ರಾಜಕುಮಾರನ ಹೊತ್ತ ಕುದುರೆಗೆ
ಉಸಿರು ಬಿಗಿಹಿಡಿದು
ನೇರ ಹಾದಿಗೆ ಕಣ್ಣು ಜಡಿದು
ಸುಮ್ಮನೆ ಓಡುವ ಉಮೇದು.
ನೆಲದ ಆಳಗಳನರಿಯದ
ಅದರ ತುಡಿತಕ್ಕೆ ಸ್ಪಂದಿಸದ
ನಿಂತಲ್ಲೇ ಕ್ಷಣ ನಿಲ್ಲದ ಚಪಲಚಿತ್ತ
ಕುದುರೆ ಕಾಲುಗಳಿಗೋ ಚಕ್ರ.
ಒಮ್ಮೆಯೂ ನೆಲಸೋಕದ ರಾಜಕುಮಾರನಿಗೆ
ಸದಾ ಬೀದಿ ನಿರ್ಮಿಸುವ ಕೆಲಸ
ಹಾದಿಯುಳಿಸುವ ಕಾಯಕ
ದಿಗ್ವಿಜಯದ ಮಹಾನ್ ಹಂಬಲ.
ಧೂಳು ಮುಸುಕಿದ ನೆಲದಲ್ಲಡಗಿದ
ಆರ್ದ್ರ ಮಣ್ಣಿನ ಕಂಪು
ಬೆಚ್ಚನೆಯ ಪಿಸುಮಾತು
ಕುದುರೆಗೆ ರಾಜಕುಮಾರನಿಗೇನು ಗೊತ್ತು?
ಈ ನೆಲ ಕಲ್ಲಾದ ಅಹಲ್ಯೆಯಲ್ಲ
ಶಾಪ ವಿಮೋಚನೆಗೂ ಕಾಯುತ್ತಿಲ್ಲ
ಯಾವುದೇ ಆಕ್ಷೇಪಗಳಿಲ್ಲ ಜಗಳವೂ ಇಲ್ಲ
ಎಲ್ಲಕ್ಕೂ ಪಾಠ ಕಲಿಸುವ ಹುಂಬತನವಿಲ್ಲ.
ಓಡುವ ಕುದುರೆಗೆ ರಾಜಕುಮಾರನಿಗೆ
ಪುರುಸೊತ್ತಿಲ್ಲದ ಅವರದೇ ತುರ್ತು
ನೆಲಕ್ಕೂ ಸುಮ್ಮನಿದ್ದೇ ಗೆಲ್ಲುವ ಪಟ್ಟು
ಅದರದರ ಪಾಡಿನಲಿ ಮೀರಬಾರದಲ್ಲ ಹೊತ್ತು!
*****