Home / ಲೇಖನ / ಪತ್ರ / ಪೂರ‍್ಣಿಮ – ೧೧

ಪೂರ‍್ಣಿಮ – ೧೧

ಪ್ರಿಯೆ

ಈಸೂರಿನಿಂದ ಬರೆದ ಪತ್ರ ನಿನಗೆ ತಲುಪಿರಬಹುದು. ಅವಸರದಲ್ಲಿ ಬರೆದೆ. ಇದೀಗ ವಿವರಯುತ ಪತ್ರವನ್ನು ಹಂಸಭಾವಿಯಲ್ಲಿ ಮರದಡಿಯಲ್ಲಿ ನಿಂತಿರುವ ಕಾರಿನ ಒಳಗಡೆ ದಿಂಬಿಗೆ ಆತುಕುಳಿತು ಬರೆಯುತಿರುವೆನು, ಊಟದ ಹೊತ್ತಿನ ವರೆಗೂ ಬರೆಯುವನು.ಈಗ ಮುಂಜಾನೆ ೧೦-೩೦; ಒಂದು ನೂರು ಪುಟಗಳ ಬರೆಯುವ ಸಾಹಿತ್ಯ ತುಂಬಿದೆ, ಸ್ಫೂರ್ತಿ ಬಂದಿದೆ. ಹುರುಪು ತುಂಬಿರುವುದು. ಮಲೆನಾಡಿನ ನನ್ನ ಈ ಅಲೆದಾಟದಿಂದ ನನ್ನಲ್ಲಿ ‘ಗೀತ ಗೋವಿಂದ’ ಧ್ವನಿಸಿದ್ದ ಕವಿತಾಸೂರಿಗೆ ಸಾಣೆ ಬಂದಿರುವುದು. ತಾಳು ಸಖಿ, ಪ್ರವಾಸದಿಂದ ಪ್ರಯಾಸಗೊಂಡ ಲೇಖನಿಯು ರಸ ಚಿಮ್ಮುತ್ತಿಲ್ಲ. ಪಕ್ಕದಲ್ಲಿರುವ ಕಿತ್ತಳೆ ಹಣ್ಣಿನ ರಸವನ್ನು ತುಂಬಿಕೊಂಡು ಬರೆಯುವೆನು.

ರಸ ಕುಡಿದ ಮೇಲೆ ರಸಿಕನಾಗಿ ಪತ್ರವನ್ನು ಪ್ರಾರಂಭಿಸಿರುವೆನು. ಆದರೆ ನನ್ನ ರಸದ ಇಂಚರಕ್ಕೆ ಧ್ವನಿಗೂಡಿಸುವ ವೀಣೆಯ ಬುರುಡೆಯು ತಂತಿ ಕಿತ್ತು, ತಾಳದಪ್ಪಿ ದೂರ ದೂರ ಬಹುದೂರ ಮೊಂಡುತನದಿಂದ ಕುಳಿತಿದೆ. ಹೋಗಲಿ ವೀಣೆ ಇಲ್ಲದಾಗ ವೀಣೆ ಇಲ್ಲವೆಂದು ಹಲುಬಿದರೆ ಫಲವೇನು? ಇದು ಸದಸದ್ವಿವೇಕವಲ್ಲವೆ? ಪ್ರಿಯ ಸಖಿ ನಾನು ಮಾತಿಗೆ ತಪ್ಪಿದೆನೆ? ಸಾಗರಕ್ಕೆ ಹೋದರೂ ಸಾಗರದ ಕನ್ಯೆಯನ್ನು ನೋಡುವುದಿಲ್ಲವೆಂದು ಬರೆದಿದ್ದೆನಲ್ಲವೆ? ಆದರೆ ಅಲ್ಲಿನ ಪರಿಸ್ಥಿತಿ, ನನ್ನನ್ನು ನಿರ್ಬಂಧಗೊಳಿಸಿತು. ತಪ್ಪೇನು? ನಿನ್ನ ಸ್ನೇಹಿತೆಯನ್ನು ನಿನ್ನ ಪರವಾಗಿ ನಿನ ಅರ್ಧಾಂಗನೇಕೆ ಸರ್ವಾಂಗನಾದ? ನಾನು ಮಾತನಾಡಿಸಬಹುದಲ್ಲವೆ? ಆಕೆಯ ಒಂದು ಸಲ ಸಹಜ ಬಾಯಿಬಿಟ್ಟು ನಗೆ, ಆಕೆಯ ತಂಗಿಯದೊಂದು ಎಳೆ ನಗೆ, ತಾಯಿಯ ಮಮತೆ ಪೂರಿತ ನಾಲ್ಕಾರು ಮಾತುಗಳು ಇವಿಷ್ಟು ಕೆಲವು ನಿಮಿಷಗಳಲ್ಲಿ ಮುಗಿದವು. ನಂತರ ಬೀಳ್ಕೊಡುವ ವೈಯಾರವಳಗಿನಿಂದಲೇ. ರಾತ್ರಿ ಜೋಗಿಗೆ ಹೋಗುವ ದಾರಿಯಲ್ಲಿರುವ ಸಿರಿವಂತಿಕೆ ಎಂಬೂರಿನಲ್ಲಿ ಉಳಿದುಕೊಂಡೆವು. ಸಿರಿವಂತಿಕೆ ನಿಜವಾಗಿ ಸಿರಿಯ ಹಿರಿಯೂರು. ನಾವಿಳಿದಿದ್ದ ಮನೆಯಲ್ಲಿ ತುಂಬ ಸಿರಿಯ ಹಿರಿಯ ಸೊಸೆತನ.

ನಿನ್ನ ಸ್ನೇಹಿತೆ ಮಲೆನಾಡಿನವಳು ತಾನಂದು ಮರೆತು ಹೇಳುತ್ತಿದ್ದ ಮಾತು ಸ್ವಲ್ಪ ಮಟ್ಟಿಗೆ ನಿಜವೆಂದು ಅನ್ನಿಸುತ್ತಿದೆ. ಮಲೆನಾಡಿನ ಎಲೆ ಎಲೆಗಳಲ್ಲಿ, ಗಿಡ ಗಿಡಗಳಲ್ಲಿ ಸೃಷ್ಟಿ ಸೌಂದರ್ಯದ ತನಿರಸವು ತುಂಬಿರುವುದು. ನಿಸರ್ಗದೇವತೆಯ ತವರೂರು ಈ ಮಲೆನಾಡು. ಮಾತನಾಡದೆ, ಮೌನದಿಂದ ವನದೇವತೆಯು ನಮ್ಮ ಮನವನ್ನು ಸೂರೆಗೊಳ್ಳುವಳು. ಭವ್ಯವಾದ ಕಾರಿನಲ್ಲಿ ಕುಳಿತಿರುವುದೇ ಒಂದು ಸೊಗಸು. ಅದರ ವೇಗವು ಸೊಗಸಿಗೆ ಹುರುಪುಕೊಡುವದು. ಮಲೆನಾಡ ಗೌಡರ ಆದರ ಅತಿಥ್ಯವೆಂದರೆ ಬಣ್ಣಿಸಬರದಷ್ಟು ಭವ್. ಮತ್ತೆ ಮತ್ತೆ ಆಶಿಸುವಷ್ಟು ರುಚಿ. ಇವೆಲ್ಲಕ್ಕಿಂತಲೂ ಮನವನಪ್ಪಿದ ಮನ ನೋಡದ ದೃಶ್ಯಗಳು. ಒಂದಲ್ಲ ಎರಡಲ್ಲ ನೂರಾರು, ಭಾವನಾಜೀವಿಯಾದ ನನಗೆ ಅವರ ಬದುಕಿನ ಒಂದೊಂದು ಬಗೆಯೂ ಮೈಮರೆಸುತ್ತಿತ್ತು. ನಡು ಕಾಡಿನಲ್ಲಿದ್ದರೂ ವನವಿಹಾರಕ್ಕೆಂದು ಬಂದ ಭೋಗ ಜೀವಿಗಳಂತೆ ಜೀವನದ ಹೆಜ್ಜೆ ಹೆಜ್ಜೆಯಲ್ಲೂ ರಮಿಸುತ್ತಿರುವರು, ವಿಹರಿಸುತ್ತಿರುವರು, ವಿನೋದಿಸುತ್ತಿರುವರು; ತೃಪ್ತಿ ಜೀವಿಗಳವರು, ಮೈ ತುಂಬ ದುಡಿದರೆ ಕೈತುಂಬ ಉಣ್ಣುವರು. ಅಡಿಕೆ, ಬಾಳೆ, ತೆಂಗುಗಳ ತೋಟ ಇವರ ದುಡಿಮೆಯ ಕಣವೂ ಹೌದು, ಜೀವನದ ಉದ್ಯಾನವನವೂ ನಿಜ. ಸೂರ್ಯನೂ ಕೂಡ ಇವರ ಸುಖವನ್ನು ಇಣಿಕಿ ನೋಡುತ್ತಿರುವನು. ಈ ಉದ್ಯಾನವನದಲ್ಲಿ, ಮೇಲಿ೦ದ ಸಂದು ಸಂದುಗಳಲ್ಲಿ ತಲೆ ಹಾಕಿ ನೋಡುತ್ತಿರುವ ಸೂರ್ಯನ ಪರಿವೆ ಇಲ್ಲದೆ ಈ ಮಲೆನಾಡಿನವರು ಈ ಸಿಂಗರಿಸಿದ ವನದಲ್ಲಿ ತಾವು ನೀರೆರೆದು ಬೆಳೆದ ಎಲೆಯ ಚಿಗುರು, ಅಡಿಕೆಯಚೂರು, ಇವುಗಳನ್ನು ಜಿಗಿಯುತ್ತಾ ಬಳ್ಳಿಗಳಂತೆ ಬಳಕುತ್ತಿರುವ ತಮ್ಮ ಜೀವನದ ಸಂಗಾತಿಯರೊಂದಿಗೆ ತಗ್ಗು ದಿನ್ನೆಗಳನ್ನು ಇಳಿದೇರುತ್ತ ಬಾಳುತ್ತಿರುವುದನ್ನು ನೋಡಿದ ಬಲವಂತ ವಿರಹಿಯಾದ ನನಗೆ, ಮುಂದಿನ ಹುಟ್ಟು, ಮಲೆನಾಡಿನಲ್ಲಾಗಲಿ ಎಂದೆನ್ನಿಸಿತು.

ವನಸುಮದಂತೆ ಅರಳಿ ಬಾಡುವ ಈ ಮಲೆನಾಡಿಗರಿಗೆ ಬಾಳು ಶೂನ್ಯವೆಂದನ್ನುತ್ತಿದ್ದ ನಾನು ನನ್ನ ತಪ್ಪನ್ನು ತಿದ್ದಿಕೊಂಡೆನು. ಒಣಬಾಳು ಇವರದಲ್ಲ ನಮ್ಮದೆಂದು ಅರಿತುಕೊಂಡೆನು. ಪಟ್ಟಣಿಗರ ಜೀವನ, ನಾಗರಿಕತೆ, ಇವೆಷ್ಟು ಕೃತ್ರಿಮಸೂಕ್ಷ್ಮವಾದವು. ಸತ್ಯದ ಮಾತಿರಲಿ, ಹುರುಳಿಲ್ಲದ ತಿರುಳಿಲ್ಲದೆ ಬಿಸಲಿಗೆ ಬಾಡುವ, ಛಳಿಗೆ ಮುದುಡುವ ನಮ್ಮ ನಾಗರಿಕತೆಯಲ್ಲಿದೆಯೇ ರಸ? ಮಳಲಗದ್ದೆ ಎಂಬೊಂದೂರು. ಅಲ್ಲಿನ ಗೌಡರ ಮನೆಯಲ್ಲಿ ಶುಭ ಶೋಭನ. ಈ ಶೋಭನಕ್ಕೆ ನಾವು ಹೋದಾಗ ಅವರಿಗಾದ ಆನಂದವನ್ನು ಬಣ್ಣಿಸಲು ಬರದು. ಸಡಗರದ ಗುಡುಗಾಟ ಅಡವಿಯಲ್ಲೆಲ್ಲಾ ಪ್ರತಿಧ್ವನಿಸುತ್ತಿತ್ತು. ದಪ್ಪಾದಷ್ಟೇ ಮೃದು ಹೃದಯವಿರುವ ಗೌಡತಿ ನಮಗೆ ಬಡಿಸಹತ್ತಿದಾಗ, ಅಧಿಕಾರವಾಣಿಯಿಂದ ನಮ್ಮನ್ನು ಗದ್ದರಿಸುತ್ತ ತಿಂಡಿ ತಿನಸುಗಳನ್ನು ಎಲೆಗೆ ನೂಕುತ್ತಿರುವಾಗ, ಅಮ್ಮನ ನೆನಪು ನನಗಾಗಿ ಹನಿಗಣ್ಣಾಯಿತು. ನಾನು ಒಬ್ಬ ಅಮ್ಮನ ಕುವರನಲ್ಲ ನನ್ನ ಅಮ್ಮಂದಿರು ನಾಡಿನ ತುಂಬಿರುವಾಗ ನನಗೇಕೆ ಈ ನೋವು ಎಂದು ಸಂತೈಸಿ ಕೊಂಡೆನು.

ಪೂರ‍್ಣೀ ಮದುವೆಯ ಮನೆಗೆ, ಶಾಂತಿ ಪ್ರಸ್ತುದ ಸಮಾರಂಭಗಳಿಗೆ ನನ್ನಂತಹ ಭಾವ ಜೀವಿ ಹೋಗಬಾರದು; ಹೋದುದಾಯಿತು. ತೆರೆ ತೆರೆಯಾಗಿ ಏಳುತ್ತಿರುವ ಭಾವನೆಗಳ ಏರಿಳಿತಗಳಿಗೆ ಎದೆಯೊಡ್ಡಿಯಾಯಿತು. ಈ ನನ್ನ ನಾಲ್ಕು ದಿನಗಳ ನೂರಾರು ಮೈಲಿಯ ಸಂಚಾರದ ಪ್ರತಿನಿಮಿಷವೂ ಜೀವನದ ರಸನಿಮಿಷಗಳಾಗಿದ್ದವು. ನಾಡಿಯನ್ನು ಮಿಡಿಯುವ ಘಳಿಗೆಯಾಗಿದ್ದವು. ಒಂದೆಡೆ ಒಬ್ಬ ಗೌಡರ ಹಿತ್ತಲಲ್ಲಿ ಒಂದೇ ಗುಲಾಬಿಯ ಸಸಿಯಲ್ಲಿ ಒಂದೇ ಕೆಂಪನೆಯ, ಪೆಂಪಿನ ಸೊಂಪಿನ ಕಂಪಿನ ಗುಲಾಬಿ ಅರಳಿ ಬಿರಿಯುತ್ತಿದ್ದಿತು, ಬೀಗುತ್ತಿದ್ದಿತು. ಅದನ್ನು ನೋಡಿದಾಗ ನನ್ನ ಜೊತೆಯಲ್ಲಿದ್ದ ಒಬ್ಬ ಸ್ನೇಹಿತರಿಗೆ ಈ ಗುಲಾಬಿ ಎಷ್ಟು ಚೆನ್ನು ಎಂದೆ. ಕಿಟಕಿಯಿಂದ ಜೀವನ ಗುಲಾಬಿಯೊಂದು ಈ ಮಾತನ್ನು ಕೇಳುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಗಿಡದ ಗುಲಾಬಿ, ಸಣ್ಣ ಮಗುವಿನ ಮೂಲಕ ನನ್ನ ಕೈಗೆ ಬಂದಿತು. ನಾನು ಮೈ ಮರೆತೆ ಗುಲಾಬಿಯನ್ನು ಮೂಗಿಗಾನಿಸಿದಾಗ, ಇದು ಸಾಗರದಲ್ಲಲ್ಲ! ಸೋಲೂರಿನಲ್ಲಿ. ಬಾಳೆಯ ವನದಲ್ಲಿ ಬೆಳೆದಿರುವ ಬಾಲೆಯರನೇಕರು ಬಾಳಿನ ಪಾಲುಗಾರನಿಗಾಗಿ ದಾರಿ ಕಾಯುತ್ತಿರುವರು. ಎಳೆ ಮನದಲ್ಲಿ ಬಾಳೆಯ ಸುಳಿಯಂತೆ ಬಯಕೆಗಳು ಮೂಡುತ್ತಿರುವ ಈ ಎಳೆ ಹುಡುಗಿಯರ ಹೃದಯದ ಬಡಿತವು, ಮುಖದ ಮುಗುಳು ನಗೆಯು, ಕಣ್ಣಿನ ಸರಳತೆಯ ತಪಸ್ವಿಯನ್ನಾದರೂ ದೀನವದನನ್ನಾಗಿ, ದರಿದ್ರನನ್ನಾಗಿ, ಮಾಡಿಬಿಡುವವು. ಭಯ ಬೇಡ, ನನ್ನ ವದನ ದೀನವಾಗಿದ್ದರೆ, ಇವರ ಬಾಳಿಗೆ ರಸವೆರೆಯುವ ರಸಿಕ ಜೀವಿತೇಶನು ದೊರೆತಿಲ್ಲವೆಂಬ ಮರುಕದಿಂದ, ನಾನು ದರಿದ್ರನಾಗಿದ್ದರೆ, ಇವರನ್ನು ಬಗ್ಗಿಸಲಾರದಷ್ಟು ಸಾಹಿತ್ಯ ಶೂನ್ಯವಾದುದರಿಂದ ನನ್ನೀ ಇಳಿ ವಯಸ್ಸಿನಲ್ಲಿ ಎಳೆ ಹುಡುಗಿಯರನ್ನು ನೋಡುವ ದೃಷ್ಟಿಯಲ್ಲಿ, ಅಣ್ಣನು ತಂಗಿಯನ್ನು ತಂದೆಯು ಬೆಳೆಯುವ ಮಗಳನ್ನು ನೋಡುವ ಭಾವನೆ ಇರುವುದೆಂಬುದನ್ನು ಅರಿತು, ನೀನು ನನ್ನ ಬಣ್ಣನೆಯಿಂದ ಬಣ್ಣಗೆಡಬೇಡ.

ಮಲೆನಾಡ ಸೌಂದರ್ಯದ ಮತ್ತಿನಲ್ಲಿ ನನ್ನ ನೆನಹಿನ ಪರದೆಯು ಅತ್ತ ಸರಿದಿಲ್ಲ. ಆದ್ದರಿಂದ ಈ ಪತ್ರದ ಸಾಹಿತ್ಯದೊಂದಿಗೆ ಹಳೆಯ ಚಿತ್ರವನ್ನು ಬೆರಸದೆ ಪತ್ರವನ್ನು ಮುಗಿಸುತ್ತಿದ್ದೇವೆ. “ನೆಲ್ಲುಂಟು ನೀರುಂಟು ಒಲ್ಲೆನುವ ನಲ್ಲೆಯರು ಅಲ್ಲುಂಟು” ಎಂದು ನೀನು ನನಗೊಮ್ಮೆ ಮಲೆನಾಡಿನ ಪರಿಚಯವನ್ನು ಮಾಡಿಕೊಡುತ್ತ ಓರ್ವ ಮಲೆನಾಡ ಹುಡುಗಿಯ ಬಿಂಕವನ್ನು ಬಣ್ಣಿಸಿದ್ದೆ. ನೀವು ಮಲೆನಾಡಿಗೆ ಹೋದೀರಿ ಎಂದು ಎಚ್ಚರಿಸಿದ್ದ ಆ ಪತ್ರ ನೆನಪಿಗೆ ಬಂದೇ ಬಿಟ್ಟಿತು. ಅದಕ್ಕೆ ಉತ್ತರದಂತಿದೆಯಲ್ಲವೆ ನನ್ನ ಮೇಲಿನ ಪತ್ರ? ಒಮ್ಮೆಯಾದರೂ ಬಾಳಿನ ಬವಣೆಯನ್ನು ಮರೆತು ಸೃಷ್ಟಿ ಸೌಂದರ್ಯದ ಚಿಂತನದಲ್ಲಿ ತನ್ಮಯಳಾಗು.

ಇತಿ ನಿನ್ನ ಜೀವ ಸಖ
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...