ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು. ಅವರು ಇಡಿಯರಾತ್ರಿ ನಿದ್ರಯಿಲ್ಲದೆ ಕೆಲಸಮಾಡಿದರು.
ಒಲೆ, ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿಹಾಕಿ ನೀರುಕಾಯಿಸಿ ಎರಕೊಳ್ಳುವುದು. ಒಬ್ಬಿಬ್ಬರು ಕಾಯಿಪಲ್ಯೆ ಸೋಸಿದರೆ, ಮತ್ತೆ ಒಬ್ಬಿಬ್ಬರು ಅಡಿಗೆ ಅ೦ಬಲಿ ಮಾಡಿದರು. ಮಾಡಿದ ಅಡಿಗೆಯನ್ನು ಹೆಡಿಗೆಬುಟ್ಟಿಯಲ್ಲಿ ಓರಣವಾಗಿ ಹೊಂದಿಸಿಟ್ಟರು ಬೇರಿಬ್ಬರು.
ಆ ಏಳು ಜನ ನೆಗೇಣಿಯರಲ್ಲಿ ನಾಗಮ್ಮ ಚಿಕ್ಕವಳು. ಅವಳನ್ನು ಮನೆಯ ಕಾವಲಕ್ಕೆ ಬಿಟ್ಟರು. ಮನೆಮಾರು ಜೋಕೆಯೆಂದು ಹೇಳಿದರು; ಆಕಳ ಕರುವನ್ನು ಬಿಟ್ಟು ಕೊಡುವುದನ್ನೂ ಕಟ್ಟಿಹಾಕುವುದನ್ನೂ ಸೂಚಿಸಿದರು.
ಮಧ್ಯಾಹ್ನದಲ್ಲಿ ಆಕಳ ಕರುವನ್ನು ಬಿಟ್ಟು ಬೇರೆ ಗೂಟಕ್ಕೆ ಕಟ್ಟಬೇಕೆನ್ನುವಷ್ಟರಲ್ಲಿ ಅದು ರಾಜಬೀದಿಗೆ ಹೋಗಿಬಿಟ್ಟಿತು. ಅದನ್ನು ಅಟ್ಟಿಕೊಂಡು ಹೊರಟ ನಾಗಮ್ಮ ಪಟ್ಟಸಾಲೆಯ ಶೆಟ್ಟಿಯವರ ಮನೆಯ ಮುಂದೆ ಹಾದು ಬರುವಾಗ ಕೇರಿಯಲ್ಲಿ ಸಂಧಿಸಿದ ಶೆಟ್ಟಿಯು ಆಕೆಯನ್ನು ಕಂಡನು. ಆಕೆಯೊಡನೆ ಆತನ ಮನಸ್ಸೂ ಹಿಂಬಾಲಿಸಿತು. ಏನು ಮಾಡುವುದಿನ್ನು?
ಶೆಟ್ಟಿ ಲಗುಬಗೆಯಿ೦ದ ಮನೆಗೆ ಹೋದವನೇ ಹಾಸಿಕೊಂಡು ಮಲಗಿಬಿಟ್ಟನು. “ತಲೆನೋವೇ, ಹೊಟ್ಟಿನೋವೇ” ಎಂದು ತಾಯಿ ಕೇಳಿದರೆ – “ಯಾವುದೂ ಬೇನೆಯಿಲ್ಲ ; ಬೇಸರಿಕೆಯಿಲ್ಲ. ಕಳಶೆಟ್ಟಿಯವರ ಸೊಸೆಯಮೇಲೆ ನನ್ನ ಮನಸ್ಸು ಹೋಗಿದೆಯವ್ವ!” ಎಂದು ಹೊಟ್ಟಿಬಿಚ್ಚಿ ಹೇಳಿದನು. ಅದನ್ನು ಸಾಧಿಸುವ ಚಿಂತೆ ತಾಯಿಗೆ ಅಂಟಿಕೊಂಡಿತು. ಅದರ ಯುಕ್ತಿಯೂ ಆಕೆಗೆ ಹೊಳೆಯಿತು.
ಅಂದೇ ಸಾಯಂಕಾಲಕ್ಕೆ ಕಲಶೆಟ್ಟಿಯವರ ಏಳೂ ಜನ ನೆಗೇಣಿ ಮಕ್ಕಳಿಗೆ ಮುತ್ತೈದೆತನದ ಊಟಕ್ಕೆ ಹೇಳಿಸಿದರು, ಪಟ್ಟಸಾಲೆಯ ಶೆಟ್ಟರು. ಸಾಯಂಕಾಲಕ್ಕೆ ಅವರೆಲ್ಲ ಬಂದರು. ಗಂಧ, ಕುಂಕುಮ, ಉಡಿಯಕ್ಕಿಗಳಿಂದ ಅವರನ್ನು ಸತ್ಕರಿಸಿದ ಬಳಿಕ ಉಣಬಡಿಸಲಾಯಿತು. ಚಿಕ್ಕವಳಾದ ನಾಗಮ್ಮನ ಎಡೆಯಲ್ಲಿ ನೊಣಹೊಡೆದು ಬೇಕೆಂದೇ ಬೆರೆಸಿದರು. ಉಂಡೆದ್ದು ಎಲೆ ಅಡಿಕೆ ತೆಗೆದುಕೊಳ್ಳುವ ಹೊತ್ತಿಗೆ ನಾಗಮ್ಮನಿಗೆ ಹಿಂದಕ್ಕೆ ಮುಂದಕ್ಕೆಂದರೆ ವಾಂತಿ-ಭೇದಿ ಆಗತೊಡಗಿತು. ಅಷ್ಟರಲ್ಲಿ ತುಸು ರಾತ್ರಿಯೇ ಆಗಿದ್ದರಿಂದ ಇನ್ನುಳಿದ ಆರೂ ಜನ ನೆಗೇಣಿಯವರನ್ನು ಕಳಿಸಿಕೊಡುವಾಗ – “ನಾಗಮ್ಮನು ತುಸು ವಿಶ್ರಾಂತಿ ತೆಗೆದುಕೊಳ್ಳಲಿ ಮುಂಜಾನೆ ಬರುವಳು” ಎಂದರು.
ರಾತ್ರಿಯ ಸಟ್ಟ ಸರಿಹೊತ್ತು. ಶೆಟ್ಟಯು ನಾಗಮ್ಮನ ಮೈಮುಟ್ಟ ಕೈಮುಟ್ಟ ಹೋಗತೊಡಗಿದನು. ಆ ಸಂದರ್ಭದಲ್ಲಿ ನಾಗಮ್ಮನು ತನ್ನ ಕೊರಳೊಳಗಿನ ಪುತ್ಥಳೀಸರವನ್ನು ಬೇಕೆಂದಲೇ ಹರಿದು ಚಲ್ಲಾಡಿದಳು. ಅಲ್ಲದೆ “ನಮ್ಮತ್ತೆ ಬಯ್ಯುತ್ತಾಳೆ ಮೊದಲಿದನ್ನು ಪವಣಿಸಿಕೊಡಿರಿ” ಎಂದು ಛಲ ಹಿಡಿದಳು. ಶೆಟ್ಟಿ ಅದೇನು ಮಹಾಕೆಲಸ ಎ೦ದು, ಪುತ್ಥಳೀಸರವನ್ನು ಪವಣಿಸತೂಡಗಿದನು. ಆತನು ಮುಂದೆ ಪವಣಿಸಿದಂತೆ, ಆಕೆ ಹಿಂದಿನದನ್ನು ಮೆಲ್ಲನೆ ಉಚ್ಚಲು ತೊಡಗಿದಳು. ಅಷ್ಟರಲ್ಲಿ ನಸುಕುಹರಿಯಿತು.
“ಕಾಲುಮಡಿದು ಬರಬೇಕು. ಬಾಗಿಲು ತೆಗೆಯಿರಿ” ಎಂದಳು ನಾಗಮ್ಮ.
“ಭಾಷೆಕೊಟ್ಟು ಹೋಗು” ಎಂದನು ಶೆಟ್ಟಿ.
ಎದೆಯ ಮೇಲಿನ ಸೆರಗಿನ ಚುಂಗನ್ನು ಆತನ ಕೈಗಿತ್ತು ಮೆಟ್ಟುಗಟ್ಟೆ ಇಳಿಯುತ್ತ ಒಂದೊಂದು ನಿರಿಗೆ ಉಚ್ಚಿದಳು. ನಾಲ್ಕು ಸೋಪಾನಗಳನ್ನಿಳಿದು ಸೀರೆಯ ಕೆಳ ಸೆರಗನ್ನು ಅಂಗಳದಲ್ಲಿ ಕಟ್ಟಿದ ಎಮ್ಮೆಯ ಕೋಡಿಗೆ ಸಿಕ್ಕಿಸಿದವಳೇ ತನ್ನ ಮನೆಯತ್ತ
ಧಾವಿಸಿದಳು.
“ಅತ್ತೆವ್ವ ಅತ್ತೆವ್ವ ಬಾಗಿಲು ತೆಗೆಯಿರಿ” ಎಂಬ ದನಿ ಕೇಳಿ, ಒಳಗಿನವರು ಕೇಳಿದರು – “ಇಂಥ ಕತ್ತಲು ರಾತ್ರಿಯಲ್ಲಿ ಬಂದ ನೀನು ದೆವ್ವವೋ ಭೂತವೋ? ಏನಿರುವಿ?”
“ದೆವ್ವಲ್ಲ ಭೂತವೂ ಅಲ್ಲ. ಅತ್ತೆ, ನಾನು ನಿನ್ನ ಚಿಕ್ಕ ಸೊಸೆ ಎನ್ನಲು ಅತ್ತೆ ಓಡಿಬಂದು ಬಾಗಿಲು ತೆರೆದಳು.
“ಹೀಗೇಕೆ” ಎಂದು ಕೇಳಲು ನಡೆದ ಸಂಗತಿಯನ್ನೆಲ್ಲ ನಾಗಮ್ಮ ಅತ್ತೆಯ ಮುಂದೆ ವಿವರಿಸಿದಳು. –
ಪಟ್ಟಸಾಲೆಯ ಶೆಟ್ಟಿಯ ಕೈಗೆ ಬಂದರೂ ಬಾಯಿಗೆ ಬರಲಿಲ್ಲ, ಆ ಜಂಬುನೀರಲ ಹಣ್ಣು.
*****
ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು