Home / ಕವನ / ಕವಿತೆ / ಸರಸತಿ!

ಸರಸತಿ!

ಅರಳಿದ ತಾವರೆಯಲರುಗಳಿರುವ
ವರ ಸರ ತಟದಲಿ, ಕಲ್ಲಿನಲಿ,
ಕರದಲಿ ವೀಣೆಯು ಸರಗೊಡುತಿರಲು,
ಸರಸತಿ! ಮಂಡಿಸಿ ಏಂ ಗೈವೆ?
ಏರು ಬಸಂತನ ಬೇಟವ ನೋಳ್ಪೆಯೊ?
ನೀರಜಕೆರಗುವ ಪರಮೆಗಳ
ಸುರ-ಸುಮಧುರ ಸುಗೀತವ ನೀನು
ಹೀರುತಲಿಹೆಯೋ ಕಿವಿಯಿ೦ದ?
ಬಳಿಯಲಿ ನುಡಿಯುವ ಗಿಳಿಗಳ ಸರಕೆ,
ಉಲಿಯುವ ಪಿಕಗಳ ಇ೦ಚರಕೆ,
ತಲೆಯಲ್ಲಾಡಿಸಿ, ತಾಳವನಿಕ್ಕುತ,
ಒಲಿದಿಹೆಯೇನೋ ಶಾರದೆಯೆ?
ಆರನು ನೋಡುವೆ ಎದೆ ಬಿಡದಿಂತು?
ಆರನು ನೋಡುತ ನಗುತಿರುವೆ?
ಹಾರದೆ ಮೇಲಕೆ, ನೀರೊಳು ತೇಲುವ
ಚಾರು ಮರಾಲವನೀಕ್ಷಿಪೆಯೊ?
ತಿಳಿಯಿತು! ತಿಳಿಯಿತು! ನಿನ್ನಯ ಬಗೆಯು:-
ಸಲಿಲದ ಕಮಲದಿ ನಿ೦ತಿರುವ
ಲಲಿತಾ ಲಕ್ಷ್ಮಿಯ ನೋಡುತ, ಬಳಿಕ
ಮೆಲುನಗೆ ಬೀರುವೆ ಮೊಗದೊಳಗೆ-
ಸರಸತಿ! ನಿನ್ನಯ ಕುಡಿಗಣ್ಣೋಟ
ಕಿರುನಗೆ ತೋರ್ಪುದವಜ್ಞೆಯನು:-
ಸರಿಸದಿ ಸರಸಿಜದಲರಲಿ ಚಲಿಸದೆ
ಮೆರೆಯುವ ಸಿರಿ ರಾಣಿಯ ಕುರಿತು.

“ತಾನು ಪತಿವ್ರತೆ;- ಒಬ್ಬಗೆ ಒಲಿದರೆ
ಏನವನನು ನಾ ತೊರೆಯುವೆನೆ?
ಕಾಣಿರಿ ಲಕ್ಷ್ಮಿಯ ಚಂಚಲ ಚಿತ್ತವ;-
ಮಾನಿಪಳಾರನು ಸ್ಥಿರವಾಗಿ?”
ಎಂದಪಹಾಸವ ವ್ಯಂಜಿಸುತಿಹೆಯೊ-
ಸುಂದರಿ! ಕಿರುನಗೆ ರೂಪದಲಿ?
* * * *

“ಇಂದಿರೆ ವಾಸಿಸ ತಾಯ್ವನೆ ತಾವರೆ-
ಯಂದವನೆಲ್ಲರು ದಿಟ್ಟಿಸಿರಿ:-
“ಅವಳಾ ಚಂಚಲ ವರ್ತನೆಯನು ತಾ-
ನವನೀತಲಕದು ನುಡಿವ೦ತೆ,
ದಿವಸವದೊಂದರೊಳಲರುತ, ಮುಗುಳುತ,
ತವೆ ತೋರ್ಪದು ಬಹುರೂಪವನು.
“ನನ್ನಾಸನವದು ಕರಿಕಲ್ಲಾದರು,
ನುಣ್ಣಗೆಯಿಹುದತಿ ಸ್ಥಿರವಾಗಿ
ಕಣ್ಣಿಗನುತ್ತಮವಾದರು, ಪಾಸರೆ
ಭಿನ್ನವದಾಗದು!- ಪ್ರಕೃತಿಯಿದು.
“ಆವುದು ಸ್ಥಿರವದು?- ಕಲ್ಲೋ ಕಮಲವೊ
ನೀವೇ ಹೇಳಿರಿ” ಎಂಬಂತೆ
ಸವನಿಸಿ ನಲ್ಮೊಗದಲಿ ದರಹಾಸವ-
ನವಲೋಕಿಪೆಯೇನಿಂದಿರೆಯ?
ಎಲ್ಲರಪೇಕ್ಷಿಪ ಧನದಧಿ ದೇವಿಯು
ಫುಲ್ಲಾಕ್ಷನ ನಚ್ಚಿನ ಮಡದಿ
ಕಾಲೆಡೆ ನಿಂತಿಹಳೆಲೆ ಸರಸತಿಯೆ!
ಮೇಲೆನಿಪರದಾರ್‌ ನಿನ್ನಿಂದೆ:
ವಾಣಿಯೆ! ನಿನ್ನಯ ವೀಣೆಯ ಸುಸ್ವರ
ಗಾನವನಾಲಿಸ ನವಿಲಾಗಿ
ತನ್ನೆದೆಯರಿವನು ಸ೦ತಸದಿಂದಲಿ
ಧನ್ಯವದಾಗಿಸೆ ಬಯಸದರಾರ್‌?
*****
೧೯೩೬

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...