Home / ಕವನ / ಅನುವಾದ / ಸೀತಾದೇವಿಯ ಅಗ್ನಿ ಪ್ರವೇಶ

ಸೀತಾದೇವಿಯ ಅಗ್ನಿ ಪ್ರವೇಶ

(“ಶ್ರೀಮಾನ್‌ ಗುಡಿಪಾಟಿ ವೆಂಕಟಾಚಲಮ್‌ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿಂದ ಬರೆದುದು)

ಸೀತಾ:- ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ,
ಬಹುದಿನದಿ ಬಳಲಿಹೆನು; ನೊಂದಿಹಿರಿ, ಬೆಂದಿಹಿರಿ
ಅಗಲಿಕೆಯ ಅನುದಿನದ ಅಗ್ನಿಗಳ ಜ್ವಾಲೆಯಲಿ.
ನೀನಿಲ್ಲದಿರೆ ನನಗೆ ಜಗವೆಲ್ಲ ಬರಿದಹುದು.
ನನಗಾಗಿ ಹಳಹಳಿಸಿ ಕಳವಳಿಸಿ ಬಿಸುಸುಯ್ದು
ಹನುಮನನು ದಾಂಟಿಸಿದಿ ಅಂಬುಧಿಯನೀನಂದು
ಈರೈದುಶಿರದವನ ರುಂಡಗಳ ಚಂಡಾಡಿ
ನೀನಿಂದು ಬಂದಿರುವೆ; ಬಹುವಾಗಿಬೆಂದಿರುವೆ.
ರಾವಣನ ಹರತಾದ ಬಿರುಸಾದ ಬಾಣಗಳ
ಮಳೆಯಲ್ಲಿ ತೊಯ್ದಿಹೆವು; ನಾವಿಂದು ಕೂಡಿಹೆವು.
ತಡವೇಕೆ ಬಾಯಿನ್ನು ಕೈಚಾಚಿ ಬಿಗಿದಪ್ಪು;
ತಣ್ಪುಂಟು ಮಾಡುವೆನು ಬಲವಾಗಿ ಮುದ್ದಿಟ್ಟು.
ಪ್ರೇಮಾಬ್ಧಿಯಲಿ ಬಿದ್ದು ತೇಲಾಡು; ಲೋಲಾಡು.

ರಾಮ:- ಹಳಹಳಿಸಿ
ಕಳವಳಿಸಿ ತೊಳಲಿರಲಿ ಬಳಲಿರಲಿ
ನಾನೊಲ್ಲೆ ಪ್ರೇಮವನು ತೊರೆದಿಹೆನು.
ವಿಧಿವಶದಿ ನೀನಂದು ಶತೃವಿನಕರದಿಂದ
ಅಪಹೃತಿಸಿ ರಾವಣನ ಏಕಾಂತ, ಸಟಿಯಲ್ಲ
ದಿಟವಹುದು ಹರ್ಮ್ಯಗಳವಾಸ-

ಸೀತಾ:- ಅಲ್ಲಲ್ಲ ವನವಾಸ.

ರಾಮ:- ಇರಲಿರಲಿ ನೀನೀಗ ಅನ್ಯಸ್ಪೃಶ್ಯಳ್‌!

ಸೀತಾ:- ನಾನರಿಯೆ.

ರಾಮ:- ಮೋಹಿಸಿದ ದಶಕಂಠ ಸೀತೆಯನು

ಸೀತಾ:- ನಾ ಪಾಪಿಯೇ?

ರಾಮ:- ಕದ್ದೊಯ್ದ ನವನಂದು.

ಸೀತಾ:- ತಪ್ಪಾರದು?

ರಾಮ:- ತಪ್ಪಿಲ್ಲದಿರೆ ನಿನ್ನ ದುರದೃಷ್ಟ.

ಸೀತಾ:- ರಾಮಚಂದ್ರ,
ಪಣದಲ್ಲಿ ನೀಗೆದೆದು, ಸೀತೆಯನು ಕೈ ಹಿಡಿದು,
ಭಾಷೆಯಂ ನೀಕೊಟ್ಟು, ಸುಖದುಃಖಗೊಳಪಟ್ಟು,
ಜಾನಕಿಯ ದಶಕಂಠನೆಳೆದೊಯ್ದು ಮೋಹಿಸಲು,
ಶ್ರೀರಾಮನಲ್ಲದಿರೆ ರಕ್ಷಿಪರು ಬೇರುಂಟೆ?

(ರಾಮನು ಮೌನ)

ಸೀತಾ:- ಜಾನಕಿಯ ತ್ಯಜಿಸಲಿಕ್ಕೆ, ಜ್ವಾಲೆಯಲಿ ದೂಡಲ್ಕೆ
ಘೋರಯುದ್ಧವನಂದು ಪೂಡಿದುದೆ ಶ್ರೀರಾಮ?

ರಾಮ:- ಅಲ್ಲಲ್ಲ, ಕೇಳಿಲ್ಲಿ ವಡವಾಗ್ನಿ ನೊಂದಿಸಲು;
ಶತೃವನು ದಂಡಿಸಲು; ಕ್ಷಿತಿಧರ್ಮ ಪಾಲಿಸಲು.

ಸೀತಾ:- ಅಹುದಹುದು ನಾಬಲ್ಲೆ ಶ್ರೀರಾಮಧರ್ಮ.
ಮಡದಿಯಂ ಬಿಡಲಿಹುದು ಶ್ರೀರಾಮಧರ್ಮ.
ಮಹಿಳೆಯರ ತುಳಿಯುವದು ತಿಳಿದಂತೆ ಹಳಿ-
ಯುವದು ನಿಜಧರ್ಮ, ಶ್ರೀರಾಮಧರ್ಮ!
ಸೀತೆಯಂ ವರಿಸಿದುದು ಸಂಸಾರಧರ್ಮ!
ಕಾಡುಗಳನಲೆಸಿದುದು ಪ್ರಾತಿಜ್ಞ್ಯಧರ್ಮ!
ಸಂಗ್ರಾಮ ಪೂಡಿದುದು ಕ್ಷಾತ್ರಧರ್ಮ!
ಸತಿಯಳನು ತ್ಯಜಿಸುವದು ರಾಜಧರ್ಮ?
ಇರಲಿರಲಿ ಶ್ರೀರಾಮ ನನಗಿರಲಿ ನನ್ನಧರ್ಮ.
ನನಗಾಗಿ, ಭೂಸುತೆಯ ಅನುರಾಗಕಾಗಿ
ಪ್ರೇಮಬಂಧನ ಮಾಳ್ಪ ರಾಜ್ಯವನು ಬಿಡೆಯಾ?

ರಾಮ:- ಪ್ರಜಾಜ್ಞೆಯಿಲ್ಲದಲಾಗದಾಗದು!

ಸೀತಾ:- ಪಟ್ಟದಲಿ ಕುಳಿತಿಲ್ಲ ಪ್ರಜೆಗಳಂ ಕೇಳ್ದಪುದೆ?

ರಾಮ:- ಅಹುದಹುದು ಜನವಾಣಿ, ದೇವವಾಣಿ!

ಸೀತಾ:- ಜನವಾಣಿ ದೇವವಾಣಿಯೆ ರಾಮ?
ಅಂದು ದಶರಥಪ್ರಭುವು ಕಾಡು ದೂಡಲು ನಿನ್ನ,
ಪ್ರಜರೆಲ್ಲ ಕೂಡುತಲಿ, ಕಂಬನಿಯ ಸುರಿಸುತಲಿ,
ಬೇಡೆಂದು, ಬೇಡೆಂದು ಧ್ವನಿಗೈದು ಅಳುತಿರಲು
ಎಲ್ಲಿರ್ದುದಾ ನಿನ್ನ ಪ್ರಜಾವಾತ್ಸಲ್ಯ?
“ಪಿತನವಾಕ್ಯವೆ ನನಗೆ ವೇದನುಡಿ” ಯೆಂದು
ಪ್ರಜೆಗಳನು ಲೆಕ್ಕಿಸದೆ ಕಾನನವ ಸೇರಿದಿಯೋ!!
ನನ್ನೀಗ ಬಿಡಲಿರುವೆ ಜನಪ್ರೇಮಕಾಗಿ?

ಅಕಟಕಟ ಮರೆತಿರ್ದೆ ಜಾನಕಿಯು ಸ್ತ್ರೀಯೆಂದು!
ಪುರುಷರನ್ಯಾಯವನು ಕೋಪವನು, ತಾಪವನು,
ಸೈರಿಸುತ, ಸೈರಿಸುತ, ಸೈರಿಸುತ ನಾರಿಯರು,
ತುಟಿಯೆರಡು ಮಾಡದಲೆ, ವಚನವಂ ಮೀರದಲೆ
ಪಾದಪೂಜೆಯಗೈದು ಶ್ವಾನ ಶೂಕರರಂತೆ
ಜೀವನವ ನಡಿಸಲ್‌ ಸುಗುಣಿಯರು ನಾರಿಯರು.
ಪುರುಷನಂತಿರದಿರಲ್‌ ಕುಲಟೆಯರು ನಾರಿಯರು.
ಅಡಗಿಹುದೆ, ಮಲಗಿಹುದೆ ಭಾರತದಭೂಮಿ?
ಸ್ತ್ರೀಯರನು ಪೂಜಿಸುವ ಪುಣ್ಯ ಭೂಮಿ?
ಇರಲಿರಲಿ ಪ್ರಾಣೇಶ ಅನುರಾಗ ತೋರೋ!

ರಾಮ:- ಬಲುಮೆಯೇತಕೆ ಸೀತಾ?

ಸೀತಾ:- ಸ್ವಾರ್ಥಪರರಾಮ, ಬಲವಾಗಿ ನೀನಿರಲಿ,
ರಾಜ್ಯವದು ಬಲಿತಿರಲಿ, ಸಂಪತ್ತು ಬೆಳೆದಿರಲಿ,
ಜಾನಕಿಯು ದಿಕ್ಕೆಟ್ಟು, ಕಂಗೆಟ್ಟು ನಾಯಾಗಿ
ಅಡವಡನಿ ಅಲೆದಲೆದು ಅಳುತಿರಲಿ ನಿನಗೇನು?
ಎಲ್ಲೆಲ್ಲು ವಿಧಿಯುಂಟು, ಹಕ್ಕುಂಟು ನಿನಗೆ.
ನಾರಿಗೆಲ್ಲಿದೆ ಪ್ರಾಣ? ಅಬಲೆಗೆಲ್ಲಿದೆ ಹೃದಯ?
ಸ್ತ್ರೀಯೆಂದರದುವೊಂದು ಮಕ್ಕಳನು ಹೆರುಯಂತ್ರ.
ಮಲಿನವಾಗುತಲೊಂದು ಮತ್ತೊಂದು ತರಲಿಹರು.
ಮತ್ತೊಂದು ಬೇಡಾಗೆ ಮುನ್ನೊಂದು ತರಲಿಹರು.
ಅಕಟಕಟ ಧಿಃಕಾರ, ಧಿಃಕಾರ ಸ್ತ್ರೀಜನ್ಮಕೆ.
ಇರಲಿರಲಿ ಶ್ರೀರಾಮ ಹೃದಯವನ್ನುವದೇನು?

ರಾಮ:- ಪ್ರಸಕ್ತಿ ಹೃದಯದಿಂ ತೊಲಗಿಹುದು.

ಸೀತಾ:- ವಂಚಕನೆ ರಾಮ,
ಅಣುರೂಪ ಶಂಕೆಯದು ಪುಟ್ಟುತಲಿ ಹೃದಯದಲಿ
ತೊಲಗಿದುದು ನಿನ್ನದದು ಸೀತೆಗಿಹ ಪ್ರೇಮ.
ರಾವಣನು ಮೋಹಿಸಿದ ನಿಜವಹುದು ರಾಮ.
ಕವಿವರರು ನಿಜವಾಗಿ ವರ್ಣಿಸದ ಪ್ರೇಮ.
ಸತಿಸುತರು ಹಳಿಯುತಿರೆ, ಬಂಧುಗಳು ಬೆಂದುತಿರೆ
ಮುನಿವರರು ಶಪಿಸುತಿರೆ, ಲಂಕೆಯದು ದಹಿಸುತಿರೆ
ರುಂಡಗಳು ಈರೈದು ಮುಂಡದಿಂದುರುಳುತಿರೆ
ಚಲಿಸಿದುದೆ ರಾವಣನ ದಿವ್ಯಪ್ರೇಮ?
ನನ್ನನ್ನೆ ಬಯಸಿದನು; ಪ್ರೇಮವನೆ ಕೋರಿದನು.
ಪ್ರೇಮಶೂನ್ಯನೆ ರಾಮ, ಕಲ್ಲೆದೆಯ ರಾಮ,
ನಾರಿ ನಾಯಾಗಿಹಳೆ? ತ್ಯಜಿಸಲ್ಕೆ ವಿಧಿಯುಂಟೆ?
ಇದುನೋಡು ಕುಹಕ ನಿನ್ನನ್ನೆ ತ್ಯಜಿಸುವೆನು.

(ಚಿತೆಯಲ್ಲಿ ಧುಮುಕುವಳು)

ಎಲೆಜಗವೆ, ಎಲೆಜಗವೆ ಇತ್ತೊಮ್ಮೆನೋಡು.
ನಾರಿ ನಾಯಾಗಿಹಳು ಅನ್ಯಾಯನೋಡು.
ಪುರುಷರೀ ಅನ್ಭಾಯ ಬಹುಕಾಲ ಬಾಳ್ವುದೇ?
ಅಬಲೆಯರು ಜಗದೊಳಗೆ ಅಬಲೆಯರೆ ಚಿರಕಾಲ?
ಎಲೆಜಗವೆ, ಎಲೆಜಗವೆ ಮತ್ತೊಮ್ಮೆ ನೋಡು.
ಬುದ್ಧಿಯಿಂ ಜಾಣ್ಮೆಯಿಂ ಒರೆಹಚ್ಚಿ ನೋಡು.
ಸೀತೆಗಿಹ ಪ್ರೇಮಜೊಳು ರಾಮನೋ, ರಾವಣನೋ?
*****

Tagged:

Leave a Reply

Your email address will not be published. Required fields are marked *

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...