ನೋಡು ನಾನೊಂದವತಾರ,
ದರಿದ್ರನಾರಾಯಣನ ಕುಮಾರ;
ಕುಂತಿಯು ಕರ‍್ಣನ ಬಿಸುಟಂತೆನ್ನ
ಸಿರಿ ಹಡೆಯುತ ಬಿಸುಟಳು ತಿಳಿಯಣ್ಣ.
ನಿನ್ನಯ ಜಾನಕೆ ತಕ್ಕವ ನಾನು
ನಿಟ್ಟಿಸು ಪರಮ ರಹಸ್ಯವ ಕಾಣು!”
ಕೋಣನ ತಿನ್ನುವ ಮಾರಿಗಳುಂಟು
ನರಬಲಿಗೆಳಸುವ ದೇವತೆಯುಂಟು
ಶಿಶುಗಳ ಹಿಸುಕುವ ಕಾಮಗಳುಂಟು
ಕರುಳನು ತಿರಿಚುವ ಭೀಮಗಳುಂಟು
ಇವುಗಳ ಕಂಡರು ಅಂಜದರುಂಟು-
ಈತನ ನೋಡಲು ಬೇಕೆದೆ ಎಂಟು.
ನೋಟವೆ ಇಲ್ಲದ ಬಿರುಬಿರು ದಿಟ್ಟಿ
ನೋಳ್ಪುದು ನನ್ನನು ದುರುದುರುಗುಟ್ಟಿ.
ಮಾತೇ ಇಲ್ಲದೆ ಕಟ್ಟಿದ ಬಾಯಿ
ಬೇಡುವುದೇನನೊ ದೇಹಿ ದೇಹಿ.
ನಿಶ್ಚಲವಾಗಿವೆ ಅಂಗಗಳೆಲ್ಲಾ
ಒಂದರೊಳೂ ತುಸವೂಣೆಯವಿಲ್ಲ.

ಎರೆಯದೆ ನಿಂತಿವೆ ಕೈಯೆದೆ ಮೇಲೆ
ಯಾರೇನಂ ಕೊಡಬಲ್ಲರೆನುವೊಲೆ.
ಎಲ್ಲಾ ಬೇಡಿಕೆಗೂ ತವರಿವನು
ಏನನ್ನೂ ಬೇಡದೆ ಕುಳಿತಿಹನು.
ಜಾಡ್ಯಕೆಲ್ಲಕೂ ಮನೆಯಂತಿಹನು
ಪರಿಕಿಸಿ ನೋಡೆ ನಿರಾಮಯನಿವನು.
ಇವನೇ ವಿರಾಗಿಯಾಗಿರುವಾಸೆ
ಉತ್ಸವಗೊಂಡಿಹ ಪೂರ‍್ಣನಿರಾಸೆ.
ಎಲ್ಲರ ಕರುಣೆಗು ಮಿಕ್ಕವನಿವನು
ಭಯಕೂ ಭಕ್ತಿಗು ತಕ್ಕವನಿವನು!
ಏಲೆ ಅತಿಮಾನುಷ ಮರೆಯಾಗೊಳಗೆ
ಸ್ವಸ್ತಿ ಎಂದು ಈ ನುಡಿಗುಡಿಯೊಳಗೆ.

ಎಲೆ ಕರುಣೆಯೆ, ನೀನೆಷ್ಟು ತೆರದೊಳು
ತಿರಿಯುತಿರುವೆಯೇ ನನ್ನ ಬಗೆಯೊಳು!
ಎಲೆಲೇ ಆಸೆಯೆ, ಎಲೆಲೇ ಭಯವೇ,
ಆತ್ಮವ ನುಂಗುವ ಎಲೆ ಅನುನಯವೇ,
ಭೋಗದ ಜೇನೊಳು ಮುಲುಗುವ ಸಿರಿಯೇ,
‘ಲಿಯರ ‘೦ದದಿ ಮೊರೆಯಿಡುತಿಹ ಬರಿಯೇ,
ಬಿಡು ಎನ್ನದೆ ಕೊಡು ಎನ್ನುವ ಗೋಳೇ,
ಇಹವೇ ಕೊನೆ ಎಂದೆನ್ನುವ ಬಾಳೇ,
ತಪವನು ಗೈಯದೆ ತಾಪವ ಪಡುವರೆ,
ವ್ರತವೆಸಗದೆ ಉಪವಾಸವಿರುವರೇ,
ಬಯಕೆಯೊಳೇ ಬಾಳಂ ಕರಗಿಪರೇ,
ಇಟ್ಟಂತೆಯೆ ಕಡೆವರೆಗಿರುವವರೇ,
ಇನ್ನೇಗತಿ ಎನ್ನುವ ವೇದಂಗಳೆ,
ನಮ್ಮದೆ ಮತಿ ಎನ್ನುವ ಭೇದಂಗಳೆ,
ತಿರುಕರ ಬಾಯಾಳಾಗಿಹ ಸ್ಮೃತಿಗಳೆ,
ಭಾರತದೊಳೆ ಬಾಯಾರಿಹ ಖಹುಷಿಗಳೆ,

ಪರರಿಚ್ಛೆಯ ಕರುಳಿನ ಹೊರಳಿಯೊಳೇ
ಜೀರ‍್ಣಿಸಿ ಹೋಗುತ್ತಿಹ ಧರ‍್ಮಗಳೇ,
ದೇವರು ಥೂ ಎಂದೆಂಜಲು ಮಾಡಿ
ಬಿಸುಡಿದ ತೆರನಾಗಿಹ ಜನ್ಮಗಳೇ,

ಅಂದು-ಮುಂದು ಬಾಳಂಚಿನ ತಮದ
ನಡುವಂತರದೊಳು ಬೆಳಗುವ ಮನದ
ಸೇತುವೆ ದಾರಿಯೊಳಿತ್ತಣಿನತ್ತ
ಇಂತಲೆದಾಡುವ ಭಾವದ ಮೊತ್ತ,
ಮುಂಬರಿಯಿರಿ ಮುಂಬರಿಯಿರಿ ಬೇಗ
ತಾಳೆ ನೀವು ಮನಮುತ್ತುವ ವೇಗ.
ತೀರಿತಿಂದು ನನ್ನೀ ನುಡಿಬಿಕ್ಕೆ
ಹರಸಿ ಹೋಗಿ ನನ್ನಿಂ ಮುಂದಕ್ಕೆ.
*****

Tagged:

Leave a Reply

Your email address will not be published. Required fields are marked *

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...