ಕಾಸ್ತಾರರ ಮುಖಂಡ ಹಕೀಂ ಬಂದು ಸಲಾಂ ಹೊಡೆದು ನಿಂತನು.
” ಏನೋ ಬಂದೆ ಹಕೀಂ!”
“ಏನಿಲ್ಲಾ ಖಾವಂದ್ ! ನಾಲ್ಕು ಕುದುರೆ ಅಲ್ಲಿಗೆ ಹೊರಡ ಬೇಕು ಅಂತ ಅಪ್ಪಣೆ ಆಯ್ತಂತೆ. ಯಾವುದು ಯಾವುದು ಅಂತ ಅಪ್ಪಣೆ ಅಂತ ಬಂದೆ ಖಾವಂದ್ ! ”
“ಒಂದು ಜೊತೆ ಗಾಡಿ ಕುದುರೆ ಅದೂ ಆ ಭಾರಿ ಕರೀ ಕುದುರೆಗಳು. ಅವು ಬೇಕೇ ಬೇಕು. ನಾವು ಕ್ಯಾಂಪಿನೊಳಕ್ಕೆ ಸಾರೋಟಿನಲ್ಲಿ ಹೋಗುತ್ತಿದ್ದರೆ, ನೋಡೋರ ಕಣ್ಣೆಲ್ಲ ಕುದುರೇನೆ ನೋಡುತಿರಬೇಕು. ಹೌದೋ ಅಲ್ಲವೋ? ”
“ಬರಾಬರ್ ಖಾವಂದ್ ! ಹಂಗೇ ಇರಬೇಕು. ?
“ಆಮೇಲೆ ಬೇಟೆಗೆ ಹೋಗುವಾಗ ಯಾವುದರ ಮೇಲೆ ಹೋಗೋದು? ”
“ಅಪ್ಪಣೆ ಆದಕ್ಕೆ ಸುರಾ, ರಾಣಿ, ಎರಡೂ ಭೇಷಾದ ಕುದುರೆ ಖಾವಂದ್! ಆದರೆ ರಾಣಿ ನೋಡಿ ಮಹಾರಾಜಾ ಸಾಹೆಬ್ರು ನಜರ್ ಹಾಕಿದರೆ, ಖಾವಂದ್ರಿಗೆ ಹೆಂಗಾಗ್ತದೋ ?”
“ಬಿಡೋ! ದೇಶ ಆಳೋ ದೊರೆ ಬೇಕೂಂದರೆ, ಸಂತೋಷವಾಗಿ ಕೊಟ್ಟು, ನಮ್ಮ ಮೇಲಾಯ್ತು ಅಂತ ಮೀಸೆ ತಿರುಮೋದಲ್ಲವಾ? ”
“ಹಕೀಂಗೆ ತಿಳಿಯದೆಯೇ ಕೈ ಮೀಸೆ ಮೇಲಕ್ಕೆ ಹೋಗಿತ್ತು. ಅಷ್ಟರಲ್ಲಿ ತಾನು ಇರುವುದೆಲ್ಲಿ ಎಂಬುದು ನೆನಪಾಗಿ, ಆ ಕೈಯ್ಯಿಂದ ಹಾಗೆಯೇ ಬಾಯಿ ಮುಚಿಕೊಂಡು, “ಬಾಳಾ ಸರಿ, ಖಾವಂದ್. ಹೌದು ಖಾವಂದ್. ಅದೇ ಅಲ್ಲಾನ ದಯಾ ಅನ್ನೋದು” ಎಂದನು. ಅವನ ಮನಸ್ಸು ಪಟೇಲನನ್ನು ಬಹಳ ಮೆಚ್ಚಿಕೊಂಡಿತು.
“ಹಂಗಾದರೆ ಸುಲ್ತಾನ್, ರಾಣಿ, ಎರಡೂ?”
“ಅಲ್ಲಿ ಭಾರೀ ಷಿಕಾರಿಗಳು ಬರುತಾರಂತೆ. ಅವರ ಮುಂದೆ ನಮ್ಮದೂ ಒಂದು ಕೈ ತೋರಿಸೋಣ ಅಂತ. ನೀನೇನಂತೀ ಹಕೀಂ ?”
” ಖಾವಂದ್, ಈ ಬೆಳೀ ಜನ ಏನಿದ್ದರೂ ಗುಂಡಲ್ಲಿ ಹೊಡೆ ಯೋದೆ ಹೊರ್ತು ಮೊಖಾಮೊಖಿ ಷಿಕಾರಿ ಮಾಡೋಕಾದೀತಾ ಇವರ ಕೈಲಿ? ನಮ್ಮೊರ ಝೋಕು ಅವರಿಗಿಲ್ಲ ಖಾವಂದ್. ತಮ್ಮಂಗೆ ಅವರು ಸುವರ್ ಹೊಡೆದಾರ! ದೊಡ್ಡ ಸಾಹೇಬರಿಗೂ ಹುಜೂರಿಗೂ ಹೇಳಿಕೊಂಡಾದರೂ ಸುವರ್ ಷಿಕಾರಿ ಝೋಕು ತೋರಿಸಬೇಕು ಖಾವಂದ್ ! ಅರೇ ಅಲ್ಲಾ ಅವೊತ್ತು, ಆಹಾಹಾ! ಆ ಕುದುರೆ ಕಾಲೆತ್ತಿಸಿ ಗಿರ್ಕಿ ಹೊಡೆದು ಖಾವಂದ್ ಆಸುನರ್ ಭಾನ್– ಹೊಡೆದದ್ದು, ಅದು ಉರುಳಿ ಬಿದ್ದದ್ದು, ಭಲ್ಲೆ ತಿವಿದದ್ದು – ಆ ಆ, ಅರೇ ಅಲ್ಲಾ! ದುನಿಯಾದಲ್ಲಿ ಇನ್ನೊಬ್ಬರಿಗೆ, ಉಹುಂ, ಹಣೇಲೂ ಬರೀಲಿಲ್ಲ. ಖಾವಂದ್.?
ಹಕೀಂ ಆವೇಶದಲ್ಲಿ ಅವಾಚ್ಯ ನುಡಿದದ್ದು ಪಟೇಲನಿಗೆ ಕೋಪ ಬರಲಿಲ್ಲ. ಅವನು ಆ ಕುದುರೆಯ ಹಾಗೆ ಕಣ್ಣು ಅರಳಿಸಿಕೊಂಡು ಕೈಯೆತ್ತಿ ಕೊಂಡು ಗರ್ರನೆ ತಿರುಗಿದ್ದಂತೂ ಬಹು ಪಸಂದಾಯಿತು.
ಆ ಸುಮ್ಮಾನದಲ್ಲಿಯೇ ಮುಂದುವರೆದು ಪಟೇಲ ಕೇಳಿದ: “ಯಾಕೋ ಹಕೀಂ! ಪೋಲೋದಲ್ಲಿ ಅವರೇನು ಕಮ್ಮಿ ಕುದುರೆ ಕಸರತ್ತು ಮಾಡತಾರೇನೋ?”
“ನೈ ಖಾವಂದ್! ಮಾಫ್ ಕರ್ನಾ ಖಾವಂದ್! ಈ ಬೆಳೀ ಜನಾ ಫೋಲೋ ಚೆನ್ನಾಗಾಡ್ತಾರೆ. ಸಚ್ ಬಾತ್. ಆದರೆ ಮೈಸೂರ್ ಜಂಖಾನಾದಲ್ಲಿ ಬಂದು ಬಂದು ಸಲಾಂ ಹೊಡೆದು ಹೋಗೋಕಿಲ್ವಾ ! ಖಾವಂದ್! ನಮ್ಮ ಮಹಾರಾಜಾ ಸಾಹೆಬ್, ಯುವರಾಜಾ ಸಾಹೆಬ್, ಬನ್ನಿಸಿಂಗ್ಸಾಹೆಬ್, ಪ್ರಿನ್ಸ್ ಗೋಪಾಲ್ ಬುದ್ದಿ ಸಾಹೆಬ್, ನಾಲ್ಕು ಜನ ನಿಂತು ಬಿಟ್ಟರೆ ಹತ್ತೂ ಹನ್ನೆರಡೂ ಗೋಲ್ ಹೊಡೆಯೋಲ್ಲವಾ ಖಾವಂದ್ ! ನಮ್ಮ ಜನ ಯಾಕೋ ಬೆಳೀ ಜನ ಕಂಡರೆ ಹೆದರ್ತದೆ. ಆ ಹೆದರಿಕೇ ಬಿಟ್ಟು ಅಖಾಡಾಕ್ಕೆ ಇಳಿದರೆ ಅವರ ಕೈಲಾದೀತಾ ಖಾವಂದ್??
ನಾಯಕನೂ ಏಕಮನಸ್ಕನಾಗಿ ಕೇಳುತ್ತಿದ್ದನು. ಅವನು ಸುಮ್ಮನಿರುವುದನ್ನು ಕಂಡು ಹಕೀಂನು ಇನ್ನೂ ಮುಂದೆ ಹೇಳಿದ :
” ಖಾವಂದ್ರು ಮಾಫ್ ಮಾಡಬೇಕು. ಹಿಂದೆ ಫ್ರೇಸರ್ ಸಾಹೆಬ್ರು ಇದ್ದಾಗ ನಮ್ಮ ಮಹಾರಾಜಾ ಸಾಹೆಬ್ರನ್ನ ಇಂಡಿಯಾ ಎಲ್ಲ ನೋಡೋಕೆ ಸರ್ಕೀಟು ಕರಕೊಂಡು ಹೋಗಿದ್ದರು ಖಾವಾದ್. ಆಗ ಬೀಜಾಪುರಕ್ಕೂ ಹೋದರು. ಅಲ್ಲಿ ನಮ್ಮ ಸುಲ್ತಾನರು ಆಳುತಾ ಇದ್ದಾಗ ಮಾಡಿಸಿದ್ದ ಒಂದು ಕಬ್ಬಿಣದ ಗುಂಡದೆ ಖಾವಂದ್. ಅದನ್ನು ನೋಡಿ ಇದನ್ನು ಯಾರು ಎತ್ತೀರಿ ಅಂದರು ಫ್ರೇಸರ್ ಸಾಹೆಬ್ರು. ಬೆಳೇಜನ ಒಬ್ಬೊಬ್ಬರಾಗಿ ಬಂದು ನೋಡಿದರು. ಕಂಬರ್ ಮಟ್ಟದ ಮೇಲೆ ಎತ್ತೋಕೆ ಯಾರಿಗೂ ಆಗಲಿಲ್ಲ ಖಾವಂದ್.
ಆಗ, ಮಹಾರಾಜಾ ಸಾಹೆಬ್ ಪ್ರಿನ್ಸ್ ಗೋಪಾಲ್ ಬುದ್ದಿ ಸಾಹೆಬ್ ಮೊಕಾ ನೋಡಿದರು. ಅವರು ಮುಂದೆ ಬಂದದ್ದೂ ಏಕದಂ ಎತ್ತಿ ಅದನ್ನು ಅಷ್ಟು ದೂರ ಎಸ್ತೇ ಬಿಟ್ಟರು. ಬೆಳೀ ಜನ ಎಲ್ಲಾ ಬೇಸ್ತು ಬಿದ್ದು ‘ಹುರೆ ಸ್ಯಾಂಡೊ’ ಅಂದು ಬಿಟ್ಟರು ಖಾವಂದ್. ”
ಪಟೇಲನು ಬಾಯಿ ಬಿಟ್ಟು ಕೊಂಡು ಕೇಳುತ್ತಾ ಇದ್ದವನು ಕೇಳಿದ: “ಇದು ನಿನಗೆ ಹೇಗೆ ಗೊತ್ತು ಹಕೀಂ?
” ಕ್ಯೊಂವ್ ಖಾವಂದ್! ನಮ್ಮ “ಸೋದರಮಾವ ಕರೀಂಖಾನ್ರು ಹುಜೂರು ತಬೇಲೀಲೇ ಅಲ್ವಾ ಇರೋದು ಅವರು ಆಗ ಜೊತೇಲೇ ಇದ್ದರು ಖಾವಂದ್ ! ಅವರ ಸ್ವಂತ ಬಾಯಿಂದ ಕೇಳಿದ್ದು ! ಈಗಲೂ ಹಾಗೇ ನಮ್ಮ ಖಾವಂದ್ರು ಈ ಬೆಳೀ ಜನ ನೋಡದೆ ಇದ್ದದ್ದೇ ತೋರಿಸಬೇಕು ಖಾವಂದ್ ”
ಪಟೇಲನಿಗೆ ಹಕೀಂನ ಮಾತು ಸರಿ ಎನ್ನಿಸಿತು. ಅವರಿಗೆ ನಜರ್ ಕೂಡ ಏನಾದರೂ ಈ ರಾಜ್ಯದ ನೆನೆಪಿರೋ ಅಂಥಾದ್ದೇ ಒಪ್ಪಿಸಬೇಕು ಎನ್ನಿಸಿತು.
ಪಟೇಲನಿಗೆ ಸಂತೋಷವಾದರೆ ಅದರ ಗುರುತಾಗಿ ಏನಾದರೂ ಒಂದು ಕಾರ್ಯವಾಗಬೇಕು. ಸಂತೋಷ ಕಾರಣನಾದವನಿಗೆ ಏನಾದರೂ ಸಂಭಾವನೆ ಸಿಕ್ಕಲೇ ಬೇಕು. ಅದೇ ನಿಯಮ. ಆ ನಿಯಮಕ್ಕೆ ಇಂದೂ ಲೋಪಬರಲಿಲ್ಲ. ಅವನಾಡಿದ ಮಾತಲ್ಲೆಲ್ಲಾ ಒಂದು ಮಾತು ಪಟೇಲನಿಗೆ ಪೂರಾ ಹಿಡಿಯಿತು: ಅದು ಬಾಯಲ್ಲೂ ಬಂತು: ದೀರ್ಘವಾಗಿ ಯೋಚನೆಯಲ್ಲಿದ್ದವನಂತೆ ವಜ್ರ ತೂಕಮಾಡುವ ವ್ಯಾಪಾರಿಯಂತೆ. ಅವನು ಹೇಳಿದನು: “ಹಾಗಂತೀಯಾ ! ಹಕೀಂ ! ನಮ್ಮೊರು ಈ ಬಳಿಯೋರಿಗಿಂತ ಹೆಚ್ಚು ಅಂತೀಯಾ ! ನಾವೇ ಹೆದರ್ಕೊಂಡು ಅವರ್ನ ತಲೇ ಮೇಲೆ ಕೂರಿಸಿಕೊಂಡಿದೀವಿ ಅಂತೀಯಾ ! ಆ!” ಎಂದು ಕೇಳಿದನು.
“ಹೌದು ಖಾವಂದ್ ! ಬರಾಬರ್ ಖಾವಂದ್ ! ರಾಣಿ ಮೊಮ್ಮಗನೂ ಅಲ್ಲೀಗೆ, ಲಂಡನ್ನಿಗೆ, ಹೋದ ಮೇಲೆ, ” ಅರರೇ, ಮಜ್ಜಿಗೇಹಳ್ಳಿ ಪಟೇಲ್ ಪುಟ್ಟಸಿದ್ದಪ್ಪನಾಯಕರು ಸುವರ್ಕು ಕೈಸೆ ಮಾರಾ! ಹಹ್ಹಾ! ‘ ಅಂತ ಬೆರಳು ಕಚ್ಚಿಕೋ ಬೇಡವಾ ಖಾವಂದ್!”
ಆ ಸ್ತುತಿ ತನ್ನ ಕೆಲಸವನ್ನು ಬಲು ಚೆನ್ನಾಗಿ ಮಾಡಿತು. ಹಕೀಂನು ಯಾವೊತ್ತೋ ಒಂದು ದಿನ ಬುಟಾಪೇಟ ಕಟ್ಟಬೇಕು ಅಂತ ಹೇಳಿಕೊಂಡಿದ್ದ ಅಹವಾಲು ಅವೊತ್ತು ಫಲವಾಯಿತು. ಸೊಗ ಸಾದ ಬಿಳೀ ಬೂಟಾಪೇಟ ಒಂದು ಖಾವಂದರಿಂದ ಅಪ್ಪಣೆಯಾಯಿತು.
ಹಕೀಂನು ಆನಂದದಲ್ಲಿ “ಹಂಗಾದರೆ ಸುಲ್ತಾನ್ ರಾಣಿ, ಇಬ್ಬರಿಗೂ ಹುಕುಂ ಆಯ್ತು ಖಾವಂದ್ ” ಎಂದನು. ಪಟೇಲನು “ಹುಂ” ಎಂದನು.
*****
ಮುಂದುವರೆಯುವುದು