ರಾಮಚಂದ್ರದೇವರ ಆಳಿಕೆಯಲ್ಲಿ ಗುಪ್ತಚಾರ ದಲವು ಭದ್ರವಾಗಿತ್ತೆಂದು ಸೀತಾ ಪರಿತ್ಯಾಗದ ಕಾರಣದಿಂದ ಗೊತ್ತಾಗುತ್ತದೆ.
ಒಂದಿರುಳು ಒಬ್ಬ ಗುಪ್ತಚಾರನು ಒಂದು ಬೀದಿಯಲ್ಲಿ ನಡೆದಿದ್ದನು. ನಿಸರ್ಗದ ಕರೆಗೆ ಓಗೊಡಲು ಹೊರಗೆ ಬಂದಿದ್ದ ಒಬ್ಬ ನನ್ನಂಥ ಸಭ್ಯಗೃಹಸ್ಥನು ಅವನನ್ನು ಕಂಡು “ಯಾರದು?” ಎಂದು ಕೇಳಿದನು. ರಾಮರಾಜ್ಯದಲ್ಲಿ ಕಳ್ಳರ ಭೀತಿಯಿರದಿದ್ದರೂ ಗುಪ್ತಚಾರರ ಹೆದರಿಕೆಯಿತ್ತು!
ಆ ಸದೃಹಸ್ಥನಿಗೆ ಹಲವುದಿವಸಗಳಿಂದಲೂ ತಲೆಯಲ್ಲಿ ಒಂದು ವಿಚಾರ ಮೂಡಿ ನಾಲಿಗೆಯ ಮೇಲೆ ಬರಲಾರದೆ ಕರಗಿಹೋಗುತ್ತಿತ್ತು. ಈಗ ಅವನು ಇದ್ದುದರಲ್ಲಿ ಧೈರ್ಯ ಮಾಡಿ ಆ ಗುಪ್ತಚಾರನನ್ನು ಬಳಿಗೆ ಕರೆದನು. ಅಲ್ಲಪ್ಪಾ, ರಾಮರಾಜ್ಯದಲ್ಲಿ ಹಗಲುಹೊತ್ತು ಬಾಗಿಲು ತೆರೆದಿಟ್ಟು ಹೋದರೂ ಒಂದು ಚಿಕ್ಕಾಸೂ ಕಳುವಾಗುವದಿಲ್ಲವೆಂದು ಖ್ಯಾತಿಯಿದೆ. ಮತ್ತೆ ನೀವೇಕೆ ರಾತ್ರಿಯೆಲ್ಲ ಗಸ್ತಿ ತಿಗುಗುತ್ತೀರಿ?”
“ಹಗಲು ಹೊತ್ತು ಆಗಲಿಕ್ಕಿಲ್ಲರಿ, ರಾತ್ರಿಯ ಹೊತ್ತು ಎಷ್ಟೆಂದರೂ… ಆದರೂ ಶ್ರೀರಾಮದೇವರ ಕಾಲದಲ್ಲಿ ಕಳು ಗಿಳು ಸಾಧ್ಯವೇ ಇಲ್ಲ ಬಿಡಿ”
“ಕಳವುಗಿಳವು ಇಲ್ಲದಿದ್ದರೆ ಮತ್ತೇಕೆ ಈ ಗಸ್ತಿ ಅಂತ ನಾನು ಕೇಳುವದು”
“ಅದನ್ನೆಲ್ಲ ಕೇಳಬಾರದು ರಾಯರೇ. ಆದರೂ ನಿಮ್ಮ ಹತ್ತಿರ ಹೇಳದೆಯೇನು? ಪ್ರಜೆಗಳು ತಮ್ಮ ವಿಷಯವಾಗಿ ಏನು ಮಾತಾಡಿಕೊಳ್ಳುತ್ತಾರೆಂದು ತಿಳಿಯಲು ನಮ್ಮನ್ನು ನೇಮಿಸಿದ್ದಾರೆ.”
“ಅಂದರೆ ಪ್ರಜೆಗಳಲ್ಲಿ ಪ್ರಭುಗಳಿಗೆ ವಿಶ್ವಾಸವಿಲ್ಲವೆಂದಂತಾಯಿತಲ್ಲ!”
“ವಿಶ್ವಾಸವಿದೆ ಆದರೂ….”
“ಹಾಗಾದರೆ ನೀವು ಊರಿನ ಜನರು ಮಾತಾಡಿಕೊಳ್ಳುವುದನ್ನೆಲ್ಲ ದೇವರಿಗೆ ವರದಿ ಮಾಡುತ್ತೀರಿ.”
“ನಾವಿರುವದು ಅದಕ್ಕಾಗಿಯೇ ರಾಯರೇ”
“ಸೀತಾಮಾತೆಯನ್ನು ಅಷ್ಟು ವರ್ಷ ರಾವಣನ ವಶದಲ್ಲಿ ಬಿಟ್ಟಿದ್ದು ನಂತರ ಮತ್ತೆ ಅವರೊಡನೆ…. ಊರೆಲ್ಲ ಗುಜು ಗುಜು ನಡಿಸುತ್ತಿರುವ ಸಂಗತಿ ನಿಮಗೆ ಗೊತ್ತಿರಬಹುದು.”
“ಗೊತ್ತಿದೆ ರಾಯರೇ, ಕಳೆದ ೨೫ ದಿನಗಳಿಂದಲೂ ಕೇಳುತ್ತಿದ್ದೇವೆ. ಆದರೆ ಇದನ್ನು ಹೇಗೆ ತಿಳಿಸುವದು ದೇವರಿಗೆ? ನಿಮ್ಮಂಥ ಸದ್ಗೃಹಸ್ಥರೇ ಹೀಗೆ ಹೇಳುತ್ತಾರೆಂದರೆ ಪ್ರಭುಗಳು ನಂಬಬೇಕಲ್ಲ! ಆದ್ದರಿಂದ- ನಿಮ್ಮ ಹತ್ತಿರ ಹೇಳದೆಯೇನು? ಯಾರಾದರೂ ಸಾಮಾನ್ಯರು ಈ ವಿಷಯವನ್ನು ಎತ್ತಲಿ; ಅವರನ್ನೊಯ್ದು ಪ್ರಭುಗಳಿಗೊಪ್ಪಿಸುವ ಎಂದಿದ್ದೇವೆ.”
ಆ ಸದ್ಗೃಹಸ್ಥನ ಸಂಶಯ ನಿವಾರಣೆಯಾಗಿ ಅವನು “ವಹವ್ವಾ” ಅಂದುಕೊಂಡು ಒಳಗೆ ನಡೆದನು.
ಮಾರನೆಯ ದಿನ ಅಗಸನೊಬ್ಬನು ಇದೇ ವಿಷಯವನ್ನೆತ್ತಿ ನುಡಿಯಲು ಆ ಗುಪ್ತಚಾರನು ಅಗಸನ ಹೆಸರನ್ನೂ ಆ ವಾರ್ತೆಯನ್ನೂ ಶ್ರೀರಾಮಚಂದ್ರ ದೇವರಿಗೊಯ್ದು ಮುಟ್ಟಿಸಿ ಧನ್ಯನಾದನು.
*****








