ಡಾ. ರವೀಂದ್ರನಾಥ ಠಾಕೂರರವರ ಕವಿತೆಗಳ ಭಾವಾನುವಾದವು.
ದೂರದೃಷ್ಟಿ
ಭಾ.ಷ.
ಕಲಕಲವನೆಬ್ಬಿಸಿತು ಕುಸುಮವು |
“ಫಲವೆ, ಓ ನನ್ನ ಫಲವೇ ಬಾ |
ಅಲೆಯುತಿರುವೆಯದೆಲ್ಲಿ?- ಅಹಹಾ! ಎನಿತು ದೂರದಲಿ” ||
ಫಲವು ತಾನುತ್ತರವ ಪೇಳಿತು |
ಹಲವು ರಗಳೆಯನೇಕೆ ಮಾಡುವೆ? |
ನೆಲಸಿರುವೆನನುದಿನವು ನಿನ್ನೊಳು ದೃಶ್ಯರೂಪದಲಿ ||೧||
ಅವಿವೇಕ
ಕೊಳವ ಹೊಕ್ಕಿತು ಕತ್ತೆಯೊಂದತಿ |
ಕಳವಳಿಸಿ ನೀರಡಿಕೆಯಿಂದಲಿ |
ಕೊಳದೆ ತಿರುಗುತಲೊದರಿತಹಹಾ ! “ನೀರು ಕರಿದೆ”ನುತ ||
ಕೊಳವು ಕೇಳಿದ ನಗುತಲೆಂದಿತು |
“ಜಳವು ಕಪ್ಪಾಗಿಹುದು ಕತ್ತೆಗೆ |
ತಿಳಿದು ನೋಡುವನರಿವನಿದರಾ ಶುಭಕಾಂತಿಯನು” ||೨||
ಸ್ವಾರ್ಥ ಸಾಧನೆ
ಅಡಗಿ ಮೆಲ್ಲಡಿಯಿಡುತ ಬರ್ಪುದು |
ಅಡವಿಯೊಳು ತಾ ಕಾಳರಾತ್ರಿಯು |
ಕೊಡುತ ಪುಷ್ಪಾದಿಗಳ ಪೋಪುದು ಸದ್ದು ಮಾಡದಲೆ ||
ಒಡನೆ ಕುಸುಮಗಳೆದ್ದು ನುಡಿವವು- |
“ಒಡೆಯ ಸಂಧ್ಯಾಕಾಲ ನಿನಗಾವ್ |
ಪೊಡಮಡುವೆವನುನಯದಿ ನೀನೆಮಗಿತ್ತೆ ವಿಕಸತೆಯ ||
ಕೇಳುತೀ ನುಡಿಗಳನು ಸಂಧ್ಯಾ- |
ಕಾಲ ಸಾಧಿಸತೊಡಗಿ ನುಡಿವುದು. |
ಪೇಳಿದುದು ನಿಜ ನೀವು, ಸಂಶಯವಿಲ್ಲವೆಳ್ಳನಿತು ||೩||
ಮುಖಸ್ತುತಿ
ಬರಿಯ ಕೈಯಲಿ ನಗುತ ಮಮತೆಯು |
ಬರಲು ಕೇಳ್ವುದು ತಾ ಮುಖಸ್ತುತಿ |
“ದೊರಕಿಸಿಹೆ ನೀನೆಷ್ಟು ಭಾಗ್ಯವ” ನೆನಲು ಪೇಳುವದು ||
“ಇರುವದೆನ್ನೊಡಲೊಳಗೆ ತೋರಲು |
ಬರದು” “ನಾ ವ್ಯವಹಾರ ಚತುರನು |
ಬರಗಿಕೊಳ್ಳುವೆನೆರಡು ಕೈಯೊಳು ದೊರಕಿದುದನೆಲ್ಲ” ||೪||
ಕೃತಘ್ನತೆ
ಕೊಡಲಿಯೊಂದತಿದೈನ್ಯದಿಂದಲಿ |
“ಗಿಡವೆ, ಕರುಣಿಸು ಸಣ್ಣ ಕಾವನು |
ಒಡೆಯ, ಬೇಡೆನು ಹೆಚ್ಚ” ನೆನ್ನಲು ಗಿಡವು ದಯದಿಂದ ||
ಕೊಡಲು ಕೊಡಲಿಯು ಕೊಂಡು ಕೂಡಲೆ |
ಗಿಡವ ಕಡಿಯಲು ತೊಡಗಿತಹಹಾ!
ಗಿಡವು ನಡುಗಿತು ಬಿದ್ದಿತಾಗಲೆ ಬುಡವು ಮೇಲಾಗಿ ||೫||
ಸ್ವಾರ್ಥ
ಅರಳುತಿಹ ಕುಸುಮಗಳು ಮನದೊಳು |
“ಪರಿಮಳವು ಪಾರುವದು ನಾಲ್ದೆಸೆ |
ಗರರೆ! ನಾವಿದ ಕಾಯಲಾರೆವು” ಎನುತ ಮರುಗುತಲಿ ||
ಬೆರಳ ಸನ್ನೆಯೊಳುಸುರ ಕರೆಯಲು |
“ಪರರ್ಗೆ ಕೊಡದಿರೆ ನಿಮ್ಮದಾಗದು |
ಪರಿಮಳವು, ನಿಶ್ಚಯವು?” ಹೇಳಿತು ಮಂದಮಾರುತವು ||೬||
*****





