ಕವಿತೆ ಬರೆಯುತ್ತೇನೆ
ಸಂಘರ್ಷದ ಹಾದಿಯಲಿ
ನೋವಿನ ಎಳೆ ಎಳೆಗೆ
ಚೀತ್ಕಾರದ ಧ್ವನಿಗಳಿಗೆ
ಮಾದ್ಯಮ ಹುಡುಕುತ್ತೇನೆ
ನಾನು ಇದ್ದುದ್ದಕ್ಕೆ
ಸಾಕ್ಷಿ-ಪುರಾವೆಗಳ
ಒಂದೊಂದೇ ದಾಖಲಿಸುತ್ತೇನೆ
ಗೋರಿಯಿಂದ ಎದ್ದೆದ್ದು ಬರುವ
ಪ್ರಶ್ನೆಗಳಿಗೆ ಉತ್ತರ ಹುಡುಕುತ್ತೇನೆ
ಭೂಮಿಯಲಿ ಬೇರುಗಳ
ಬಿಳಲುಗಳ ಭದ್ರಗೊಳಿಸಿ
ನೆಲೆಯ ಕಾಣಲು
ದಾರಿ ಹುಡುಕುತ್ತೇನೆ.
ಮತ್ತೆ ಮತ್ತೆ ಬರೆಯುತ್ತೇನೆ
ಹೆಣ್ಣಿನ ನೋವುಗಳು
ನಿಟ್ಟುಸಿರುಗಳ ಅವುಚಿಕೊಳ್ಳುತ್ತ
ಅಸಹಾಯಕ-ಹಸಿವಿನಿಂದ ಆರ್‍ತತೆ
ದಯನೀಯ ಧ್ವನಿಯಿಲ್ಲದ
ಸ್ಥಿತಿಗಳ ಬಗ್ಗೆ
ಧ್ವನಿಯಾಗಿ ಹೊರಹೊಮ್ಮದೇ
ಕೊರಳಲೇ ಇಂಗಿದ ಹಾಡುಗಳ ಬಗ್ಗೆ
ವಾಸ್ತವಕ್ಕಿಳಿಯದೇ ಕತ್ತಲ್ಲಲೇ
ಕರಗಿದ ಕನಸುಗಳ ಬಗ್ಗೆ
ಅರಳಿ ಘಮಘಮಿಸದೇ
ಕಮರಿ ಹೋದ ಹೂವುಗಳ ಬಗ್ಗೆ.
ಸಾಕ್ಷಿ ಪುರಾವೆಗಳ ಹುಡುಕುತ್ತೇನೆ
ಮತ್ತೆ ಮತ್ತೆ ಬರೆಯುತ್ತೇನೆ
ಸಂಘರ್‍ಷದ ಹಾದಿಯಲ್ಲಿ
ನೋವಿನ ಎಳೆ ಎಳೆಗೆ
ಚಿತ್ಕಾರದ ಧ್ವನಿಗಳಿಗೆ
ಮಾಧ್ಯಮ ಹುಡುಕುತ್ತೇನೆ.
*****