ಕೆರಳಿ ಮೊರೆವ ಕಡಲಿನಲ್ಲಿ
ಬಿರುಕುಪಡೆದ ಕಿರಿಯ ನಾವೆ
ಬಿರಿಯುತಿಹುದು ಬಿರುಸಿನೆದೆಯ
ಕಾಯೆ ತಾಯೆ ಅಭಯದಾಯಿನಿ !
ಬಂದರಗಳ ಬಂಧಮೀರಿ
ಬಂದು ನೀರ ಹರಹಿನಲ್ಲಿ
ಮಿಂದು ತೇಲಿ ಸ್ವಚ್ಛಂದದಿ
ಮುಂದೆ ಹುಟ್ಟುಹಾಕುತಿರುವೆನು. ೧
ಕಂಗಾಣದ ಗಾಳಿಸೆಳೆಗೆ
ತುಂಗಗಿರಿಯ ತೆರದ ತೆರೆಯು
ನುಂಗುವಂತೆ ಏರಿಏರಿ
ಬಂದು ಸುತ್ತುವರಿದು ಮುತ್ತಿವೆ. ೨
ಒಲಿದು ಹತ್ತಿಕೊಂಡ ಜೀವ
ಒಲೆವ ನಾವೆಯಲ್ಲಿ ಸಾವು-
ಬಲೆಗೆ ಸಿಲುಕಿ ಹೇಗೆ ಮರಳಿ
ಬದುಕಿ ಬೆದರಿದೆರಳೆಯಾಗಿವೆ. ೩
ದೋಣಿಯೊಳದ ತುಂತುರು ಸಹ
ಮುಳುಗಿನ ಮಾಭಯವ ತೋರಿ
ಕಣ್ಣ ನೀರಧಾರೆ ಹರಿಸಿ
ಎಂಥ ಭಯವ ಶೋಕವೆಸಗಿವೆ ! ೪
ಗುರಿಯ ತೋರ‍್ವ ಧ್ರುವದ ತಾರೆ
ಪರೆಯು ಕವಿದ ಕಣ್ಗೆ ಮಸುಳೆ
ಮರೆಯಲಿದ್ದು ಪೊರೆವೆಯೆಂಬ
ಅರಿವು-ನೆಚ್ಚು ಕೈಯ ಬಿಡುತಿವೆ. ೫
ಭಯನಾಶಿನಿ ಶುಭಕಾರಿಣಿ !
ದಯೆಯ ಜೇನ ತುಂಬುಗೊಡವೆ !
ತಾಯಿತನದ ಹುಟ್ಟು ಬೇರೆ !
ದುಕ್ಕದಲ್ಲಿ ಧೈರ್ಯವೂರಿಸೆ. ೬
ಬಿರಿದ ಬಿರುಕು ನನ್ನ ತುಳಿತ-
ಕೊರೆತದಿಂದಲಾದುದಾಗೆ
ಅರಿತುಬೇಗ ಸರಿಗೊಳಿಸಲು
ಸ್ಪುರಿಸುವಂತೆ ಮನವ ಪ್ರೇರಿಸೆ. ೭
ಕೊನೆಗಾಣದ ಕಡಲಿನಲ್ಲಿ
ಅನವರತದ ಯಾತ್ರೆಯಲ್ಲಿ
ಕ್ಷಣದ ಶೋಕ ಬರುವಶೋಕ-
ಪದಕೆ ಹರಕೆ ಎಂದು ಕಾಣಿಸೆ. ೮
*****








