ಓ! ತಾಯಿ, ಮಾತಾಯಿ ಮೇಲೆತ್ತು ಮುಖವನ್ನು
ದೈನ್ಯ ದೃಷ್ಟಿಯಕಂಗಳನು ಮಿಟುಕಿಸೌ! ಕವಿಯ
ಕಣ್ತೆರೆದು ನೊಡಿಲ್ಲಿ; ಆವ ಶತಮಾನಗಳ
ಲಾಭ ಹಾನಿಯ ಲೆಕ್ಕವನು ಗುಣಿಸಿ ತಣಿಯುತಿಹೆ!
ಶಿರಬಾಗಿದಾರಿಗೌ? ಅಚಲಳಾದುದಕೇನು-
ಕಾರಣಂ? ಮೊಗದೊಳೇಕೀ ಚಿಂತೆ? ಸಂಸಾರ
ನಿಸ್ಸಾರ ಮೆಂಬೆಯಾ ಮುತ್ತಜ್ಜಿ? ಅಲ್ಲದೊಡೆ-
ಮೊಮ್ಮಗನ ಮದುವೆಯಾಗಿಲ್ಲವೇ? ಮಗಳ ಮಗು
ಮಡಿಯಿತೆ? ನೆರೆಯವರು ಮುನಿದರೇ? ಸಗ್ಗವನು-
ಸೇರಿರುವ ನಲ್ಲ ನೆನಪಾದನೇ? ಮೈ ಬಟ್ಟೆ-
ಏಕಮ್ಮ ಹರಿದಿಹುದು? ನಿನ್ನ ಸುಖ ದುಃಖಗಳ-
ಕಂಡು ಮರುಗುವರಿಲ್ಲೇ? ಟೊಂಕ ಬಾಗಿದ ಮುದುಕಿ
ಎನಿತು ದಿನ ಕುಳಿತಿರುವಿ? ಮೈ ನೋಯದೇನಮ್ಮ?
ಹೂಂಹೇಳು -ಇನಿತೇಕೆ ಸಂಕೋಚ ನಾ ನಿನ್ನ
ಮಗನೆಂದು ತಿಳಿ ತಾಯಿ.
ಅಯ್ಯೋ, ಬಾಳೇ ಹಾಳು
ಮುದುಕಿ ಮುಗಿಸದ ಕತೆಯ ಹೇಳುವಳು; ಇದು ನಿಜವೆ?
ಸುಳ್ಳೆ ಮೈವೆತ್ತಂತೆ ಇವಳ ಕತೆ; ಕನ್ನಡಿಯ-
ಗಂಟಿನೊಲು ಸಟೆಯೆಂದು ಹೀಗಳಿಸದಿರು ತಮ್ಮ:
ಅರವತ್ತು ವರುಷಗಳ ಬೇಸಿಗೆಯ ಬಿಸಿಲನ್ನು
ನನ್ನ ಮೈ ಕಾಸಿಹುದು; ಆದೊಡೇಂ ಇನಿತು ದಿನ
ಬದುಕಿದುದು ವ್ಯರ್ಥಮಾಯ್ತೈ ಮಗುವೆ ಇನ್ನಾದ
ರೂ ಮರಣ ಬಂದಡಸಬಾರದೇ ಸಾಕು ಸಾ-
ಕೀ ಬಾಳು ನಾಯಿಗಿಂತಲು ಕೀಳು.
ಎನಿತು ನೊಂ
ದಿಹೆ ತಾಯೆ? ಇನಿತೇಕೆ ಬಾಳನ್ನೆ ಬೀಳುಗಳೆ
ಯುವೆಯಜ್ಜಿ? ಹೇಳಮ್ಮ ನಿನ್ನ ಕತೆ ಕೇಳುವೆನು
ಮನಗೊಟ್ಟು, ಮುಚ್ಚು ಮರೆ ಇಲ್ಲದಲೆ ಎಲ್ಲವನು
ಹೇಳಮ್ಮ ನನ್ನಮ್ಮ ಗೌರಮ್ಮ!
ಮಗುನಿನ್ನ
ಮನಮೆನಿತು ಮೃದು ನಿನ್ನ ನುಡಿಯೆನಿತು ಸಾತ್ವಿಕಂ?
ಮರುಗುವರ ಕಂಡು ನೀನೇಕಿಂತು ಮರುಗುವೆಯೋ?
ಚಿಣ್ಣ ನೀನೆಲ್ಲಿ ಈ ಧರ್ಮ ಬುದ್ಧಿಯಕಲಿತೆ?
ಬಾಳು ನೀ ಬಹುಕಾಲ! ನಿನಗೆ ಮಂಗಳಮಕ್ಕೆ
ಹೇಳಮ್ಮ ಕತೆಯ ನೀನದನೆ ಮರೆಯಿಸುತಿರುವೆ!
ನನ್ನ ಕತೆಯೇನು ಸವಿ? ಪಾಂಡವರ ಕೌರವರ
ಯುದ್ಧದಿತಿಹಾಸವೇ? ರಾಮ ರಾವಣನನ್ನು
ಸಂಹರಿಸಿ ಸೀತೆಯನು ಕರೆತಂದು ಪಟ್ಟವನು
ಏರಿ ಮೆರೆದಿಹ ಕತೆಯೇ? ನಳನಹುಷ ನರಪತಿಯ
ಕತೆಯೇನು ಹೇಳಲಿಕೆ? ಶ್ರೀಕೃಷ್ಣ ಪರಮಾತ್ಮ
ಗೈದಲೀಲೆಯದಿದೆಯೇ? ಏನಿಲ್ಲ ಎಂತಿಲ್ಲ
ಕತೆಯೆಲ್ಲಿ ಬಂತು ಮಗು?
ಎನಿತು ಓದಿಹೆಯಮ್ಮ?
ಭಾರತವ ಬಲ್ಲೆ; ರಾಮಾಯಣವ ನರಿತಿರುವೆ
ಶ್ರೀಕೃಷ್ಣನವತಾರ ಕಂಡುಕೊಂಡಿಹೆ ನೀನು
ಸಾಹಿತ್ಯ ಸಂಸ್ಕೃತಿಯ ತೂಗಿ ನೋಡಿಹೆ ನೀನು
ಇತಿಹಾಸವೂ ಗೊತ್ತು; ಎಲ್ಲಮ್ಮ ಇನಿತೆಲ್ಲ
ಓದಿಕೊಂಡುದು ಅಜ್ಜಿ?
ಓದು ಬರೆ ಕಲಿತಿಲ್ಲ
ಶಾಲೆಯನು ಕಂಡಿಲ್ಲ; ನಿನ್ನಂಥ ತಿಳಿದವರು
ಹೇಳಿದುದ ಕೇಳಿದೆನು: ನಾನು ತಿಳಿದುದೆ ನನಗೆ
ತಿಳಿಯದಂತಾಗಿಹುದು
ಬಲು ಮಾತುಗಾತಿ ನೀ
ಹೇಳಮ್ಮ ಹೇಳು ಕತೆ
ಹೇಳಲೇ ಬೇಕೇನು?
ಎಷ್ಟುಸಲ ಕೇಳುವುದು ?
ಮುನಿಯದಿರು ಮುನಿಯದಿರು
ಕೋಪವಲ್ಲವೆ ಪಾಪ? ಇರಲಿ ಹೇಳುವೆ ಕೇಳು:
ಚೆನ್ನೂರು ನನ್ನೂರು: ಅದು ಹಳ್ಳಿ; ಬಲು ಕಿರಿದು
ಜನ ಸಂಖ್ಯೆ ಗೊತ್ತಿಲ; ಮನೆಗಳನ್ನೆಣಿಸಿಲ್ಲ
ಚೆನ್ನೂರ ಪಡುವಣಕೆ ಮುಗಿಲನ್ನೆ ಮುದ್ದಿಡುವ
ಪರ್ವತಶ್ರೇಣಿಯಿದೆ; ಬೆಟ್ಟದಲಿ ಕಟ್ಟಡವಿ
ಬೆಳೆದು ನಿಂತಿದೆ ಸೊಕ್ಕಿ; ಗಿರಿವರನ ಚರಣದಲಿ
ಪರಮ ಪಾವನೆ ಪದ್ಮೆ ಪರಿದೋಡುತಿಹಳಲ್ಲಿ
ಜುಳು ಜುಳನೆ ಪರಿವ ತಿಳಿ ನೀರಿನಲಿ ಗಿಡಬಳ್ಳಿ
ಇಣುಕುವುವು ತಂತಮ್ಮ ನೆಳಲನೇ ನಿರುಕಿಸುತೆ
ಮೈಮರೆತು ನಲಿಯುವುವು. ಸಂಧ್ಯಾರುಣದ್ಯೋತಿ
ಮೂಡಿಬರೆ ಮೂಡಲಲಿ ಚೆನ್ನೂರು ಹೊನ್ನಿನಲಿ
ತೇಲಿದಂತೆನಿಸುವುದು.
ಊರ ಮುಂಬದಿಗಿರುವ
ಹೆಗ್ಗೆರೆಯ ತಡಿಯಲ್ಲಿ ತೆಂಗಾಯ ಮರಗಳಿವೆ
ಎಲ್ಲೆಲ್ಲು ಸೌಂದರ್ಯ ಸೂಸುತಿದೆ ಕಣ್ಮನವ
ತಣಿಸುತಿದೆ; ಕವಿಯನ್ನು ಕೈಮಾಡಿ ಕರೆಯುತಿದೆ.
ನನ್ನೂರು ಚೆನ್ನೂರ ಗೌಡಿಕೆಯು ನನ್ನ ಮಗ
ಚೆನ್ನನಿಗೆ ಸೇರಿದುದು; ಚೆನ್ನನೆಂಥವಗೊತ್ತೇ?
ಚಿನ್ನದಂತಹ ಬಣ್ಣ; ನೋಡಲಿಕೆ ಕಾಮಣ್ಣ!
ಚೆನ್ನ, ಚೆನ್ನಪ್ಪ, ಚೆನ್ನಿಗರಾಯ, ಚೆನ್ನಯ್ಯ
ಚಿನ್ನಬಾ, ರನ್ನಬಾ ಎನುತಿದ್ದೆ ದಿನದಿನವು
ಚೆನ್ನನಿಗೆ ಹದಿನಾರು ವರುಷಗಳು ತುಂಬುತಲೆ
ಹೊನ್ನಿಯನು ಕರೆತಂದು ಕಂಕಣವ ಕಟ್ಟಿಸಿದೆ
ಚಿನ್ನಕ್ಕೆ ರನ್ನವನು ಕುಂದಣಿಸಿದಂತಾಯ್ತು!
“ಎಂಥಜೊತೆ! ಬಲು ಸೊಗಸು ಗೌರಮ್ಮ ಗೌರವವ
ಪಡೆದೆ; ಚೆನ್ನನಿಗೆ ಚಿನ್ನವ ತಂದೆ ಮಾತಾಯಿ!”
ಎಂದು ಜನ ಹೊಗಳಿದುದು ಮನವಾರೆ, ಮದುವೆ ಬಲು
ಮುದದಿಂದ ಮುಗಿದಾಯ್ತು; ಮುಂದೆ ತಿಂಗಳು ಕಳೆದು
ನಾಲ್ಕು ದಿನವಾಗಿತ್ತು ಹೊನ್ನವ್ವ ಚೆನ್ನೂರ
ಚೆನ್ನನಲಿ ಬೆರೆತಾಗ! ಅಮೃತವೇ ಬುವಿಗಿಳಿದು
ಬಂದಂತೆ ಚೆನ್ನನಾ ಸಂಸಾರ ಕಂಡಿತ್ತು
ಅದೊಡೇಂ? ಒಲ್ಲೆ ಮಗು ನಾನೊಲ್ಲೆ ಮುಂದಾದ
ಕತೆಯ ಪೇಳೆನು ಕ್ಷಮಿಸು! ತುಂಬಿಬರುತಿದೆ ದುಃಖ
ಏನಮ್ಮ, ಏನಾಯ್ತು? ತಡೆ ಗಾಸಿಗೊಳಬೇಡ
ಪೇಳು ಮುಂದೇನಾಯ್ತು!
ಇಪ್ಪತ್ತುವರುಷಗಳ
ಒಂದೊಮ್ಮೆ ಚೆನ್ನೂರು ಪ್ಲೇಗಿಗಾಹುತಿಯಾಯ್ತು
ಆ ಹಾಳು ಬೇನೆಯಲಿ ಚೆನ್ನನೂ ಹೊನ್ನಿಯೂ
ತಿರುಗಿ ಬಾರದ ಶೂನ್ಯ ಬರಿ ಶೂನ್ಯ ದಾರಿಯಲಿ
ಮೈಮರೆತು ಸಾಗಿದರು; ಅಯ್ಯೋ ಅಯ್ಯೋ ಸಾವು
ಎನಿತು ದಾರುಣ ಮಗುವೇ! ಹೃದಯವೇ ಬೆಂದಾಯ್ತು!
ಭೀತಿ ಹೆಚ್ಚಿತು ಮನಕೆ; ಶಾಂತಿ ಹಾರಿತು ಎತ್ತೋ!
ಹಾಗು ಹೀಗೂ ಮಾಡಿ ನೂಕಿದೆನು ಬಾಳನ್ನು
ಸಾವು ಬಂದಡಸಿದರೆ ಸ್ವಾಗತವನೀಯುವೆನು
ಆದೊಡೆಲ್ಲವು ವ್ಯರ್ಥ; ಜಗದ ನೀತಿಯೆ ಬೇರೆ
ಬಯಸದುದು ಸಿಕ್ಕುವುದು; ಬಯಸಿದುದು ಇಲ್ಲಿಲ್ಲ!
* * *
ಮುದುಕಿ ಹೇಳಿದ ಕತೆಯು ಇಲ್ಲಿಗೇ ಮುಗಿದಾಯ್ತು.
*****
ಬೆಂಗಳೂರು : ೧೯೪೧








